ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಡಿಯಾ ಮೈತ್ರಿಕೂಟದಲ್ಲಿ ಮತ್ತೆ ಬಿರುಕು; ಮಹತ್ವದ ಸಭೆಗೆ ಆಮ್‌ ಆದ್ಮಿ, ಡಿಎಂಕೆ ನಾಯಕರು ಸೇರಿ ಹಲವರು ಗೈರು

ಇಂಡಿಯಾ ಒಕ್ಕೂಟವು ಚುನಾವಣಾ ಆಯೋಗದ ಕಾರ್ಯನಿರ್ವಹಣೆ, ಎಸ್‌ಐಆರ್‌ ಅಕ್ರಮ ಕುರಿತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟಿನ ಹೋರಾಟ ನಡೆಸುವ ನಿಟ್ಟಿನಲ್ಲಿ ಇಂಡಿಯಾ ಬಣದ ಉನ್ನತ ನಾಯಕ ಸಭೆ ನಡಸಿದೆ. ಆದರೆ, ಬಿಜೆಪಿಯನ್ನು ಕಟ್ಟಿಹಾಕಲು ರಚನೆಯಾಗಿದ್ದ 'ಇಂಡಿಯಾ' ಒಕ್ಕೂಟದ ಒಳಗಿನ ಬಿರುಕು ಮತ್ತೆ ಬಹಿರಂಗವಾಗಿದೆ. ದೆಹಲಿಯಲ್ಲಿ ನಡೆದ ಮಹತ್ವದ ಸಭೆಗೆ ಆಮ್‌ ಆದ್ಮಿ ಪಕ್ಷ, ಡಿಎಂಕೆ ನಾಯಕರು ಗೈರಾಗಿದ್ದರೆ, ಅಖಿಲೇಶ್ ಯಾದವ್ ಅಂತರ ಕಾಯ್ದುಕೊಂಡಿದ್ದಾರೆ.

ಇಂಡಿಯಾ ಮೈತ್ರಿಕೂಟದ ಸಭೆ

ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಕೂಟವನ್ನು ಎದುರಿಸಲು ರಚನೆಯಾಗಿದ್ದ ವಿಪಕ್ಷಗಳ 'ಇಂಡಿಯಾ' ಒಕ್ಕೂಟದ (INDIA Bloc) ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೆ ಬೀದಿಗೆ ಬಂದಿವೆ. ಬುಧವಾರ ನವದೆಹಲಿಯಲ್ಲಿ ಕರೆಯಲಾಗಿದ್ದ ಅತ್ಯಂತ ಪ್ರಮುಖ ಒಕ್ಕೂಟದ ಸಭೆಯಿಂದ ಆಮ್ ಆದ್ಮಿ ಪಾರ್ಟಿ (Aam Admi Party) ಹಾಗೂ ಡಿಎಂಕೆ ದೂರ ಉಳಿದಿದ್ದರೆ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ನೇರವಾಗಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ.

ಮುಂದಿನ ಚುನಾವಣಾ ತಂತ್ರಗಾರಿಕೆ, ಸೀಟು ಹಂಚಿಕೆ ಹಾಗೂ ಎಸ್‌ಐಆರ್‌ ಅಕ್ರಮ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ ಪ್ರಮುಖ ಪ್ರಾದೇಶಿಕ ನಾಯಕರ ಅನುಪಸ್ಥಿತಿಯು ಒಕ್ಕೂಟದ ಒಗ್ಗಟ್ಟಿನ ಮೇಲೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಮತ್ತು ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ಪಕ್ಷಗಳು ನಡುವೆ ಸಾಮಾನ್ಯ ಮಾತುಕತೆ ಮತ್ತು ಕಾರ್ಯತಂತ್ರ ರೂಪಿಸುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.

