ದೆಹಲಿ, ಡಿ. 29: ಭಾರತವನ್ನು ಕೆಣಕಲು ಹೋಗಿ ಪಾಕಿಸ್ತಾನ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಭಾರತವು ತನ್ನ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂಬ ಪಾಕಿಸ್ತಾನದ ಆರೋಪವನ್ನು ವಿದೇಶಾಂಗ ಸಚಿವಾಲಯ (Ministry of External Affairs) ಸೋಮವಾರ (ಡಿಸೆಂಬರ್ 29) ತಳ್ಳಿ ಹಾಕಿದೆ. ಇಸ್ಲಾಮಾಬಾದ್ ದೆಹಲಿಯತ್ತ ಬೆರಳು ತೋರಿಸಿದರೆ ತನ್ನದೇ ಆದ ವಿವಿಧ ಧರ್ಮಗಳ ಅಲ್ಪಸಂಖ್ಯಾತರ ಮೇಲಿನ ಭಯಾನಕ ಮತ್ತು ವ್ಯವಸ್ಥಿತ ದಾಳಿಯ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತದಲ್ಲಿನ ಘಟನೆಗಳ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಈ ವಿಷಯದಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ದೇಶದಿಂದ ಬಂದಿರುವ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತಿದ್ದೇವೆ. ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಭಯಾನಕ ಮತ್ತು ವ್ಯವಸ್ಥಿತವಾಗಿ ಬಲಿಪಶುಗಳನ್ನಾಗಿ ಮಾಡಿರುವುದು, ಮಾಡುತ್ತಿರುವುದು ಗೋಚರವಾಗುತ್ತಲೇ ಇದೆ. ಎಷ್ಟೇ ಬೆರಳು ತೋರಿಸಿದರೂ ಅದನ್ನು ಮರೆಮಾಚಲು ಸಾಧ್ಯವಿಲ್ಲ" ಎಂದು ಹೇಳಿದರು.
ಪಾಕಿಸ್ತಾನದ ಹೇಳಿಕೆ ಖಂಡಿಸಿದ ಭಾರತ:
"ನಾವು ಪಾಕಿಸ್ತಾನದ ಹೇಳಿಕೆಗಳನ್ನು ಗಮನಿಸಿದ್ದೇವೆ ಮತ್ತು ಅವುಗಳನ್ನು ತಿರಸ್ಕರಿಸಿದ್ದೇವೆ. ಅಲ್ಪಸಂಖ್ಯಾತರ ಮೇಲಿನ ಧರ್ಮಾಂಧತೆ, ದಬ್ಬಾಳಿಕೆ ಮತ್ತು ವ್ಯವಸ್ಥಿತ ದೌರ್ಜನ್ಯದ ಆಳವಾದ ಕಲೆಗಳನ್ನು ಹೊಂದಿರುವ ದೇಶವಾಗಿ, ಪಾಕಿಸ್ತಾನವು ಇತರರಿಗೆ ಉಪನ್ಯಾಸ ನೀಡುವ ನೈತಿಕತೆ ಹೊಂದಿಲ್ಲ" ಎಂದು ಜೈಸ್ವಾಲ್ ಹೇಳಿದ್ದರು.
ಶಿಕ್ಷಣ ಪಡೆದವರಿಗೆ ನರಕವಾಗ್ತಿದೆಯಾ ಪಾಕಿಸ್ತಾನ? ಪ್ರತಿ ವರ್ಷ ವಲಸೆ ಹೋಗುವವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ!
ಪಾಕಿಸ್ತಾನ ಹೇಳಿದ್ದೇನು?
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ವಕ್ತಾರ ತಹಿರ್ ಅಂದ್ರಾಬಿ, "ಕ್ರಿಸ್‌ಮಸ್‌ಗೆ ಸಂಬಂಧಿಸಿದ ವಿಧ್ವಂಸಕ ಕೃತ್ಯಗಳು ಮತ್ತು ಮುಸ್ಲಿಮರ ಮೇಲಿನ ದಾಳಿಗಳು ಸೇರಿದಂತೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಘಟನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಗಮನಹರಿಸಬೇಕುʼʼ ಎಂದು ಆಗ್ರಹಿಸಿದ್ದರು.
ʼʼಮನೆಗಳ ಧ್ವಂಸ ಮತ್ತು ಗುಂಪು ಹಲ್ಲೆಗಳು ಮುಸ್ಲಿಮರಲ್ಲಿ ಭಯ ಮತ್ತು ಪರಕೀಯತೆಯನ್ನು ಹೆಚ್ಚಿಸಿವೆ" ಎಂದು ಅಂದ್ರಾಬಿ ಹೇಳಿದ್ದರು. ʼʼಅಂತಾರಾಷ್ಟ್ರೀಯ ಸಮುದಾಯವು ಈ ಬೆಳವಣಿಗೆಗಳನ್ನು ಗಮನಿಸಬೇಕು ಮತ್ತು ಭಾರತದ ಅಲ್ಪ ಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ವಾದಿಸಿದ್ದರು. ಈ ನಿರಾಧಾರ ಹೇಳಿಕೆಗೆ ಭಾರತ ಖಡಕ್ ಪ್ರತಿಕ್ರಿಯೆ ನೀಡಿದೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಿ ಪಾಕಿಸ್ತಾನವು ಈ ಘಟನೆಯನ್ನು ಇಸ್ಲಾಮೋಫೋಬಿಯಾ ಮತ್ತು ಪರಂಪರೆಯ ಅಪವಿತ್ರಗೊಳಿಸುವಿಕೆ ಎಂದು ಹೇಳಿತ್ತು.
ಅಲ್ಪ ಸಂಖ್ಯಾತರ ಹಕ್ಕುಗಳ ಸಂರಕ್ಷಣೆ ವಿಚಾರದಲ್ಲಿ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ವಾದ-ವಿವಾದ ನಡೆಯುತ್ತಲೇ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಅಟ್ಟಾರಿ-ವಾಘಾ ಭೂ ಗಡಿ ದಾಟುವಿಕೆಯನ್ನು ಮುಚ್ಚುವುದು ಸೇರಿದಂತೆ ಹಲವು ಆರ್ಥಿಕ ಮತ್ತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ.
ಪಾಕಿಸ್ತಾನದ ಆಧಾರರಹಿತ ಆರೋಪವು ಭಾರತಕ್ಕೆ ಆಕ್ರೋಶವನ್ನು ಹೆಚ್ಚಿಸಿದೆ. ಈ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ್ದಕ್ಕಾಗಿ ಪಾಕಿಸ್ತಾನವು ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ಮೇಲೆ ದಾಳಿ ಮಾಡಿತ್ತು.