ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ಪೊಲೀಸ್ ನೋಟಿಸ್: ಅ.26ರಂದು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ

ಅಮೆರಿಕದ ಪ್ರಜೆ ಹಾಗೂ ನಟ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಅಕ್ಟೋಬರ್ 26ರಂದು ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಸ್ವಲ್ಪ ಸಮಯ ವಶಕ್ಕೆ ಪಡೆದಿದ್ದರು.

ನಟ ಹಾಗೂ ಅಮೆರಿಕದ ಪ್ರಜೆ ಇಮ್ರಾನ್ ಖಾನ್

ಮುಂಬೈ: ಇಮ್ರಾನ್ ಖಾನ್ (Imran Khan) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ (Bombay High Court) ಅಕ್ಟೋಬರ್ 26ರಂದು ನಡೆಸಲಿದೆ. ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಇಮ್ರಾನ್ ಖಾನ್‌ಗೆ ನೋಟಿಸ್ ನೀಡಲಾಗಿದೆ. ಪೊಲೀಸರ ನೋಟಿಸ್ ರದ್ದುಗೊಳಿಸಬೇಕು ಹಾಗೂ ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ನೋಟಿಸ್ ಜಾರಿಗೊಳಿಸುವುದನ್ನು ತಡೆಹಿಡಿಯಬೇಕು ಎಂದು ಇಮ್ರಾನ್ ಖಾನ್ ನ್ಯಾಯಾಲಯವನ್ನು ಕೋರಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತುರ್ತು ವಿಚಾರಣೆಗೆ ಮನವಿ

ಸೋಮವಾರ ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ಪೀಠದ ಮುಂದೆ ಇಮ್ರಾನ್ ಖಾನ್ ಪರ ಹಿರಿಯ ವಕೀಲ ವೆಂಕಟೇಶ್ ಧೋಂಡ್ ಅರ್ಜಿಯನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದರು. ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಅರ್ಜಿಯ ಪ್ರತಿಯನ್ನು ಸೋಮವಾರ ಬೆಳಿಗ್ಗೆಯಷ್ಟೇ ಸ್ವೀಕರಿಸಿರುವುದರಿಂದ ಪ್ರತಿಕ್ರಿಯಿಸಲು ಕಾಲಾವಕಾಶ ಕೋರಿದರು. ಇದರಿಂದಾಗಿ ನ್ಯಾಯಾಲಯವು ಅಕ್ಟೋಬರ್ 26ರಂದು ವಿಚಾರಣೆ ನಡೆಸಲು ನಿರ್ಧರಿಸಿತು.

ಅಕ್ಟೋಬರ್ 28ರೊಳಗೆ ಭಾರತ ತೊರೆಯಬೇಕೆಂಬ ಸೂಚನೆ ಇರುವುದರಿಂದ ಅದಕ್ಕೂ ಮುನ್ನ ವಿಚಾರಣೆ ನಡೆಸುವಂತೆ ಧೋಂಡ್ ಮನವಿ ಮಾಡಿದರು. ಇಮ್ರಾನ್ ಖಾನ್ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಅಂತಹ ಯಾವುದೇ ಪ್ರಕರಣಗಳಿಲ್ಲ ಎಂದು ವಕೀಲರು ಉತ್ತರಿಸಿದರು.

“ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಅಥವಾ ಬಾಕಿಯಿಲ್ಲ. ಅವರಿಗೆ ಎರಡು ವರ್ಷ ವಯಸ್ಸಿದ್ದಾಗಿನಿಂದ ಭಾರತದಲ್ಲೇ ವಾಸಿಸುತ್ತಿದ್ದಾರೆ. ಅವರು ಪ್ರತಿಭಟನೆಯಲ್ಲಿ ಭಾಗವಹಿಸಲೂ ಇಲ್ಲ. ಪೊಲೀಸರು ಅವರನ್ನು ವಶಕ್ಕೆ ಪಡೆದಾಗ ಅವರು ಪ್ರತಿಭಟನಾ ಸ್ಥಳದ ಅರ್ಧ ದಾರಿಯಲ್ಲಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು” ಎಂದು ಧೋಂಡ್ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಇದೇ ವೇಳೆ, ಅರ್ಜಿಯಲ್ಲಿ ಮಹಾರಾಷ್ಟ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿ ಸೇರಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

OCI ಸ್ಥಾನಮಾನ ರದ್ದತಿ ಸಾಧ್ಯತೆ?

43 ವರ್ಷದ ನಟ ಇಮ್ರಾನ್ ಖಾನ್ ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸ್ವಲ್ಪ ಸಮಯದವರೆಗೆ ಪೊಲೀಸರ ವಶದಲ್ಲಿದ್ದರು. ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವಾಗಿ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಜಂತರ್ ಮಂತರ್ ಪ್ರತಿಭಟನೆ: CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ

ಅಕ್ಟೋಬರ್ 17ರಂದು ಇಮ್ರಾನ್ ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಕೂಡ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅವರ ಸಾಗರೋತ್ತರ ಭಾರತೀಯ ನಾಗರಿಕ (OCI) ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ವಿವರಣೆ ಕೇಳಿದೆ ಎಂದು ಅವರ ವಕೀಲ ಜುಲ್ಫಿಕರ್ ಮೆಮನ್ ತಿಳಿಸಿದ್ದಾರೆ.

ಮೆಮನ್ ಮತ್ತು MZM Legal ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಮುಂಬೈ ಪೊಲೀಸರ ನೋಟಿಸ್ ಅನ್ನು “ಕಾನೂನುಬಾಹಿರ, ಸ್ವೇಚ್ಛಾಚಾರದ, ವಿಕೃತ ಮತ್ತು ತೀವ್ರ ಸ್ವರೂಪದ್ದು” ಎಂದು ಇಮ್ರಾನ್ ಖಾನ್ ಬಣ್ಣಿಸಿದ್ದಾರೆ. ಸಾರ್ವಜನಿಕ ವ್ಯಕ್ತಿಯಾಗಿರುವ ತಮ್ಮನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ ಮತ್ತು ಅಧಿಕಾರಿಗಳು ಸಮರ್ಪಕವಾಗಿ ಯೋಚಿಸದೆ ನೋಟಿಸ್ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ನೋಟಿಸ್ ಜಾರಿಯಾದರೆ ಸಹಜ ನ್ಯಾಯದ ತತ್ವಗಳಿಗೆ ಧಕ್ಕೆಯಾಗಲಿದೆ. ಅಧಿಕಾರಿಗಳು ಪಾಲಿಸಬೇಕಾದ ನ್ಯಾಯಸಮ್ಮತ ಪ್ರಕ್ರಿಯೆಯು ಕೇವಲ ಹೆಸರಿಗಷ್ಟೇ ಉಳಿಯಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ವಿದೇಶಿಗರ ಕಾಯ್ದೆಯಡಿ ನೋಟಿಸ್

ಪಿಟಿಐ ವರದಿಯ ಪ್ರಕಾರ, ವಲಸೆ ಮತ್ತು ವಿದೇಶಿಗರ ಕಾಯ್ದೆಯ ಸೆಕ್ಷನ್ 7(2)(C) ಮತ್ತು 29ರ ಅಡಿಯಲ್ಲಿ ಅಧಿಕಾರಿಗಳು ಭಾರತ ತೊರೆಯುವಂತೆ ಆದೇಶ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಷನ್ 7(2)(C) ವಿದೇಶಿ ಪ್ರಜೆಗಳ ಭಾರತದಲ್ಲಿನ ಉಪಸ್ಥಿತಿಯನ್ನು ನಿಷೇಧಿಸಲು, ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಸೆಕ್ಷನ್ 29ರ ಅಡಿಯಲ್ಲಿ ಕಾಯ್ದೆಯ ನಿಯಮಗಳು ಅಥವಾ ಆದೇಶಗಳ ಉಲ್ಲಂಘನೆ ಹಾಗೂ ಪ್ರತಿಕೂಲ ಭದ್ರತಾ ವರದಿಯ ಆಧಾರದ ಮೇಲೆ ವಿದೇಶಿ ಪ್ರಜೆಯನ್ನು ಭಾರತದಿಂದ ಹೊರಹಾಕಲು ಅವಕಾಶವಿದೆ.

ಇದೀಗ ಇಮ್ರಾನ್ ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಅಕ್ಟೋಬರ್ 26ರಂದು ನಡೆಯಲಿದ್ದು, ಭಾರತ ತೊರೆಯುವಂತೆ ನೀಡಿರುವ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.