ದೆಹಲಿ, ಮೇ 20: ಭಾರತದ ಬಹುತೇಕ ಭಾಗಗಳು ತೀವ್ರತರದ ಉಷ್ಣಗಾಳಿ (Heatwave) ಹಾಗೂ ಬಿಸಿಲಿಗೆ ತತ್ತರಿಸಿ ಹೋಗಿವೆ. ದೇಶದ ಪ್ರಮುಖ ನಗರಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಅತ್ಯಂತ ಹೆಚ್ಚಾಗಿದೆ. ದೆಹಲಿಯಲ್ಲಿ 42ರಿಂದ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಹಮದಾಬಾದ್ ಮತ್ತು ನಾಗ್ಪುರದಲ್ಲಿ 41ರಿಂದ 43 ಡಿಗ್ರಿ ಸೆಲ್ಸಿಯಸ್ ಹಾಗೂ ಜೈಪುರ ಹಾಗೂ ಲಖನೌನಲ್ಲಿ 40ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಸತತವಾಗಿ ತಾಪಮಾನವು ಭೀಕರ 42.6 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮಹಾರಾಷ್ಟ್ರದ ವಿದರ್ಭ ಸೇರಿ ದಕ್ಷಿಣದ ಭಾಗಗಳಲ್ಲೂ ಇದೇ ರೀತಿಯ ಕಠಿಣ ಪರಿಸ್ಥಿತಿ ಇದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ, ಕರಾವಳಿ ಪ್ರದೇಶವಾದ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ತಾಪಮಾನ 30ರ ಆಸುಪಾಸಿನಲ್ಲಿದ್ದರೂ ವಿಪರೀತ ಸೆಕೆಯಿಂದ ಕೂಡಿದೆ. ರಾತ್ರಿಯ ವೇಳೆ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಿರುವುದು ಜನರನ್ನು ಕಂಗೆಡಿಸಿದೆ.
ಹವಾಮಾನ ಮುನ್ಸೂಚನೆ
ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳಿಗೆ ಸದ್ಯಕ್ಕಂತೂ ಬಿಸಿಲಿನಿಂದ ಮುಕ್ತಿ ಸಿಗುವ ಲಕ್ಷಣಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಕೆಲವು ದಿನಗಳ ಕಾಲ ತೀವ್ರ ಉಷ್ಣಗಾಳಿ ಮುಂದುವರಿಯಲಿದ್ದು, ಪಶ್ಚಿಮದ ಮಾರುತಗಳು ಹಾಗೂ ಪ್ರಾದೇಶಿಕ ಚಂಡಮಾರುತಗಳು ಬರುವ ಮುನ್ನ ಕೆಲವು ಭಾಗಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಬಹುದು.
ಭಾರತ ಈ ಪರಿ ಸುಡುತ್ತಿರುವುದಕ್ಕೆ ಕಾರಣಗಳೇನು?
ಏಪ್ರಿಲ್ ಮತ್ತು ಮೇಯಲ್ಲಿ ಸೂರ್ಯನ ತೀವ್ರ ಕಿರಣಗಳು, ಒಣ ಮಾರುತಗಳು ಮತ್ತು ರಾಜಸ್ಥಾನ ಹಾಗೂ ಪಾಕಿಸ್ತಾನದ ಭಾಗಗಳಲ್ಲಿ ಉಂಟಾಗುವ ಕಡಿಮೆ ಒತ್ತಡದ ವಲಯಗಳಿಂದಾಗಿ ಬಿಸಿಲು ಹೆಚ್ಚಿರುವುದು ಸಹಜ ಪ್ರಕ್ರಿಯೆ. ಆದರೆ ಈ ಬಾರಿಯ ತೀವ್ರತೆಗೆ ಪ್ರಮುಖವಾಗಿ ಎರಡು ಕಾರಣಗಳಿವೆ:
ಬೇಸಿಗೆಯಲ್ಲಿ ದೇಹವನ್ನು ನೈಸರ್ಗಿಕವಾಗಿ ತಣಿಸಲು ಅಡುಗೆ ಕೋಣೆಯಲ್ಲೇ ಇದೆ ಔಷಧ
ನಗರಗಳ ಉಷ್ಣ ದ್ವೀಪ ಪರಿಣಾಮ: ನಗರ ಪ್ರದೇಶಗಳಲ್ಲಿ ಗಿಡಮರಗಳ ಸಂಖ್ಯೆ ಕ್ಷೀಣಿಸಿ, ಅವುಗಳ ಜಾಗದಲ್ಲಿ ಕಾಂಕ್ರೀಟ್, ಉಕ್ಕು ಮತ್ತು ಗ್ಲಾಸ್ ಕಟ್ಟಡಗಳು ಬಂದಿರುವುದರಿಂದ ಅವು ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತವೆ. ಇದರಿಂದಾಗಿ ಗ್ರಾಮೀಣ ಭಾಗಗಳಿಗಿಂತ ನಗರಗಳಲ್ಲಿ 10 ಡಿಗ್ರಿಯಷ್ಟು ಹೆಚ್ಚಿನ ತಾಪಮಾನ ಇರುತ್ತದೆ.
ಎಲ್ ನಿನೋ (El Nino) ಪರಿಣಾಮ: ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ಅತಿಯಾಗಿ ಬೆಚ್ಚಗಾಗುವ ಜಾಗತಿಕ ಹವಾಮಾನ ವೈಪರೀತ್ಯವನ್ನು 'ಎಲ್ ನಿನೋ' ಎನ್ನಲಾಗುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಎಲ್ ನಿನೋ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದರಿಂದ ಜಾಗತಿಕ ತಾಪಮಾನ ತೀವ್ರಗೊಂಡಿದೆ.
ಮಳೆ ಮೇಲಾಗುವ ಪರಿಣಾಮ ಹಾಗೂ ಮುನ್ನೆಚ್ಚರಿಕೆ
ಎಲ್ ನಿನೋ ಪ್ರಭಾವದಿಂದಾಗಿ ಏಷ್ಯಾ ಮತ್ತು ಆಸ್ಟ್ರೇಲಿಯಾ ಭಾಗಗಳಲ್ಲಿ ಒಣ ಹವಾಮಾನ ಸೃಷ್ಟಿಯಾಗುತ್ತದೆ. ಹೀಗಾಗಿ ಭಾರತದಲ್ಲಿ ಈ ಬಾರಿಯ ನೈಋತ್ಯ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಕಡಿಮೆ (ಶೇ. 90ರಿಂದ 95ರಷ್ಟು) ಇರಲಿದೆ ಎಂದು ಐಎಂಡಿ ಈಗಾಗಲೇ ಎಚ್ಚರಿಸಿದೆ.
ಉಷ್ಣಗಾಳಿಯ ಈ ಸಂದರ್ಭದಲ್ಲಿ ಸಾರ್ವಜನಿಕರು ಸದಾ ಹೈಡ್ರೇಟ್ ಆಗಿರಲು (ಹೆಚ್ಚು ನೀರು ಕುಡಿಯಲು), ಮಧ್ಯಾಹ್ನದ ಅವಧಿಯಲ್ಲಿ ಹೊರಗಡೆ ಹೋಗುವುದನ್ನು ಕಡಿಮೆ ಮಾಡಲು ಮತ್ತು ಹೀಟ್‌ಸ್ಟ್ರೋಕ್ ಲಕ್ಷಣಗಳ ಬಗ್ಗೆ ಎಚ್ಚರದಿಂದಿರಲು ವೈದ್ಯರು ಸೂಚಿಸಿದ್ದಾರೆ.