ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜರ್ಮನಿ-ಜಪಾನ್ ಸಾಲಿಗೆ ಭಾರತ: ಹೈಡ್ರೋಜನ್ ರೈಲಿಗೆ ಅನುಮೋದನೆ

ಭಾರತೀಯ ರೈಲ್ವೆಯು ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಆಧಾರಿತ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಪರಿಸರ ಸ್ನೇಹಿ ಹಾಗೂ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುವ ಈ ರೈಲು ಗಂಟೆಗೆ 75 ಕಿಮೀ ವೇಗದಲ್ಲಿ ಸಂಚರಿಸಲಿದೆ.

ಹೈಡ್ರೋಜನ್ ರೈಲು

ನವದೆಹಲಿ, ಮೇ 28: ಹಸಿರು ಮತ್ತು ಸುಸ್ಥಿರ (energy - efficient) ಸಾರಿಗೆಗೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ (Indian Railways)ಯು ಹರಿಯಾಣ (Haryana)ದ ಜಿಂದ್-ಸೋನಿಪತ್ (Jind-Sonipat ) ಮಾರ್ಗದಲ್ಲಿ 10-ಬೋಗಿಗಳ ಹೈಡ್ರೋಜನ್ ಇಂಧನ ಕೋಶ ಆಧಾರಿತ ರೈಲನ್ನು ಓಡಿಸಲು ಮೇ 27 ರಂದು ಅನುಮೋದನೆ ನೀಡಿದೆ. 1,200 ಕಿಲೋವ್ಯಾಟ್ ಹೈಡ್ರೋಜನ್ ಪ್ರೊಪಲ್ಷನ್ ವ್ಯವಸ್ಥೆ (hydrogen fuel cell propulsion system) ಹೊಂದಿರುವ ಈ ಆಧುನಿಕ ರೈಲು ಗಂಟೆಗೆ ಗರಿಷ್ಠ 75 ಕಿಮೀ ವೇಗದಲ್ಲಿ ಚಲಿಸಲಿದ್ದು, ಶೀಘ್ರದಲ್ಲೇ ತನ್ನ ಅಧಿಕೃತ ಕಾರ್ಯಾರಂಭ ಮಾಡಲಿದೆ. ಇದರೊಂದಿಗೆ ಸ್ವಚ್ಛ ರೈಲು ಸಾರಿಗೆಗಾಗಿ ಹೈಡ್ರೋಜನ್ ತಂತ್ರಜ್ಞಾನ ಬಳಸುತ್ತಿರುವ ಜರ್ಮನಿ (Germany), ಜಪಾನ್ (Japan), ಚೀನಾ (China) ಮತ್ತು ಅಮೆರಿಕ (America)ದಂತಹ ವಿಶ್ವದ ಗಣ್ಯ ದೇಶಗಳ ಸಾಲಿಗೆ ಭಾರತ (India)ವೂ ಹೆಮ್ಮೆಯಿಂದ ಸೇರಿದೆ.

ಭಾರತೀಯ ರೈಲ್ವೆಯು ಈಗಾಗಲೇ ತನ್ನ ಶೇ. 100 ರಷ್ಟು ಜಾಲವನ್ನು ವಿದ್ಯುದ್ದೀಕರಿಸಿದ್ದು, ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈಗ ಹೈಡ್ರೋಜನ್ ರೈಲುಗಳ ಮೂಲಕ ರೈಲ್ವೆಯು ತಂತ್ರಜ್ಞಾನದ ಮುಂದಿನ ಹಂತಕ್ಕೆ ತಲುಪಿದ್ದು, ಈ ರೈಲುಗಳು ಚಲಿಸುತ್ತಿರುವಾಗ ಸ್ವತಃ ಇಂಧನದಿಂದ ವಿದ್ಯುತ್ ಉತ್ಪಾದಿಸಲಿವೆ. ಹೈಡ್ರೋಜನ್ ಇಂಧನ ಕೋಶಗಳು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತವೆ. ಇದರಲ್ಲಿ ಕೇವಲ ನೀರಿನ ಹಾವಿ ಮಾತ್ರ ಹೊರಸೂಸುವುದರಿಂದ ಇದು ಸಂಪೂರ್ಣ ಪರಿಸರಸ್ನೇಹಿಯಾಗಿದೆ. ಜಿಂದ್‌ನಲ್ಲಿ ಸ್ಥಳೀಯ ಇಂಧನ ಸಂಗ್ರಹಣೆ ಮತ್ತು ಮರುಪೂರಣ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (PESO) ಅಗತ್ಯ ಅನುಮತಿ ನೀಡಿದೆ. ಆರಂಭಿಕ ಹಂತದಲ್ಲಿ ತಾಂತ್ರಿಕ ಸಿಬ್ಬಂದಿ ರೈಲಿನಲ್ಲಿ ಇರಲಿದ್ದಾರೆ.

ಮುಸ್ಲಿಂ ವ್ಯಾಪಾರಿಯ ಪರವಾಗಿ ನಿಂತಿದ್ದ ಮೊಹಮ್ಮದ್ ದೀಪಕ್‌ಗೆ ಸಂಕಷ್ಟ; ಜಿಮ್ ಕಳೆದುಕೊಳ್ಳುವ ಭೀತಿ

ಸುರಕ್ಷತಾ ಕ್ರಮಗಳು:

ಈ ಹೊಸ ತಂತ್ರಜ್ಞಾನವು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗಿದೆ:

ಮರುಪೂರಣ ವ್ಯವಸ್ಥೆಯ 24x7 ನಿರಂತರ ಮೇಲ್ವಿಚಾರಣೆ.

ಪ್ರಮಾಣೀಕೃತ ಸಿಬ್ಬಂದಿಗಳ ನಿಯೋಜನೆ ಮತ್ತು ನಿಯಮಿತ ನಿರ್ವಹಣೆ.

ಹೈಡ್ರೋಜನ್ ಸೋರಿಕೆ ಮತ್ತು ಜ್ವಾಲೆ ಪತ್ತೆಹಚ್ಚುವ ಸಂವೇದಕಗಳ ಅಳವಡಿಕೆ.

ಧೂಳು ಸಂಗ್ರಹಣೆಯನ್ನು ತಡೆಗಟ್ಟಲು ನಿಯಮಿತ ಸ್ವಚ್ಛತೆ.

ಹೈಡ್ರೋಜನ್ ಶಟಲ್ ಬಸ್

ಇತ್ತೀಚೆಗೆ ದೆಹಲಿ ಮೆಟ್ರೋ ರೈಲು ನಿಗಮವು (DMRC) ನವದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ಮೊದಲ ಹೈಡ್ರೋಜನ್ ಚಾಲಿತ ಶಟಲ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಒದಗಿಸಿರುವ ಈ 35 ಆಸನಗಳ ಬಸ್‌ಗಳು ಜಿಪಿಎಸ್ ಮತ್ತು ಸಿಸಿಟಿವಿ ವ್ಯವಸ್ಥೆಯನ್ನು ಹೊಂದಿದ್ದು, ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ದಕ್ಷತೆಗೆ ಭಾರತ ಸರ್ಕಾರದ ಈ ಹಸಿರು ಉಪಕ್ರಮಗಳು ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿವೆ.