ನವದೆಹಲಿ, ಡಿ. 23: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಪ್ರಧಾನಿಯನ್ನಾಗಿ ಮಾಡಿದರೆ, ಅವರು ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಾಂಗ್ಲಾದೇಶಕ್ಕೆ (Bangladesh) ಕಠಿಣ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Congress MP Imran Masood) ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಕುರಿತು ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಇಮ್ರಾನ್ ಮಸೂದ್, ʼʼಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ. ಆಗ ಅವರು ಇಂದಿರಾ ಗಾಂಧಿ ಅವರಂತೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ನೋಡಿ. ಪ್ರಿಯಾಂಕಾ ಗಾಂಧಿ ತಮ್ಮ ಹೆಸರಿನ ಹಿಂದೆ ಗಾಂಧಿಯನ್ನು ಸೇರಿಸಿಕೊಂಡಿದ್ದಾರೆ. ಅವರು ಇಂದಿರಾ ಗಾಂಧಿಯ ಮೊಮ್ಮಗಳು. ಇಂದಿರಾ ಗಾಂಧಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರಗಳನ್ನು ನೀಡಿದವರು. ಆ ಗಾಯಗಳು ಇನ್ನೂ ವಾಸಿಯಾಗಿಲ್ಲ. ಅವರನ್ನು ಪ್ರಧಾನಿಯನ್ನಾಗಿ ಮಾಡಿ ಮತ್ತು ಅವರು ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ನೋಡಿʼʼ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕೊಲೆ: ಹತ್ಯೆಯಾದ ದೀಪು ಚಂದ್ರದಾಸ್ ಯಾರು?
ಇತ್ತೀಚೆಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್ ಅವರ ಹತ್ಯೆಯ ನಂತರ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರವನ್ನು ಗಮನಿಸುವಂತೆ ಕೇಂದ್ರವನ್ನು ಆಗ್ರಹಿಸಿದ್ದರು.
ಇಮ್ರಾನ್ ಮಸೂದ್ ಅವರ ಹೇಳಿಕೆ:
ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಕ್ರೂರ ಹತ್ಯೆಯ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದ್ದರು. ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್ ಅವರ ಮೇಲೆ ಗುಂಪೊಂದು ನಡೆಸಿದ ಕ್ರೂರ ಹತ್ಯೆಯ ಸುದ್ದಿ ಅತ್ಯಂತ ಆತಂಕಕಾರಿ. ಯಾವುದೇ ನಾಗರಿಕ ಸಮಾಜದಲ್ಲಿ, ಧರ್ಮ, ಜಾತಿ, ಗುರುತಿನ ಆಧಾರದ ಮೇಲೆ ತಾರತಮ್ಯ, ಹಿಂಸೆ ಮತ್ತು ಕೊಲೆಗಳನ್ನು ಮಾಡುವುದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ತಿಳಿಸಿದ್ದರು.
ʼʼನೆರೆಯ ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರವನ್ನು ಭಾರತ ಸರ್ಕಾರವು ಅರಿತುಕೊಳ್ಳಬೇಕು. ಅವರ ಸುರಕ್ಷತೆ ಕುರಿತಾಗಿ ಬಾಂಗ್ಲಾದೇಶ ಸರ್ಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಬೇಕುʼʼ ಎಂದು ಅವರು ಹೇಳಿದ್ದರು.
ಇಲ್ಲಿದೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್:
ಇಮ್ರಾನ್ ಮಸೂದ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಬಿಜೆಪಿ ರಾಹುಲ್ ಗಾಂಧಿ ಹೆಸರು ಹೇಳಿ ಕಾಂಗ್ರೆಸ್‌ನ ಕಾಲೆಳೆದಿದೆ. ಕಾಂಗ್ರೆಸ್ ನಾಯಕರಿಗೇ ರಾಹುಲ್ ಗಾಂಧಿ ಮೇಲೆ ನಂಬಿಕೆ ಇಲ್ಲ ಎಂದು ವ್ಯಂಗ್ಯವಾಡಿದೆ.
ಅಂದಹಾಗೆ ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ (RAB) ಮೈಮೆನ್ಸಿಂಗ್‌ನ ಭಾಲುಕಾದಲ್ಲಿ ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದೆ ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಪ್ರಧಾನಿ ಮುಹಮ್ಮದ್ ಯೂನಸ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ; ಮನೆಗೆ ಬೆಂಕಿ ಹಚ್ಚಿ, ನೋಟಿಸ್ ಕೊಟ್ಟ ದುಷ್ಟರು
ಗಾರ್ಮೆಂಟ್ ಕಾರ್ಮಿಕ ದೀಪು ಚಂದ್ರದಾಸ್ (27) ಅವರನ್ನು ಡಿಸೆಂಬರ್ 18ರಂದು ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾ ಪ್ರದೇಶದಲ್ಲಿ ಹೊಡೆದು ಕೊಲ್ಲಲಾಯಿತು. ನಂತರ ಬೆತ್ತಲೆಯಾಗಿ ಆತನನ್ನು ಕಂಬಕ್ಕೆ ಕಟ್ಟಿ ಬೆಂಕಿ ಹಚ್ಚಿ ಸುಡಲಾಯಿತು. ಈ ಭಯಾನಕ ಘಟನೆಯು ಜಗತ್ತನ್ನೇ ಬೆಚ್ಚಿಬೀಳಿಸಿದೆ.
ಈ ಹತ್ಯೆಗೆ ಧರ್ಮನಿಂದನೆಯ ಆರೋಪ ಹೊರಿಸಲಾಗಿದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಂಘಟನೆಯಾದ ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್, ಕೊಲೆಯನ್ನು ಬಲವಾಗಿ ಖಂಡಿಸಿದ್ದು, ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕ್ರೂರ ಕೃತ್ಯ ಎಂದು ಹೇಳಿದೆ.