ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲತೀಫ್‌ ಭಟ್‌ ಎನ್‌ಕೌಂಟರ್‌ಗೆ ಪ್ರತೀಕಾರ: ಹೈದರಾಬಾದ್ ಸ್ಫೋಟಿಸುವುದಾಗಿ ಇಮೇಲ್‌ ಮೂಲಕ ಬೆದರಿಕೆ!

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಲತೀಫ್ ಭಟ್ ಹತ್ಯೆಯಾದ ಬೆನ್ನಲ್ಲೇ, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹೈದರಾಬಾದ್‌ನಲ್ಲಿ 26/11 ಮುಂಬೈ ದಾಳಿಯ ಮಾದರಿಯಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಇಮೇಲ್ ಬಂದಿದ್ದು, ನಗರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಸಂಗ್ರಹ ಚಿತ್ರ

ಹೈದರಾಬಾದ್‌: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಲತೀಫ್ ಭಟ್ (Latif Bhat) ಹತ್ಯೆಯಾದ ಬೆನ್ನಲ್ಲೇ, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹೈದರಾಬಾದ್‌ನಲ್ಲಿ 26/11 ಮುಂಬೈ ದಾಳಿಯ ಮಾದರಿಯಲ್ಲಿ ಸರಣಿ ಬಾಂಬ್ ಸ್ಫೋಟ (Bomb threat) ನಡೆಸುವುದಾಗಿ ಬೆದರಿಕೆ ಇಮೇಲ್ ಬಂದಿದ್ದು, ನಗರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಹೆಸರಿನಲ್ಲಿ ನವೆಂಬರ್ 21 ರಂದು ಹೈದರಾಬಾದ್ ಪೊಲೀಸರಿಗೆ ಈ ಅನಾಮಧೇಯ ಇಮೇಲ್ ಬಂದಿದೆ.

ನಗರದ ಪ್ರಮುಖ ಕಾಚಿಗುಡ ರೈಲ್ವೆ ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾ ಮೇಲೆ ಬಾಂಬ್ ಸ್ಫೋಟ ನಡೆಸಿ, ಕನಿಷ್ಠ 300 ಜನರನ್ನು ಹತ್ಯೆ ಮಾಡುವುದಾಗಿ ಇಮೇಲ್‌ನಲ್ಲಿ ಎಚ್ಚರಿಸಲಾಗಿದೆ. ಆದರೆ, ದಾಳಿಯ ನಿರ್ದಿಷ್ಟ ದಿನಾಂಕ ಅಥವಾ ಸಮಯವನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಬೆದರಿಕೆ ಇಮೇಲ್ ಬೆನ್ನಲ್ಲೇ ಹೈದರಾಬಾದ್ ವಿಶೇಷ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ತುರ್ತು ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ನವೆಂಬರ್ 11 ರಂದು ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿಯಾಗಿದ್ದ ಎಲ್‌ಇಟಿ ಕಮಾಂಡರ್ ಲತೀಫ್ ಭಟ್ ತಲೆಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ನವೆಂಬರ್ 18 ರಂದು ಕುಲ್ಗಾಮ್ ಜಿಲ್ಲೆಯ ಜಂಗಲ್ಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಹೊಡೆದುರುಳಿಸಲಾಗಿತ್ತು. ಈ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೈದರಾಬಾದ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಕಾಚಿಗುಡ ರೈಲ್ವೆ ನಿಲ್ದಾಣ, ಪ್ರಮುಖ ಬಸ್ ನಿಲ್ದಾಣಗಳು, ಹೋಟೆಲ್‌ಗಳು, ಧಾರ್ಮಿಕ ಕೇಂದ್ರಗಳು ಹಾಗೂ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಕೈಗೊಂಡಿವೆ. ತೀವ್ರ ತಪಾಸಣೆಯ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಇಮೇಲ್ ಕಳುಹಿಸಿದ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತವಾಗಿರಬೇಕು ಮತ್ತು ಎಲ್ಲಾದರೂ ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Vishakha Bhat Heggar

View all posts by this author