ನವದೆಹಲಿ, ಡಿ. 26: ಬಾಂಗ್ಲಾದೇಶದಲ್ಲಿ (Bangaladesh) ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರ (Violence Against Minorities) ಕುರಿತು ಭಾರತ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಹಿಂದೂ, ಕ್ರೈಸ್ತರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ನಿರಂತರ ದ್ವೇಷಪೂರ್ಣ ದಾಳಿಗಳನ್ನು ರಾಜಕೀಯ ಹಿಂಸಾಚಾರ ಅಥವಾ ಸುಳ್ಳು ಸುದ್ದಿಗಳು ಎಂದು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾರತ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಂಧೀರ್ ಜೈಸ್ವಾಲ್, "ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದಾಳಿಗಳು ಚಿಂತೆಯ ವಿಷಯ. ಇತ್ತೀಚೆಗೆ ನಡೆದ ಹಿಂದೂ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ ಮತ್ತು ಅಪರಾಧಿಗಳನ್ನು ಕಾನೂನಿನ ಮುಂದೆ ಹಾಜರುಪಡಿಸಲಾಗುತ್ತದೆ ಎನ್ನುವ ನಿರೀಕ್ಷೆ ಇದೆ” ಎಂದು ಅವರು ತಿಳಿಸಿದ್ದಾರೆ.
ʼʼಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಭಾರತ ಸತತವಾಗಿ ತನ್ನ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. MEA ಮಾಹಿತಿ ಪ್ರಕಾರ, ಬಾಂಗ್ಲಾದೇಶದ ತಾತ್ಕಾಲಿಕ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಸುಮಾರು 2,900 ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಈ ಕುರಿತು ನಾವು ಹಿಂದೆ ಕೂಡ ಹೇಳಿಕೆಗಳನ್ನು ನೀಡಿದ್ದು, ತಪ್ಪು ವರದಿಗಳನ್ನು ತಳ್ಳಿಹಾಕಿದ್ದೇವೆʼʼ ಎಂದು ಅವರು ಹೇಳಿದ್ದಾರೆ.
ರಂಧೀರ್ ಜೈಸ್ವಾಲ್ ಅವರ ಹೇಳಿಕೆ:
17 ವರ್ಷಗಳ ಬಳಿಕ ಚುನಾವಣೆಗೂ ಮುನ್ನ ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ʼʼಬಾಂಗ್ಲಾದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕೆಂದು ಭಾರತ ಆಶಿಸುತ್ತದೆ ಮತ್ತು ಈ ಬೆಳವಣಿಗೆಯನ್ನು ಆ ದೆಸೆಯಲ್ಲಿ ನೋಡಬೇಕುʼʼ ಎಂದು ಅವರು ತಿಳಿಸಿದ್ದಾರೆ.
ದೀಪು ಚಂದ್ರ ದಾಸ್ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ
ʼʼಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಕುರಿತು ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ ಅವರು, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಮತ್ತು ಧರ್ಮಭೇದವಿಲ್ಲದೆ ಎಲ್ಲ ನಾಗರಿಕರನ್ನು ರಕ್ಷಿಸುವ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಬಾಂಗ್ಲಾದೇಶ ಸರ್ಕಾರ ನಿರ್ವಹಿಸಬೇಕು ಎಂದು ಭಾರತ ನಿರೀಕ್ಷಿಸುತ್ತದೆʼʼ ಎಂದು ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದಲ್ಲಿ ಅಶಾಂತಿ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಉಂಟಾದ ಅಶಾಂತಿ ಕುರಿತು MEA ವರದಿ ಮಾಡಿದೆ. ಜುಲೈ ದಂಗೆ ಹಾಗೂ ಇಂಕಿಲಾಬ್ ಮಂಚದ ಸಂಚಾಲಕ ಶರೀಫ್ ಉಸ್ಮಾನ್ ಹಾದಿ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಹಾದಿ ಡಿಸೆಂಬರ್ 12ರಂದು ಢಾಕಾದಲ್ಲಿ ಗಾಯಗೊಂಡಿದ್ದ.
ಪ್ರತಿಭಟನೆ ವೇಳೆ ಮಾಧ್ಯಮ ಕಚೇರಿಗಳು, ಸಾಂಸ್ಕೃತಿಕ ಕೇಂದ್ರಗಳು ಮತ್ತು ರಾಜಕೀಯ ಪಕ್ಷಗಳ ಕಚೇರಿಗಳ ಮೇಲೆ ದಾಳಿಗಳು ನಡೆದವು. ಸುಳ್ಳು ಧರ್ಮನಿಂದನೆ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹತ್ಯೆ ಮಾಡಿ ಸಾರ್ವಜನಿಕವಾಗಿ ಬೆಂಕಿ ಹಚ್ಚಿ ಅಮಾನುಷವಾಗಿ ನಡೆದುಕೊಂಡಿದೆ. ಅದರ ಬೆನ್ನಲ್ಲೇ ಅಮೃತ್ ಮಂಡಲ್ ಎಂಬ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನೂ ಕಿರಾತಕರು ಹತ್ಯೆ ಮಾಡಿದ್ದಾರೆ.
ಈ ನಡುವೆ ಕೆಲ ಯುವ ನಾಯಕರು ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ವರದಿಗಳೂ ಬಂದಿವೆ. ಇತ್ತೀಚಿನ ವಾರಗಳಲ್ಲಿ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಬಾಂಗ್ಲಾದೇಶದ ಭದ್ರತಾ ಪಡೆಗಳು ತಡೆದಿದ್ದವು. ಕಳೆದ ವಾರ ಚಿಟಗಾಂಗ್‌ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಟ್ಟಡದ ಮೇಲೂ ಕಲ್ಲು ತೂರಾಟ ನಡೆದಿತ್ತು.
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ತಾತ್ಕಾಲಿಕ ಆಡಳಿತದಲ್ಲಿರುವ ಬಾಂಗ್ಲಾದೇಶವು ಪ್ರಸ್ತುತ ಚುನಾವಣಾ ಸಿದ್ಧತೆಗಳು ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ನಡುವೆ ಸಂಕಷ್ಟವನ್ನು ಎದುರಿಸುತ್ತಿದ್ದು, ಇದರಿಂದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.