ಮುಂಬೈ, ಸೆ. 23: ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡೆ, ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ (IIT Bombay student self-harming case) ಶರಣಾಗುವ ಕೆಲ ಗಂಟೆಗಳ ಮೊದಲು, ತಾನು ತಪ್ಪು ಮಾಡಿದೆ ಎಂದು ಆಪ್ತ ಸ್ನೇಹಿತೆಗೆ ಹೇಳಿದ್ದ ಎನ್ನಲಾಗಿದೆ. ʼʼನಾನು ತಪ್ಪು ಮಾಡಿದೆ. ನನ್ನ ಥರ್ಮೋಡೈನಾಮಿಕ್ಸ್ ಪರೀಕ್ಷೆಯೂ (Thermodynamics paper) ಚೆನ್ನಾಗಿ ಆಗಿರಲಿಲ್ಲ. ಈಗ ಈ ಘಟನೆ ಕೂಡ ನಡೆದಿದೆʼʼ ಎಂದು ವಕೋಡೆ ಸ್ನೇಹಿತೆಯಲ್ಲಿ ಹೇಳಿದ್ದ ಎನ್ನಲಾಗಿದೆ.
ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ 22 ವರ್ಷದ ಸಾಹಿಲ್ ವಕೋಡೆ ಸೆಪ್ಟೆಂಬರ್ 18ರಂದು ಪೊವಾಯಿ ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮಧ್ಯ ಸೆಮಿಸ್ಟರ್ ಪರೀಕ್ಷೆಯ ಸಮಯದಲ್ಲಿ ಮೊಬೈಲ್‌ನಲ್ಲಿ ಚಾಟ್‌ಜಿಪಿಟಿ ಬಳಸಿ, ಸಂಪೂರ್ಣ ಪ್ರಶ್ನೆಪತ್ರಿಕೆಯನ್ನು ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದಿದ್ದ. ಇದಾದ ಕೆಲವೇ ಗಂಟೆಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ.
ಸಾಹಿಲ್ ಮೃತಪಟ್ಟ ದಿನ ಮಧ್ಯಾಹ್ನ 2:30ರ ಸುಮಾರಿಗೆ ತನ್ನ ಸ್ನೇಹಿತೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾಗಿ ಮೂಲಗಳು ದೃಢಪಡಿಸಿವೆ. ಇದು ಸಾಹಿಲ್ ಮತ್ತು ಅವನ ಆಪ್ತ ಸ್ನೇಹಿತೆಯ ನಡುವಿನ ಕೊನೆಯ ಸಂಭಾಷಣೆಯಾಗಿತ್ತು. ನಂತರ ಅವನು, ಆಕೆಯ ಕರೆಗಳಿಗೆ ಉತ್ತರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪ್ರಾಧ್ಯಾಪಕನಿಗೆ ಕಡ್ಡಾಯ ರಜೆ ನೀಡಿದ ಐಐಟಿ ಬಾಂಬೆ
ಮೂಲಗಳ ಪ್ರಕಾರ, ಈ ಸಂಭಾಷಣೆಯ ಸಮಯದಲ್ಲಿ ಸಾಹಿಲ್ ಯಾವುದೇ ಜಾತಿಗೆ ಸಂಬಂಧಿಸಿದ ಹೇಳಿಕೆಗಳನ್ನು ನೀಡಿಲ್ಲ ಅಥವಾ ಯಾವುದೇ ಜಾತಿಗೆ ಸಂಬಂಧಿಸಿದ ಘಟನೆಯನ್ನು ಉಲ್ಲೇಖಿಸಿಲ್ಲ. ಇದಕ್ಕೂ ಮೊದಲು, ತನ್ನ ಪೋಷಕರೊಂದಿಗೆ ಮಾತನಾಡುತ್ತಿದ್ದಾಗ, ಆತ ತನ್ನ ಮೇಲೆ ಜಾತಿ ನಿಂದನೆ ಮತ್ತು ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದ್ದ. ಇದಕ್ಕೆ ಆತನ ತಂದೆಯು, ಉಜ್ವಲ ಭವಿಷ್ಯಕ್ಕಾಗಿ ತಾಳ್ಮೆಯಿಂದಿರುವಂತೆ ಹಾಗೂ ಸಹಿಸಿಕೊಳ್ಳುವಂತೆ ಹೇಳಿದ್ದಾರೆ.
ಸಾಹಿಲ್ ಸಾವಿನ ಸುದ್ದಿ ತಿಳಿದ ನಂತರ ಭಯಭೀತಳಾದ ಸ್ನೇಹಿತೆಯನ್ನು ತನಿಖಾಧಿಕಾರಿಗಳು ಪ್ರಶ್ನಿಸಿದರು. ನಡೆಯುತ್ತಿರುವ ತನಿಖೆಯ ಭಾಗವಾಗಿ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ನಡೆದ ಪ್ರತಿಭಟನೆಯ ನಂತರ ಐಐಟಿ ಬಾಂಬೆ ಪ್ರಾಧ್ಯಾಪಕ ಮತ್ತು ಪರೀಕ್ಷಾ ಮೇಲ್ವಿಚಾರಕ ಸೂರ್ಯನಾರಾಯಣ ಅವರನ್ನು ಡೀನ್ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಈ ಸಂಬಂಧ ಮುಂಬೈ ಪೊಲೀಸ್ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ.
ಕ್ಯಾಂಪಸ್ ಅಧಿಕಾರಿಗಳು ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯ ಮಾಡಿದ್ದಾರೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ ನಂತರ ದಾಖಲಾದ ಎಫ್‌ಐಆರ್‌ನಲ್ಲಿ ಸೂರ್ಯನಾರಾಯಣ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಪ್ರೊಫೆಸರ್ ಸೂರ್ಯನಾರಾಯಣ ಅವರನ್ನು ಬೆಂಬಲಿಸಿ, ಮಂಗಳವಾರ (ಸೆಪ್ಟೆಂಬರ್ 23) ಐಐಟಿ ಬಾಂಬೆಯ ನೂರಾರು ವಿದ್ಯಾರ್ಥಿಗಳು ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.