ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎನ್‌ಡಿಎ ಸೇರಿದರೆ ಕೇರಳಕ್ಕೆ ದೊಡ್ಡ ಅನುದಾನ ಸಿಗಲಿದೆ ಎಂದು ಕೇಂದ್ರ ಸಚಿವ ಅಠಾವಳೆ

Union Minister Athawale Statement: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎನ್‌ಡಿಎಗೆ ಸೇರ್ಪಡೆಯಾದರೆ ಕೇರಳಕ್ಕೆ ದೊಡ್ಡ ಅನುದಾನ ಲಭಿಸುತ್ತದೆ ಎಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಹೇಳಿದ್ದಾರೆ. ಈ ಹೇಳಿಕೆಗೆ ರಾಜ್ಯದ ಆಡಳಿತಾರೂಢ ಸಿಪಿಐ(ಎಂ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಚಿವರ ಮಾತು ಸಂವಿಧಾನ ತತ್ವಗಳು, ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಕಿಡಿಕಾರಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ (ಸಂಗ್ರಹ ಚಿತ್ರ)

ತಿರುವನಂತಪುರ, ಜ. 22: ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಬೇಕೆಂದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಬಿಜೆಪಿ (BJP) ನೇತೃತ್ವದ ಎನ್‌ಡಿಎಗೆ ಸೇರಬೇಕು ಎಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ (Ramdas Bandu Athawale) ಸಲಹೆ ನೀಡಿದ್ದಾರೆ. ಅವರ ಮಾತಿಗೆ ರಾಜ್ಯದ ಆಡಳಿತಾರೂಢ ಸಿಪಿಐ(ಎಂ) ತೀವ್ರ ಟೀಕೆ ವ್ಯಕ್ತಪಡಿಸಿದೆ.

ವಿಜಯನ್ ಎನ್‌ಡಿಎ ಸೇರಿದರೆ ಅದು ಕ್ರಾಂತಿಕಾರಿ ನಡೆ ಮತ್ತು ಖಂಡಿತವಾಗಿಯೂ ಕೇರಳಕ್ಕೆ ಹೆಚ್ಚಿನ ಅನುದಾನ ಬರುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಠಾವಳೆ ಹೇಳಿದರು. ಈ ಅನುದಾನವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬಹುದು ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ದೊಡ್ಡ ಪ್ಯಾಕೇಜ್ ನೀಡುತ್ತಾರೆ ಎಂದು ತಿಳಿಸಿದರು.

ರಾಮದಾಸ್ ಬಂಡು ಅಠಾವಳೆ ಅವರ ಹೇಳಿಕೆ:



ಅಠಾವಳೆ ಅವರ ಮಾತಿಗೆ ಆಡಳಿತರೂಢ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಕರೆದಿದ್ದಾರೆ. ಐದು ವರ್ಷಗಳಲ್ಲಿ ಕೇರಳದ ಹಕ್ಕಾದ ಸುಮಾರು 2 ಲಕ್ಷ ಕೋಟಿ ರುಪಾಯಿ ನೀಡಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸಚಿವರ ಹೇಳಿಕೆ ಸಾಂವಿಧಾನಿಕ ತತ್ವಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿವೆ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಗೋವಿಂದನ್ ಹೇಳಿದರು. ಇಂತಹ ಹೇಳಿಕೆಗಳು ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ಆರ್‌ಎಸ್‍ಎಸ್‍ನ ಕಾಲಿನಡಿಗೆ ತರಲು ಮಾಡಲಾಗುತ್ತಿರುವ ಪ್ರಯತ್ನಗಳ ಭಾಗ ಎಂದು ಗೋವಿಂದನ್ ಟೀಕಿಸಿದರು.

ಕನ್ನಡಿಗರಿಗೆ ಮಲಯಾಳಂ ಕಡ್ಡಾಯ ಅಲ್ಲ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್‌

ಇಂತಹ ಹೇಳಿಕೆಗಳು ದೇಶ ಸ್ವರಾಜ್ಯ ವಿರೋಧಿ ನವ-ಫಾಸಿಸ್ಟ್ ಚಳವಳಿಯತ್ತ ಸಾಗುತ್ತಿರುವ ಸೂಚನೆ ನೀಡುತ್ತದೆ ಎಂದು ಮಾರ್ಕ್ಸ್‌ವಾದಿ ನಾಯಕ ಹೇಳಿದರು. ಕೇಂದ್ರ ಸಚಿವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮತ್ತೊಂದು ಹೇಳಿಕೆಯಲ್ಲಿ, ವಿಜಯನ್ ಎನ್‌ಡಿಎಗೆ ಸೇರ್ಪಡೆಯಾದರೆ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುತ್ತಾರೆ. ಹೀಗಾಗಿ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದ್ದಾರೆ. ಅಠಾವಳೆ ಅವರಿಗೆ ಕೇರಳ ರಾಜಕಾರಣದ ಬಗ್ಗೆ ತಿಳುವಳಿಕೆಯ ಕೊರತೆಯಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಗೋವಿಂದನ್ ಟೀಕಿಸಿದರು.

ಮಹಾರಾಷ್ಟ್ರ ಮೂಲದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ಅಠಾವಳೆ, ಸಿಪಿಐ(ಎಂ) ಮತ್ತು ಸಿಪಿಐ ಕೂಡ ಎನ್‌ಡಿಎಗೆ ಸೇರಬೇಕು ಎಂದು ಹೇಳಿದರು. ಸಮಾಜವಾದಿ ನಾಯಕರು ಎನ್‌ಡಿಎ ಸೇರಬಹುದಾದರೆ, ಕಮ್ಯುನಿಸ್ಟ್ ನಾಯಕರು ಏಕೆ ಸೇರಬಾರದು ಎಂದು ಅವರು ತಿಳಿಸಿದರು. ಈ ಮಾತು ಇದೀಗ ಭಾರಿ ಟೀಕೆಗೆ ಕಾರಣವಾಗಿದೆ.