ಲಖನೌ, ಜೂ. 2: ಐಐಟಿ ಪದವೀಧರನೊಬ್ಬ ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಂಡು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವರ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳ ಮೂಲಕ ಬ್ಲ್ಯಾಕ್‌ಮೇಲ್ (Blackmail Allegations) ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಮಥುರಾದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಒಡಿಶಾ ಮೂಲದ 29 ವರ್ಷದ ಅಭಿಷೇಕ್ ಮಿಶ್ರಾ ಬಂಧಿತ ಆರೋಪಿಯಾಗಿದ್ದು, ಆದಿಕರ್ತ ನಾರಾಯಣ ದಾಸ್ ಎಂಬ ಹೆಸರನ್ನು ಇಟ್ಟುಕೊಂಡು ತಾನೊಬ್ಬ ಧಾರ್ಮಿಕ ಗುರು ಎಂದು ಬಿಂಬಿಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೇ ಹೀಗೆ ನಕಲಿ ವೇಷ ಹಾಕಿಕೊಂಡು ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ.
ಆತ 2017ರಿಂದ 2021ರವರೆಗೆ ಐಐಟಿ ರೂರ್ಕಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ಛತ್ತೀಸ್‌ಗಢದ ಯುವತಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಯುಟ್ಯೂಬ್ ಮೂಲಕ ಜನಮನ್ನಣೆ
ಕಳೆದ ನಾಲ್ಕು ವರ್ಷಗಳಿಂದ ಮಥುರಾದ ರಾಧಾಕುಂಜ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಭಿಷೇಕ್, ತಾನು ಕಥಾವಾಚಕ ಎಂದು ಪರಿಚಯಿಸಿಕೊಂಡಿದ್ದ. ʼರಾಧಾ ಕೃಪಾ ಅಮೃತʼ ಹೆಸರಿನ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದ ಆತ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಧಾರ್ಮಿಕ ಪ್ರವಚನಗಳನ್ನು ಪ್ರಸಾರ ಮಾಡುತ್ತಿದ್ದ. ಅಲ್ಲದೆ, ತನ್ನ ನಕಲಿ ಹೆಸರಿನಲ್ಲೇ ಲಿಂಕ್ಡ್‌ಇನ್ ಪ್ರೊಫೈಲ್ ಕೂಡ ಹೊಂದಿದ್ದನು. ಪೊಲೀಸರ ಪ್ರಕಾರ, ಈ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಆತ ವಿಶೇಷವಾಗಿ ಎಂಜಿನಿಯರಿಂಗ್ ಹಿನ್ನೆಲೆಯ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ.
ಒಂದೂವರೆ ವರ್ಷದ ಕಂದಮ್ಮನನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ತಾಯಿ, ಪ್ರೇಮಿ
ಮಾದಕ ದ್ರವ್ಯ ಬೆರೆಸಿದ ಪ್ರಸಾದ ನೀಡುತ್ತಿದ್ದ ಕಳ್ಳ ಸ್ವಾಮಿ
ಮಹಿಳೆಯರೊಂದಿಗೆ ಪರಿಚಯ ಬೆಳೆಸಿದ ಬಳಿಕ ಅವರನ್ನು ಕುಟುಂಬದಿಂದ ದೂರವಾಗುವಂತೆ ಪ್ರೇರೇಪಿಸಿ ತನ್ನೊಂದಿಗೆ ವಾಸಿಸಲು ಒತ್ತಾಯಿಸುತ್ತಿದ್ದ. ಮಥುರಾದಲ್ಲಿನ ಅವನ ಮನೆಯಲ್ಲಿ ಒಂದೇ ಸಮಯದಲ್ಲಿ ಸುಮಾರು 24 ಯುವಕರು ಮತ್ತು ಯುವತಿಯರು ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆಯಲ್ಲಿ ʼಗಾಂಧರ್ವ ವಿವಾಹʼದ ಹೆಸರಿನಲ್ಲಿ ಮಹಿಳೆಯರನ್ನು ಮದುವೆಯಾಗುವ ನಾಟಕವಾಡಿ, ನಂತರ ಅವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಸಾದದ ಹೆಸರಿನಲ್ಲಿ ಮಾದಕ ವಸ್ತು ಬೆರೆಸಿದ ಹಾಲು ನೀಡಿ, ನಂತರ ಲೈಂಗಿಕ ದೌರ್ಜನ್ಯ ಎಸಗಿ ಅದರ ವಿಡಿಯೊ ಹಾಗೂ ಫೋಟೊಗಳನ್ನು ದಾಖಲಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಪತ್ತೆ
ಆರೋಪಿಯ ಮೊಬೈಲ್ ಫೋನ್‌ನಿಂದ ಹಲವು ಅಶ್ಲೀಲ ಫೋಟೊಗಳು ಹಾಗೂ ವಿಡಿಯೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವು ತನಿಖೆಯ ಪ್ರಮುಖ ಸಾಕ್ಷ್ಯಗಳಾಗಿವೆ.
ಇದಲ್ಲದೆ, ತನ್ನೊಂದಿಗೆ ವಾಸಿಸುತ್ತಿದ್ದವರ ಕುಟುಂಬಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ. ಸುಮಾರು ಆರು ತಿಂಗಳ ಹಿಂದೆ ಯುವತಿಯೊಬ್ಬಳ ಕುಟುಂಬ ಸದಸ್ಯರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ, ಅಭಿಷೇಕ್ ಹಾಗೂ ಆತನ ಸಹಚರರು ಗಲಾಟೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದು, ಆತನ ತಾಯಿ ಕೂಡ ಆರಂಭದಲ್ಲಿ ಮಗನೊಂದಿಗೆ ವಾಸವಾಗಿದ್ದರೂ, ಆತನ ವರ್ತನೆಯಿಂದ ಬೇಸತ್ತು ನಂತರ ಮನೆ ತೊರೆದಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ಮಹಿಳೆಯರು ಬಲಿಯಾಗಿರುವ ಶಂಕೆ
ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಭಿಷೇಕ್ ಬಳಿಕ ಸ್ವಂತ ಮನೆ ನಿರ್ಮಿಸಿಕೊಂಡಿದ್ದ. ಆತನೊಂದಿಗೆ ವಾಸಿಸುತ್ತಿದ್ದ ಹಲವರು ಕ್ರಮೇಣ ಆತನ ವರ್ತನೆ ಬಗ್ಗೆ ಅನುಮಾನಗೊಂಡು ಸ್ಥಳ ತೊರೆದಿದ್ದರು. ಆರಂಭದಲ್ಲಿ ಅವರನ್ನು ಮಾನಸಿಕವಾಗಿ ಪ್ರಭಾವಿತಗೊಳಿಸಿ ತನ್ನ ನಿಯಂತ್ರಣದಲ್ಲಿ ಇಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಮತ್ತಷ್ಟು ಮಹಿಳೆಯರು ಬಲಿ ಪಶುವಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.