ಹೈದರಾಬಾದ್, ಫೆ. 26: ತೆಲಂಗಾಣದ (Telangana) ರಾಜಧಾನಿ ಹೈದರಾಬಾದ್‌ನಲ್ಲಿ (Hyderabad) ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹಾಗೂ ಪಾರ್ಟ್-ಟೈಮ್ ಯೂಟ್ಯೂಬರ್ (YouTuber) ಆಗಿದ್ದ 21 ವರ್ಷದ ಬೋನು ಕೋಮಲಿ (Bonu Komali) ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೃದರವಿದ್ರಾವಕ ಘಟನೆ ನಡೆದಿದೆ. ಸಾಯುವ ಕೆಲವೇ ಕ್ಷಣಗಳ ಮೊದಲು ಆಕೆ ವಿದೇಶದಲ್ಲಿದ್ದ ತನ್ನ ತಾಯಿಗೆ "ಐ ಲವ್ ಯೂ ಸೋ ಮಚ್" ಎಂದು ಕಳುಹಿಸಿದ ಸಂದೇಶ ಈಗ ಎಲ್ಲರ ಕಣ್ಣುಗಳಲ್ಲಿ ನೀರು ಬರುವಂತೆ ಮಾಡಿದೆ.
ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣದ ನಿವಾಸಿಯಾದ ಕೋಮಲಿ, ಹೈದರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದರು. 11 ತಿಂಗಳಿನಿಂದ ಅವರು ನಗರದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಿದ್ದರು. ವಿದ್ಯಾಭ್ಯಾಸದ ಜತೆಗೆ ಅವರು ಯೂಟ್ಯೂಬ್‌ನಲ್ಲಿ ಜೀವನಶೈಲಿ ಮತ್ತು ವೈಯಕ್ತಿಕ ಅನುಭವಗಳ ವಿಡಿಯೊ ಹಂಚಿಕೊಳ್ಳುತ್ತ ಜನಪ್ರಿಯತೆ ಗಳಿಸಿದ್ದರು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸೋಮವಾರ (ಫೆಬ್ರವರಿ 23) ಮುಂಜಾನೆ ಕೋಮಲಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿ ಅವರಿಗೆ ವಾಟ್ಸ್‌ಆ್ಯಪ್ ಸಂದೇಶವೊಂದನ್ನು ಕಳುಹಿಸಿದ್ದರು. "ಐ ಲವ್ ಯೂ ಮಮ್ಮಿ ಸೋ ಮಚ್, ತಮ್ಮನನ್ನು ಚೆನ್ನಾಗಿ ನೋಡಿಕೊ" ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಸತತವಾಗಿ ಕರೆ ಮಾಡಿದರೂ ಮಗಳ ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ತಾಯಿ, ಕೂಡಲೇ ಹೈದರಾಬಾದ್‌ನಲ್ಲಿದ್ದ ಗೆಳೆಯನೊಬ್ಬನಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಲು ತಿಳಿಸಿದ್ದಾರೆ.
ಅಪರಾಹ್ನ 3 ಗಂಟೆ ಸುಮಾರಿಗೆ ಗೆಳೆಯ ಮನೆಗೆ ಬಂದು ಎಷ್ಟೇ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಬಾಗಿಲನ್ನು ಬಲವಂತವಾಗಿ ತೆರೆದು ನೋಡಿದಾಗ ಕೋಮಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಸೀರೆ ಮತ್ತು ಏಣಿಯೊಂದು ಪತ್ತೆಯಾಗಿದೆ.
ಗರ್ಭಿಣಿ ಪತ್ನಿ, ಮೂವರು ಹೆಣ್ಣು ಮಕ್ಕಳ ಗಂಟಲು ಸೀಳಿ ಕೊಂದ ಪಾಪಿ ಪತಿ!
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮ ವೈಫಲ್ಯ ಮತ್ತು ಅದರಿಂದ ಉಂಟಾದ ಮಾನಸಿಕ ಖಿನ್ನತೆಯೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಕೋಮಲಿ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಹ ಯೂಟ್ಯೂಬರ್ ಒಬ್ಬನ ಜತೆ ಗಾಢವಾದ ಸಂಬಂಧದಲ್ಲಿದ್ದರು. ಆದರೆ ಇತ್ತೀಚೆಗೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಸಂಬಂಧ ಕಡಿದುಹೋಗಿತ್ತು ಎಂದು ತಿಳಿದುಬಂದಿದೆ. ಈ ಹಿಂದೆ ಕೋಮಲಿ ಆರು ತಿಂಗಳ ಮೊದಲೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.