ಚೆನ್ನೈ: ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ (karur stampede) ನಾನಾಗಲಿ, ನಮ್ಮ ಪಕ್ಷವಾಗಲಿ ಕಾರಣವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Tamil Nadu Chief Minister Joseph Vijay) ಹೇಳಿದರು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರೂರ್ (Karur) ಗೆ ಭೇಟಿ ನೀಡಿದ ಅವರು ಆ ದಿನ ನಾನು ಪೊಲೀಸರನ್ನು ನಂಬಿದ್ದೆ. ಆದರೆ ಅವರು ಕಾಲ್ತುಳಿತಕ್ಕೆ ನನ್ನನ್ನೇ ದೂಷಿಸಿದರು. ದುರಂತದ ದಿನ ಅವರು ಜನಸಂದಣಿ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯ ವಿಧಾನ ಸಭಾ ಚುನಾವಣೆ ಪ್ರಚಾರಕ್ಕಾಗಿ ಕಳೆದ ವರ್ಷ ಟಿವಿಕೆ ಪಕ್ಷದ ನಾಯಕನಾಗಿ ವಿಜಯ್ ಕರೂರಿಗೆ ಭೇಟಿ ನೀಡಿದ್ದ ವೇಳೆ ಉಂಟಾಗಿದ್ದ ಕಾಲ್ತುಳಿತಕ್ಕೆ ತಮ್ಮ ಪಕ್ಷವೇ ಕಾರಣ ಎಂಬ ಆರೋಪಗಳನ್ನು ಸಿಎಂ ವಿಜಯ್ ತಿರಸ್ಕರಿಸಿದರು.
ಯಾತ್ರೆ ಆರಂಭವಾದ ಕೇವಲ 5 ದಿನಗಳಲ್ಲಿ ಅಮರನಾಥ ಹಿಮಲಿಂಗ ಕರಗಿತೆ? ವೈರಲ್ ಆಯ್ತು ಫೋಟೋ!
ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 41 ಮಂದಿ ಸಾವನ್ನಪ್ಪಿದ್ದರು. ಈ ದುರಂತ ನಡೆದು ಒಂಬತ್ತು ತಿಂಗಳ ಅನಂತರ ಅವರು ಶುಕ್ರವಾರ ಅಲ್ಲಿಗೆ ತೆರಳಿ ದುರಂತದ ದಿನವನ್ನು ನೆನಪಿಸಿಕೊಂಡರು. ಅಲ್ಲದೇ ಈ ದುರಂತದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಮೃತರ ಕುಟುಂಬಗಳ ಸದಸ್ಯರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ ಅವರು, ದುರಂತವು ತನ್ನ ಮೇಲಿನ ಬಹುದೊಡ್ಡ ಭಾರವಾಗಿದೆ. ಅದು ಅಪಾರ ನೋವುಂಟು ಮಾಡಿದೆ. ನಾವು ನಮ್ಮ ಸಹೋದರಿಯರ ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದರು.
ಆ ದಿನ ಜನಸಂದಣಿಯನ್ನು ನಿರ್ವಹಿಸುವುದು ಪೊಲೀಸರ ಜವಾಬ್ದಾರಿಯಾಗಿತ್ತು. ಜನಸಂದಣಿಯನ್ನು ನಿಯಂತ್ರಿಸಲು ನಾನು ಪೊಲೀಸರನ್ನು ನಂಬಿದ್ದೆ. ಆದರೆ ಸಾವಿಗೆ ನನ್ನನ್ನೇ ಹೊಣೆ ಮಾಡಲಾಯಿತು. ಪರಿಸ್ಥಿತಿ ಹದಗೆಡುತ್ತಿದ್ದ ವೇಳೆ ಅವರು ಎಚ್ಚರಿಕೆ ನೀಡುವ ಮೂಲಕ ದುರಂತವನ್ನು ತಪ್ಪಿಸಬಹುದಿತ್ತು ಎಂದರು.
ಕಾಲ್ತುಳಿತದಲ್ಲಿ ಮಡಿದವರಿಗೆ ಗೌರವ ಸಲ್ಲಿಸುವುದಾಗಿ ಘೋಷಿಸಿದ ಅವರು, ಕರೂರಿನಲ್ಲಿ ತಮ್ಮ ಪಕ್ಷವಾದ ಟಿವಿಕೆ ಪರವಾಗಿ ಸ್ಮಾರಕವನ್ನು ನಿರ್ಮಿಸಲಾಗುವುದು. ಕರೂರ್ ಎಂದಿಗೂ ನನ್ನ ಹೃದಯದಲ್ಲಿರುತ್ತದೆ ಎಂದ ಅವರು, ಕರೂರಿನಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗುವುದನ್ನು ತಡೆಯಲು ಪ್ರಯತ್ನಿಸಿದ್ದಕ್ಕಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ಇನ್ನೂ ಅಧಿಕಾರದಲ್ಲಿರುವಂತೆ ಮಾತನಾಡುತ್ತಿದ್ದೀರಿ. ಈಗ ಟಿವಿಕೆ ಅಧಿಕಾರದಲ್ಲಿದೆ ಎಂಬುದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದರು.
ತಿರುಪತಿ ಶ್ರೀ ಬಾಲಾಜಿ ದೇವಾಲಯದಲ್ಲಿ ಕೊಳ್ಳೆ ಹೊಡೆದ ಕಳ್ಳರು
ಡಿಎಂಕೆ ಅಧಿಕಾರಾವಧಿಯಲ್ಲಿ ಪ್ರತಿಯೊಂದು ಇಲಾಖೆಯಲ್ಲಿಯೂ ಹಗರಣ ನಡೆದಿದೆ ಎಂದು ಆರೋಪಿಸಿದ ಅವರು, ಸರ್ಕಾರಿ ಟೆಂಡರ್‌ಗಳನ್ನು ಹೆಚ್ಚಿಸಲಾಗಿದೆ. ಟಿವಿಕೆ ಸರ್ಕಾರದ ಕಾರ್ಯಸೂಚಿಯನ್ನು ತಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಮುಂಬರುವ ಕರೂರು ವಿಧಾನಸಭಾ ಉಪಚುನಾವಣೆಯಲ್ಲಿ ಡಿಎಂಕೆಯನ್ನು ಖಂಡಿಸುವಂತೆ ಅವರು ಮತದಾರರನ್ನು ಒತ್ತಾಯಿಸಿದರು.