ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಪ್ರತಿಭೆ ಇದ್ದರೂ ಸಾಧನೆ ಸಾಧ್ಯವಾಗುತ್ತಿಲ್ಲ, ಅಮ್ಮ, ನನಗೆ ತುಂಬಾ ನೋವಾಗುತ್ತಿದೆ”: ತಾಯಿಗೆ ಕರೆ ಮಾಡಿ ಐಐಟಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು; ಅತಿಯಾದ ಸ್ಪರ್ಧೆ ಜೀವ ತೆಗೆಯಿತಾ?

IIT Student Self-harming: 31 ವರ್ಷದ ಐಐಟಿ ದೆಹಲಿಯ (IIT Delhi) ಎಂಎಸ್ಸಿ ಫಿಸಿಕ್ಸ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಷಿಕೇಶ್ ಕುಮಾರ್ ಮೃತ ದುರ್ದೈವಿ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ಗಂಟೆಗಳ ಮುನ್ನ ತಡರಾತ್ರಿ ತಾಯಿಗೆ ಕರೆ ಮಾಡಿ ಅತ್ಯಂತ ಭಾವುಕನಾಗಿ ಮನದಾಳದ ನೋವನ್ನು ತೋಡಿಕೊಂಡಿದ್ದ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಐಐಟಿ ವಿದ್ಯಾರ್ಥಿ ರಿಷಿಕೇಶ್ ಕುಮಾರ್‌ (ಸಂಗ್ರಹ ಚಿತ್ರ)

ನವದೆಹಲಿ, ಆ. 26: ಐಐಟಿ ದೆಹಲಿಯ (IIT Delhi) ಎಂಎಸ್ಸಿ ಫಿಸಿಕ್ಸ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 31 ವರ್ಷದ ರಿಷಿಕೇಶ್ ಕುಮಾರ್ ಮೃತ ದುರ್ದೈವಿ. ತಾನು ಆತ್ಮಹತ್ಯೆ (self-harming) ಮಾಡಿಕೊಳ್ಳುವ ಕೆಲವು ಗಂಟೆಗಳ ಮುನ್ನ ತಡರಾತ್ರಿ ತಾಯಿಯ ಬಳಿ ಅತ್ಯಂತ ಭಾವುಕನಾಗಿ ಮನದಾಳದ ನೋವನ್ನು ತೋಡಿಕೊಂಡಿದ್ದ. ತನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿರುವ ಬಗ್ಗೆ ತಾಯಿಗೆ ತಿಳಿಸಿದ್ದ. ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಆತ, ಆಗಸ್ಟ್ 22ರಂದು ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಅಸ್ವಸ್ಥಗೊಂಡಿದ್ದ ರಿಷಿಕೇಶ್ ಕುಮಾರ್‌ನನ್ನು ಆರಂಭದಲ್ಲಿ ಕ್ಯಾಂಪಸ್‌ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವನು ಮೃತಪಟ್ಟಿದ್ದಾನೆಂದು ಘೋಷಿಸಲಾಯಿತು. ಸ್ಥಳದಿಂದ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಯ ಜೇಬಿನಲ್ಲಿ ಕಂಡುಬಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ.

“ರಾತ್ರಿ ಅವನು ಅಳುತ್ತಾ, ಅಮ್ಮ, ನನಗೆ ತುಂಬಾ ನೋವಾಗುತ್ತಿದೆ. ನನಗೆ ಆತ್ಮಹತ್ಯೆಯ ಭಯವೂ ಇದೆ. ನಾನು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ನಾನು ನಿಷ್ಪ್ರಯೋಜಕ, ಯಾವುದಕ್ಕೂ ಲಾಯಕ್ಕಲ್ಲ. ಪ್ರತಿಭೆ ಇದ್ದರೂ, ಈ ಜಗತ್ತಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೊಂದು ಯಶಸ್ಸು ಮತ್ತು ಪ್ರತಿಭೆ ಇದ್ದರೂ, ನಾನು ಏನನ್ನೂ ಸಾಧಿಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದ ಎನ್ನಲಾಗಿದೆ.

ಶ್ರೀಶೈಲಂ ದೇವಾಲಯದ ವಸತಿ ಗೃಹದಲ್ಲಿ ಒಂದೇ ಕುಟುಂಬದ ಐವರು ಸಾವು

"ಹಿಂದಿನ ಜೀವನದ ಯಾವುದೋ ದೋಷವೇ ನನ್ನ ಸಾಧನೆಗೆ ತಡೆಯಾಗಿರಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ನನ್ನಲ್ಲಿ ಸಾಕಷ್ಟು ಪ್ರತಿಭೆ ಇದೆ. ಆದರೂ ನನ್ನ ಅಧ್ಯಯನದಲ್ಲಿ ಅಡೆತಡೆಗಳು ಬರುತ್ತಲೇ ಇರುತ್ತವೆ. ಒಂದರ ನಂತರ ಒಂದರಂತೆ ಸಮಸ್ಯೆಗಳು ಉದ್ಭವಿಸುತ್ತವೆ. ಯಾವಾಗಲೂ ಏನಾದರೊಂದು ಸಂಭವಿಸುತ್ತದೆ. ನನ್ನ ಶಿಕ್ಷಣ ಸ್ಥಗಿತಗೊಳ್ಳುವಂತೆ ಮಾಡುತ್ತದೆ. ನಾನು ಈಗ ಏನು ಮಾಡಬೇಕು?” ಎಂದು ರಿಷಿಕೇಶ್ ಕುಮಾರ್ ತಾಯಿಯ ಬಳಿ ಪ್ರಶ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.

ರಿಷಿಕೇಶ್ ಅವರ ತಾಯಿ ಆಶಾ ಪೋದ್ದಾರ್ ಮಗ ಎದುರಿಸುತ್ತಿದ್ದ ಕಷ್ಟಗಳನ್ನು ಪಟ್ಟಿ ಮಾಡಿದ್ದು, 2014ರಲ್ಲಿ ತಂದೆಯ ಮರಣದ ಕಾರಣ ಆತ ಎನ್‌ಐಟಿ ರೂರ್ಕೆಲಾದಿಂದ (NIT Rourkela) ಹೊರಬರಬೇಕಾಯಿತು ಎಂದು ತಿಳಿಸಿದ್ದಾರೆ. ನಂತರ ರಿಷಿಕೇಶ್ ಮಗದ ವಿಶ್ವವಿದ್ಯಾಲಯದಿಂದ (2022-2025) ಭೌತಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ. ಆ ಬಳಿಕ ಐಐಟಿ ದೆಹಲಿಯಲ್ಲಿ ಸಮಸ್ಯೆಗಳು ಎದುರಾದವು. ಆತ ಅಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎಂದು ತಾಯಿ ಹೇಳಿದ್ದಾರೆ. ಮಗನನ್ನು ಸದಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದಿದ್ದರಿಂದ, ತಾಯಿ ಕೂಡ ಆತನೊಂದಿಗೆ ಕ್ಯಾಂಪಸ್‌ನಿಂದ ಹೊರಗೆ ವಾಸ್ತವ್ಯ ಹೂಡುದ್ದರು.

ತನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿವೆ ಎಂದು ತಾಯಿಗೆ ರಿಷಿಕೇಶ್ ತಿಳಿಸಿದ್ದಾಗಿ ಸಹೋದರ ಅಭಿಷೇಕ್ ಕುಮಾರ್ ಹೇಳಿದ್ದಾನೆ. ಕಳೆದ 30 ತಿಂಗಳಲ್ಲಿ ಕಾಲೇಜಿನ 8 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.