ಆಮ್‌ ಆದ್ಮಿ ಮತ್ತು ಡಿಎಂಕೆ ಸಭೆಯಿಂದ ದೂರ

ಸಭೆಯಲ್ಲಿ ಮತ್ತು ಆಮ್‌ ಆದ್ಮಿ ಪಕ್ಷ ಡಿಎಂಕೆ ಭಾಗವಹಿಸುತ್ತಿಲ್ಲ. ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯಲ್ಲಿ ಉಂಟಾದ ಶೀತಲ ಸಮರದಿಂದಾಗಿ ಡಿಎಂಕೆ 'ಇಂಡಿಯಾ' ಒಕ್ಕೂಟದ ಸಭೆಗಳಿಂದ ದೂರ ಉಳಿಯಲು ನಿರ್ಧರಿಸಿದೆ. ತತ್ವ ಸಿದ್ಧಾಂತದ ಆಧಾರದಲ್ಲಿ ಬಿಜೆಪಿಯನ್ನು ವಿರೋಧಿಸುತ್ತೇವೆಯೇ ಹೊರತು, ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಭಾಗವಾಗಿ ಅಲ್ಲ ಎಂದು ಡಿಎಂಕೆ ಸ್ಪಷ್ಟಪಡಿಸಿದೆ. ದೆಹಲಿ, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಕಾಂಗ್ರೆಸ್‌‌ ವಿರುದ್ಧ ನೇರ ಸ್ಪರ್ಧೆಯಲ್ಲಿರುವ ಆಪ್‌, ಕಾಂಗ್ರೆಸ್‌ನ ಏಕಪಕ್ಷೀಯ ಧೋರಣೆಯನ್ನು ಖಂಡಿಸಿ ಸಭೆಯನ್ನು ಬಹಿಷ್ಕರಿಸಿದೆ. ʼʼಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಾಗಿ ತನ್ನ ಮೈತ್ರಿಕೂಟದ ಸಹವರ್ತಿಗಳ ವಿರುದ್ಧವೇ ಹೋರಾಡುತ್ತಿದೆʼʼ ಎಂದು ಆಪ್ ನಾಯಕರು ಟೀಕಿಸಿದ್ದಾರೆ.

ಸಭೆಗೆ ಅಖಿಲೇಶ್ ಯಾದವ್ ಅಲಭ್ಯತೆ

ಉತ್ತರ ಪ್ರದೇಶದಲ್ಲಿ 2027 ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ನಡುವೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಪೂರ್ವ ನಿಯೋಜಿತ ಕಾರ್ಯಕ್ರಮದ ನೆಪವೊಡ್ಡಿ ಅಖಿಲೇಶ್ ಖುದ್ದಾಗಿ ಬರದೆ ತಮ್ಮ ಪ್ರತಿನಿಧಿಯನ್ನು ಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಹೇಮಂತ್ ಸೊರೇನ್ ಖುದ್ದಾಗಿ ದೆಹಲಿಗೆ ಆಗಮಿಸದೆ ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ʼದೇಶದ್ರೋಹಿʼ ಎಂದು ಕರೆದ ರಾಹುಲ್‌ ಗಾಂಧಿ; ರಾಜೀನಾಮೆಗೆ ಪಟ್ಟು

2024ರ ಲೋಕಸಭಾ ಚುನಾವಣೆಯಲ್ಲಿ ಒಂದಾಗಿದ್ದ ವಿಪಕ್ಷಗಳ 'ಇಂಡಿಯಾ' ಕೂಟ, ರಾಜ್ಯ ಮಟ್ಟದ ಸ್ಥಳೀಯ ಚುನಾವಣೆಗಳು ಎದುರಾಗುತ್ತಿದ್ದಂತೆ ಶಿಥಿಲಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಮುಂಬರುವ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಅತಿಯಾದ ಸೀಟು ಬೇಡಿಕೆ ಹಾಗೂ ಪ್ರಾದೇಶಿಕ ನಾಯಕರ ಮೇಲಿನ ಪೈಪೋಟಿ ಒಕ್ಕೂಟಕ್ಕೆ ಮುಳುವಾಗಿದೆ. ಆಡಳಿತಾರೂಢ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದಕ್ಕಿಂತ ಮುಂಚಿತವಾಗಿ, ಮೈತ್ರಿಕೂಟದ ಒಳಗಿನ ನಾಯಕರನ್ನು ಒಟ್ಟಾಗಿ ಕರೆದೊಯ್ಯುವುದೇ ಕಾಂಗ್ರೆಸ್‌ಗೆ ಈಗ ದೊಡ್ಡ ಆತಂಕ ಹಾಗೂ ಪ್ರಮುಖ ಸವಾಲಾಗಿ ಪರಿಣಮಿಸಿದೆ.

Vishakha Bhat Heggar

View all posts by this author