Independence Day 2025: ಈ ಬಾರಿ ನಾವು ಆಚರಿಸುತ್ತಿರುವುದು 78 ಅಥವಾ 79ನೇ ಸ್ವಾತಂತ್ರ್ಯ ದಿನವೇ?
ದೇಶಾದ್ಯಂತ ಈಗ ಸ್ವಾತಂತ್ರ್ಯ ದಿನದ ಸಂಭ್ರಮ. ಪ್ರತಿ ವರ್ಷವು ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುವಾಗ ವರ್ಷದ ಬಗ್ಗೆ ಗೊಂದಲ ಉಂಟಾಗುತ್ತದೆ. ಈ ಗೊಂದಲ ಯಾಕೆ ? ಈ ಬಾರಿ ನಾವು ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ? ಈ ಬಾರಿಯ ವಿಶೇಷತೆ, ಸಂದೇಶಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.


ನವದೆಹಲಿ: ದೇಶಾದ್ಯಂತ ಈಗ ಸ್ವಾತಂತ್ರ್ಯ ದಿನದ (Independence Day 2025) ಸಂಭ್ರಮ ಮನೆ ಮಾಡಿದೆ. ಇದಕ್ಕಾಗಿ ಭರ್ಜರಿ ಸಿದ್ದತೆಗಳು ಪ್ರಾರಂಭವಾಗಿದೆ. ಈ ಬಾರಿ ನಾವು 79ನೇ ಸ್ವಾತಂತ್ರ್ಯ ದಿನವನ್ನು (79th Independence Day) ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಗೌರವಿಸಲು ಸಂಭ್ರಮದಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹಳ್ಳಿಯಿಂದ ದಿಲ್ಲಿಯವರೆಗೆ ದೇಶದ ಪ್ರಮುಖ ಸ್ಥಳಗಳಲ್ಲಿ ಧ್ವಜಾರೋಹಣ, ದೇಶಭಕ್ತಿ ಗೀತೆಗಳು ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯ (Delhi) ಕೆಂಪು ಕೋಟೆಯಲ್ಲಿ (Red Fort) ಪ್ರಧಾನ ಮಂತ್ರಿ ಭಾಷಣ ಸಾಂಪ್ರದಾಯಿಕ ಶಿಷ್ಟಾಚಾರ ನಡೆಯುತ್ತದೆ.
ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಪ್ರತಿಯೊಂದು ಮನೆ, ಬೀದಿಗಳು ತ್ರಿವರ್ಣ ಧ್ವಜಗಳಿಂದ ಕಂಗೊಳಿಸಲಿದೆ. ಇದು ಬಾಲ್ಯದ ನೆನಪುಗಳನ್ನು ಮತ್ತೆ ಮನದಲ್ಲಿ ಅರಳಿಸುತ್ತದೆ.
ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಆಡಳಿತದಲ್ಲಿದ್ದ ಭಾರತ ಸಾಕಷ್ಟು ಹೋರಾಟದ ಬಳಿಕ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆಯಿತು. ಇದು ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನಗಳನ್ನು ನೆನಪಿಸಿ ನಮ್ಮ ಜವಾಬ್ದಾರಿ, ಕರ್ತವ್ಯಗಳ ಪಾಲನೆ ಮಾಡುವಂತೆ ಮಾಡುತ್ತದೆ.
ವರ್ಷದ ಬಗ್ಗೆ ಗೊಂದಲ ಏಕೆ?
ಭಾರತವು ಈ ಬಾರಿ 78 ಅಥವಾ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆಯೇ ಎನ್ನುವ ಗೊಂದಲ ಹಲವು ಮಂದಿಯಲ್ಲಿ ಇದೆ. ಯಾಕೆಂದರೆ 1947 ಅನ್ನು ಪ್ರಸ್ತುತ ವರ್ಷ 2025ರಿಂದ ಕಳೆದರೆ 78 ಸಿಗುತ್ತದೆ (2025-1947=78). ಇದು ಸ್ವಾತಂತ್ರ್ಯದ ಪೂರ್ಣಗೊಂಡ ವರ್ಷಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡುತ್ತದೆ. ಆಚರಣೆಗಳ ಸಂಖ್ಯೆಯನ್ನಲ್ಲ.
ಸಾಮಾನ್ಯವಾಗಿ ವಾರ್ಷಿಕೋತ್ಸವವೆಂದರೆ ಮೊದಲ ಸ್ವಾತಂತ್ರ್ಯದ ದಿನವಲ್ಲ. ಮುಂದಿನ ಸ್ವಾತಂತ್ರ್ಯದ ಮೊದಲ ವರ್ಷವಾಗಿದೆ. ಸರ್ಕಾರ ಮತ್ತು ಐತಿಹಾಸಿಕ ದಾಖಲೆಗಳಿಂದ ಅನುಮೋದಿಸಲ್ಪಟ್ಟ ಅಧಿಕೃತ ಎಣಿಕೆ ಯಾವಾಗಲೂ ಭಾರತ ಸ್ವತಂತ್ರವಾದ ನಿಜವಾದ ದಿನದಿಂದ ಮೊದಲ ಆಚರಣೆ ಪ್ರಾರಂಭವಾಗುತ್ತದೆ.
ಸರಿಯಾದ ಲೆಕ್ಕಾಚಾರವೆಂದರೆ 1947ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ದಿನವನ್ನು ಮೊದಲ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಈ ಮೂಲಕ ಎಣಿಸಿದರೆ 1947 ಮೊದಲನೇ ಸ್ವಾತಂತ್ರ್ಯ ದಿನವಾದರೆ ಈ ಬಾರಿ 2025ರ ಸ್ವಾತಂತ್ರ್ಯ ದಿನ 79ನೇ ಆಚರಣೆಯಾಗಿದೆ. ಅಂದರೆ 2025-1947+1= 79. ಹೀಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನವು ಭಾರತದ ಸ್ವಾತಂತ್ರ್ಯದ 79ನೇ ಆಚರಣೆಯಾಗಿದೆ.
ಈ ಬಾರಿ ಏನು ವಿಶೇಷ?
79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಬಾರಿ ಭಾರತದ ಪರಂಪರೆ ಮತ್ತು ಮೌಲ್ಯಗಳನ್ನು ಸಂಭ್ರಮಿಸಲು ವಿವಿಧ ರೀತಿಯ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗೌರವಿಸಲು ಮತ್ತು ದೇಶದ ರೋಮಾಂಚಕ ಪ್ರಯಾಣವನ್ನು ಆಚರಿಸಲು ರಾಷ್ಟ್ರವ್ಯಾಪಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.