ನವದೆಹಲಿ: ಭಾರತೀಯ ವಾಯುಪಡೆಯ (India Defence) ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central Government) ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಗುರುವಾರ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಅಂದಾಜು 3.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬೃಹತ್ ಒಪ್ಪಂದಕ್ಕೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಗೆ ಕೆಲವೇ ದಿನಗಳ ಮೊದಲು ಚಾಲನೆ ಸಿಕ್ಕಿರುವುದು ವಿಶೇಷವಾಗಿದೆ.
ಒಪ್ಪಂದದಲ್ಲೇನಿದೆ?
ಒಟ್ಟು 114 ವಿಮಾನಗಳು: ಭಾರತವು 114 ರಫೇಲ್ ವಿಮಾನಗಳನ್ನು ಪಡೆಯಲಿದ್ದು, ಇದರಲ್ಲಿ 88 ಏಕ-ಆಸನ (Single-seat) ಮತ್ತು 26 ಅವಳಿ-ಆಸನ (Twin-seat) ವಿಮಾನಗಳು ಸೇರಿವೆ. ಮೇಕ್ ಇನ್ ಇಂಡಿಯಾ: ಈ ಒಪ್ಪಂದದ ಅಡಿಯಲ್ಲಿ, 18 ವಿಮಾನಗಳು ನೇರವಾಗಿ ಫ್ರಾನ್ಸ್‌ನಿಂದ ಹಾರಾಟದ ಸ್ಥಿತಿಯಲ್ಲಿ (ready to fly) ಬರಲಿವೆ. ಉಳಿದ 96 ವಿಮಾನಗಳನ್ನು ಭಾರತದಲ್ಲೇ ಜೋಡಿಸಲಾಗುತ್ತದೆ.
ದೇಶೀಯ ಪಾಲು: ಶೇ. 80ರಷ್ಟು ವಿಮಾನಗಳನ್ನು ದೇಶೀಯವಾಗಿಯೇ ತಯಾರಿಸಲು ಯೋಜಿಸಲಾಗಿದ್ದು, 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಶೇ. 60ರಷ್ಟು ಭಾರತೀಯ ಬಿಡಿಭಾಗಗಳನ್ನು ಬಳಸುವ ಗುರಿ ಹೊಂದಲಾಗಿದೆ.
Sarla Maheshwari Death: ದೂರದರ್ಶನದ ಸುವರ್ಣ ಯುಗದ ದನಿ ಅಸ್ತಂಗತ: ಖ್ಯಾತ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ
ವಾಯುಪಡೆಯ ಅಗತ್ಯ ಮತ್ತು ಸಾಮರ್ಥ್ಯ
ವರದಿಗಳ ಪ್ರಕಾರ ಪ್ರಸ್ತುತ ಭಾರತೀಯ ವಾಯುಪಡೆಯು ವಿಮಾನಗಳ ಕೊರತೆಯನ್ನು ಎದುರಿಸುತ್ತಿದೆ. ಮಂಜೂರಾದ 42 ಸ್ಕ್ವಾಡ್ರನ್‌ಗಳ ಬದಲಿಗೆ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ನಡುವೆ ಈ 114 ರಫೇಲ್ ವಿಮಾನಗಳ ಸೇರ್ಪಡೆ ಭಾರತಕ್ಕೆ ಆನೆ ಬಲ ನೀಡಲಿದೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿಯು ಭಾರತದ ಖಾಸಗಿ ವಲಯದ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಈ ವಿಮಾನಗಳ ಉತ್ಪಾದನೆ ಮತ್ತು ಜೋಡಣೆಯನ್ನು ಮಾಡಲಿವೆ. ಇದು ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.
ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ
ಭಾರತವು ಈ ಹಿಂದೆ 36 ರಫೇಲ್ ವಿಮಾನಗಳನ್ನು ಖರೀದಿಸಿತ್ತು. ಜುಲೈ 2020ರಲ್ಲಿ ಮೊದಲ ಐದು ವಿಮಾನಗಳು ಅಂಬಾಲಾ ವಾಯುನೆಲೆಗೆ ಆಗಮಿಸಿದ್ದವು. ಪ್ರಸ್ತುತ ಭಾರತದಲ್ಲಿ ಎರಡು ರಫೇಲ್ ಸ್ಕ್ವಾಡ್ರನ್‌ಗಳಿವೆ.
- ಹರಿಯಾಣದ ಅಂಬಾಲಾದಲ್ಲಿರುವ ನಂ. 17 "ಗೋಲ್ಡನ್ ಆರೋಸ್".
- ಪಶ್ಚಿಮ ಬಂಗಾಳದ ಹಸಿಮಾರಾದಲ್ಲಿರುವ ನಂ. 101 "ಫಾಲ್ಕನ್ಸ್".
ಈ ಹೊಸ ಒಪ್ಪಂದವು ಅಂತಿಮಗೊಂಡರೆ, ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಪಡೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.