ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಪ್ರಾಧ್ಯಾಪಕರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ

IIT Bombay Student Self Harming Case: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವಿವರ ಲಭ್ಯವಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಪೊಲೀಸ್ ತನಿಖೆಯ ವೇಳೆ ಪ್ರಾಧ್ಯಾಪಕರ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೆಚ್ಚಿನ ಪರಿಶೀಲನೆಗಾಗಿ ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಮುಂಬೈ, ಸೆ. 22: ಐಐಟಿ ಬಾಂಬೆ (IIT Bombay) ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ (Self-harming) ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆಯ ಪ್ರಕಾರ ಪ್ರಾಧ್ಯಾಪಕರ ವಿರುದ್ಧ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಆದರೆ ಈ ಗಂಭೀರ ಆರೋಪಗಳ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ತನಿಖಾಧಿಕಾರಿಗಳು ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಪ್ರಾಧ್ಯಾಪಕರ ವಿರುದ್ಧದ ಆರೋಪಗಳ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ತನಿಖಾಧಿಕಾರಿಗಳು ಲಭ್ಯವಿರುವ ಎಲ್ಲ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸೆಪ್ಟೆಂಬರ್‌ 18ರಂದು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗ ಅಧಿಕಾರಿಗಳಿಗೆ, ಸಾಹಿಲ್ ವಿರುದ್ಧ ಪ್ರಾಧ್ಯಾಪಕರು ಜಾತಿ ಆಧಾರಿತ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪವನ್ನು ದೃಢಪಡಿಸುವ ಯಾವುದೇ ಪ್ರತ್ಯಕ್ಷ ಸಾಕ್ಷಿದಾರರು ಅಥವಾ ಇತರ ಸಾಕ್ಷ್ಯಗಳು ಇನ್ನೂ ಸಿಕ್ಕಿಲ್ಲ ಎಂದು ವರದಿಯೊಂದು ಹೇಳಿದೆ.

ಪರಿಶೀಲನೆಗಾಗಿ ಕ್ಯಾಂಪಸ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಾಹಿಲ್ ನಕಲು ಮಾಡುತ್ತಿರುವಾಗ ಸಿಕ್ಕಿಬಿದ್ದ ನಂತರ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯಿಂದ ಹೊರಹೋಗುವಂತೆ ಪ್ರಾಧ್ಯಾಪಕ ಮತ್ತು ಪರೀಕ್ಷಾ ಮೇಲ್ವಿಚಾರಕ ಸೂರ್ಯನಾರಾಯಣ ದೊಳ್ಲ ಹೇಳುತ್ತಿರುವುದು ಕಂಡುಬಂದಿದೆ. ಕಟ್ಟಡದಾದ್ಯಂತ ಅಳವಡಿಸಲಾದ ಇತರ ಸಿಸಿಟಿವಿ ಕ್ಯಾಮೆರಾಗಳು ಸಾಹಿಲ್ ಪರೀಕ್ಷಾ ಹಾಲ್‌ನಿಂದ ಹೊರಬಂದು ಕ್ಯಾಂಪಸ್ ಹಾಸ್ಟೆಲ್‌ನಲ್ಲಿರುವ ತನ್ನ ಕೋಣೆಗೆ ಹೋಗುವುದನ್ನು ಸೆರೆಹಿಡಿದಿವೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಐಐಟಿ ಬಾಂಬೆ ಪ್ರಾಧ್ಯಾಪಕ ಸೂರ್ಯನಾರಾಯಣ ಅಮಾನತು

ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ (ಅಧ್ಯಾಪಕರ ಒಕ್ಕೂಟ) ಪ್ರೊಫೆಸರ್ ಸೂರ್ಯನಾರಾಯಣ ದೊಳ್ಲ ಅವರಿಗೆ ತನ್ನ ಬೆಂಬಲ ಸೂಚಿಸಿದೆ. ಈ ಘಟನೆಯ ಬಳಿಕ ಅವರನ್ನು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿಲ್ಲ; ಬದಲಿಗೆ ನಿಷ್ಪಕ್ಷಪಾತ ತನಿಖೆಗಾಗಿ ಅವರೇ ಸ್ವತಃ ಈ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಸಾಹಿಲ್ ಕ್ಯಾಂಪಸ್‌ನಲ್ಲಿ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯಕ್ಕೆ ಒಳಗಾಗಿದ್ದ. ಇದೇ ಕಾರಣದಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ಕುಟುಂಬ ಆರೋಪಿಸಿದೆ. ಈ ತಾರತಮ್ಯದ ಆಪಾದನೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 (ಎಸ್‌ಸಿ/ಎಸ್‌ಟಿ ಕಾಯ್ದೆ)ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದೆ.

ಘಟನೆ ನಡೆದ ದಿನದಂದು ಸೂರ್ಯನಾರಾಯಣ ದೊಳ್ಲ ಅವರನ್ನು ಪರೀಕ್ಷಾ ಮತ್ತು ಮೇಲ್ವಿಚಾರಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಪರೀಕ್ಷೆಯ ಸಮಯದಲ್ಲಿ ಸಾಹಿಲ್ ಮೊಬೈಲ್ ಫೋನ್‌ ಹೊಂದಿರುವುದನ್ನು ಪ್ರಾಧ್ಯಾಪಕ ಸೂರ್ಯನಾರಾಯಣ ದೊಳ್ಲ ನೋಡಿದ್ದು, ಹೊರಗೆ ಹೋಗುವಂತೆ ಹೇಳಿದ್ದರು ಎನ್ನಲಾಗಿದೆ.

ನಂತರ ಸಾಹಿಲ್‌ನನ್ನು ವಿಭಾಗದ ಮುಖ್ಯಸ್ಥರ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಮತ್ತೊಬ್ಬ ಪ್ರಾಧ್ಯಾಪಕರು ಸಹ ಹಾಜರಿದ್ದರು ಎಂದು ಪೊಲೀಸರು ದಾಖಲಿಸಿಕೊಂಡ ಹೇಳಿಕೆಗಳಲ್ಲಿ ತಿಳಿಸಲಾಗಿದೆ. ಅಪರಾಧ ವಿಭಾಗವು ದೊಳ್ಲ ಮಾತ್ರವಲ್ಲದೆ ವಿದ್ಯಾರ್ಥಿಯೊಂದಿಗೆ ನಂತರದ ಸಂವಾದದ ಸಮಯದಲ್ಲಿ ಹಾಜರಿದ್ದ ಇತರ ಇಬ್ಬರು ಪ್ರಾಧ್ಯಾಪಕರನ್ನು ಸಹ ಪ್ರಶ್ನಿಸಿದೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಅಪರಾಧ ವಿಭಾಗ ತಿಳಿಸಿದೆ. ಇನ್ನು ಜಾತಿ ಬಗ್ಗೆ ಹೇಳಿದ ಮಾತುಗಳು ನಿಜವಲ್ಲ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ ಎನ್ನಲಾಗಿದೆ. ಪರೀಕ್ಷೆ ನಕಲು ಮಾಡುವಾಗ ಆತ ಸಿಕ್ಕಿಬಿದ್ದಿರುವುದಾಗಿ ಆತ ತಿಳಿಸಿದ್ದಾನೆ.