ನವದೆಹಲಿ, ಅ. 7: ಕೇಂದ್ರ ದೆಹಲಿಯ ರೆಸ್ಟೋರೆಂಟ್‌ನಲ್ಲಿ ಕಾರ್ಯತಂತ್ರದ ಸಭೆಯ ಭೋಜನ ಮುಗಿಸಿದ ಬಳಿಕ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ (INDIA alliance) ನಾಯಕರು ಜಂತರ್ ಮಂತರ್‌ಗೆ ತೆರಳಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧದ ಪ್ರತಿಭಟನೆ ಮುಂದುವರಿಸಲು ಮುಂದಾದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇದ್ದ ಬಸ್‌ನ ಟೈರ್ ಪಂಕ್ಚರ್ ಆಗಿದ್ದರಿಂದ ಮತ್ತೊಂದು ವಾಹನದಲ್ಲಿ ಪೊಲೀಸರು ಕರೆದೊಯ್ದರು.
ಮಂಗಳವಾರ (ಅ. 6) ನಡೆದ ಹೈಡ್ರಾಮಾದ ಬಳಿಕ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು ಬುಧವಾರ ದೆಹಲಿಯ ಜನ್‌ಪಥ್‌ನಲ್ಲಿರುವ ಸಾಗರ್ ರತ್ನ ರೆಸ್ಟೋರೆಂಟ್‌ನಲ್ಲಿ ಸಭೆ ಸೇರಿದರು. ಮಂಗಳವಾರ ರಾಹುಲ್ ಗಾಂಧಿ ಧರಣಿ ನಡೆಸಿದ ಬಳಿಕ ಅವರನ್ನು ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮತ ಕಳವು ವಿಷಯದ ಕುರಿತು ಗದ್ದಲವನ್ನು ಹೆಚ್ಚಿಸುವ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುವ ಸಲುವಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಹ್ವಾನದ ಮೇರೆಗೆ ಈ ಸಭೆ ನಡೆಯಿತು. ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಮತ ಕಳವು ವಿಚಾರವನ್ನು ಜನರ ಬಳಿಗೆ ಕೊಂಡೊಯ್ಯುವುದಾಗಿ ಹೇಳಿದರು. ಈ ವಿಚಾರವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು.
CEC ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ವೇಳೆ ಹೈಡ್ರಾಮಾ
ಜನಪಥ್‌ನಲ್ಲಿರುವ ಸಾಗರ್ ರತ್ನ ರೆಸ್ಟೋರೆಂಟ್‌ನ ಹೊರಗೆ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಊಟದ ನಂತರ ಸಂಸದರು ಅವುಗಳನ್ನು ಹತ್ತಿ ಜಂತರ್ ಮಂತರ್ ಕಡೆಗೆ ತೆರಳಿದರು. ಜಂತರ್ ಮಂತರ್‌ಗೆ ಹೋಗುವ ಎಲ್ಲ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ವಿರೋಧ ಪಕ್ಷದ ಸಂಸದರನ್ನು ಕರೆದೊಯ್ಯುತ್ತಿದ್ದ ಬಸ್‌ಗಳನ್ನು ದಾರಿಯಲ್ಲಿ ಪೊಲೀಸರು ತಡೆದರು.
ಜಂತರ್ ಮಂತರ್‌ನಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಪೂರ್ವಾನುಮತಿ ಅಗತ್ಯವಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಂತಹ ಅನುಮತಿಗಾಗಿ ಅರ್ಜಿಗಳನ್ನು ಉದ್ದೇಶಿತ ಕಾರ್ಯಕ್ರಮಕ್ಕೆ ಕನಿಷ್ಠ 10 ದಿನಗಳ ಮೊದಲು ನವದೆಹಲಿ ಜಿಲ್ಲೆಯ ಉಪ ಪೊಲೀಸ್ ಆಯುಕ್ತರಿಗೆ ಸಲ್ಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅರ್ಜಿ ಬಂದಿಲ್ಲ ಎಂದೂ ಹೇಳಿದ್ದಾರೆ.
ವಿರೋಧ ಪಕ್ಷದ ಸಂಸದರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಾನು ನಿನ್ನೆ ಹೇಳಿದಂತೆ, ಸುಮಾರು 300 ಸಂಸದರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಬಯಸಿದ್ದರು. ಆದರೆ ಅಲ್ಲಿ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಲಾಯಿತು. ಆದ್ದರಿಂದ ಇಂದು ನಾವು ನಿಗದಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ತೆರಳಿ, ಮತ್ತೊಮ್ಮೆ ಒಟ್ಟಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಜ್ಞಾನೇಶ್ ಕುಮಾರ್ ಅವರು ದೇಶದ ಕಾನೂನುಬದ್ಧ ಚುನಾವಣಾ ಆಯುಕ್ತರಲ್ಲ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಮತ್ತು ಜ್ಞಾನೇಶ್ ಕುಮಾರ್ ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ʼʼನನ್ನ ವಿರುದ್ಧ 45 ಎಫ್‌ಐಆರ್‌ಗಳಿವೆ. ನನ್ನ ಗುರಿ 100ʼʼ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಅನುಮತಿಯಿಲ್ಲದೆ ಆಕಾಶವಾಣಿ ಭವನಕ್ಕೆ ಪ್ರವೇಶಿಸಿ ಮಂಗಳವಾರ ಆವರಣದಲ್ಲಿ ಆರು ಗಂಟೆಗಳ ಕಾಲ ಧರಣಿ ನಡೆಸಿದ ಆರೋಪದ ಮೇಲೆ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.