ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಂಧು ಜಲ ಒಪ್ಪಂದ ಅಮಾನತು ಮುಂದುವರಿಕೆ; ಪಾಕ್‌ಗೆ ಭಾರತದ ಖಡಕ್ ಎಚ್ಚರಿಕೆ

ಗಡಿ ದಾಟಿ ನಡೆಯುವ ಭಯೋತ್ಪಾದನೆಗೆ ಪಾಕಿಸ್ತಾನ ಸಂಪೂರ್ಣವಾಗಿ ಅಂತ್ಯ ಹಾಡುವವರೆಗೆ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಮುಂದುವರಿಯಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಆರೋಪಗಳನ್ನು ತಳ್ಳಿಹಾಕಿರುವ ಭಾರತ, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು ಯಾವುದೇ ವಿದೇಶಿ ರಾಯಭಾರಿಗಳು ಅಲ್ಲಿಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

ಸಿಂಧು ಜಲ ಒಪ್ಪಂದ

ನವದೆಹಲಿ: ಗಡಿ ದಾಟಿ ನಡೆಯುವ ಭಯೋತ್ಪಾದನೆಗೆ ಪಾಕಿಸ್ತಾನ ಸಂಪೂರ್ಣವಾಗಿ ಅಂತ್ಯ ಹಾಡುವವರೆಗೆ ಸಿಂಧು ಜಲ ಒಪ್ಪಂದ (Indus Waters Treaty - IWT) ಅಮಾನತಿನಲ್ಲೇ ಮುಂದುವರಿಯಲಿದೆ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಎರಡು ನದಿ ಯೋಜನೆಗಳ ಕುರಿತು ಪಾಕಿಸ್ತಾನ ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಭಾರತ, ಭಯೋತ್ಪಾದನೆ ನಿಲ್ಲುವವರೆಗೆ ಒಪ್ಪಂದ ಜಾರಿಯಾಗುವುದಿಲ್ಲ ಎಂದು ತಿಳಿಸಿದೆ.

ಚೆನಾಬ್-ಬಿಯಾಸ್ ಲಿಂಕ್ ಟನಲ್ ಯೋಜನೆ ಮತ್ತು ಸಲಾಲ್ ಅಣೆಕಟ್ಟಿನ ಜಲಾಶಯದಲ್ಲಿ ಹೂಳು ತೆರವು ಕಾರ್ಯದ ಮೂಲಕ ಭಾರತ "ನೀರನ್ನು ಆಯುಧವಾಗಿ ಬಳಸುತ್ತಿದೆ" ಎಂದು ಪಾಕಿಸ್ತಾನ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಪಾಕಿಸ್ತಾನ ಗಡಿ ದಾಟಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಇರುತ್ತದೆ" ಎಂದು ಹೇಳಿದರು.

ಜಮ್ಮು-ಕಾಶ್ಮೀರಕ್ಕೆ ಸ್ವಿಟ್ಜರ್ಲೆಂಡ್ ರಾಯಭಾರಿ ಭೇಟಿ ನೀಡಿರುವ ಕುರಿತು ಪಾಕಿಸ್ತಾನ ವ್ಯಕ್ತಪಡಿಸಿದ್ದ ಆಕ್ಷೇಪವನ್ನೂ ಭಾರತ ತಳ್ಳಿಹಾಕಿದೆ. "ಸ್ವಿಸ್ ರಾಯಭಾರಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಹಲವು ಸಭೆಗಳನ್ನು ನಡೆಸಿದ್ದಾರೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಸ್ವಿಸ್ ರಾಯಭಾರಿ ಸೇರಿದಂತೆ ಯಾವುದೇ ದೇಶದ ರಾಯಭಾರಿಗಳು ಅಲ್ಲಿಗೆ ಭೇಟಿ ನೀಡಲು ಸ್ವತಂತ್ರರು" ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು.

ಕಳೆದ ತಿಂಗಳು ಸಿಂಧು ಜಲ ಒಪ್ಪಂದದಡಿ ರಚನೆಯಾಗಿದೆ ಎಂದು ಹೇಳಲಾಗುತ್ತಿರುವ ಮಧ್ಯಸ್ಥಿಕೆ ನ್ಯಾಯಮಂಡಳಿ (Court of Arbitration - CoA) ನೀಡಿದ್ದ ತೀರ್ಪನ್ನು ಭಾರತ "ಅನೂರ್ಜಿತ ಮತ್ತು ಕಾನೂನುಬಾಹಿರ" ಎಂದು ತಿರಸ್ಕರಿಸಿತ್ತು. ಈ ನ್ಯಾಯಮಂಡಳಿ ಕಾನೂನುಬದ್ಧ ಅಸ್ತಿತ್ವವೇ ಹೊಂದಿಲ್ಲ ಮತ್ತು ಅದರ ಯಾವುದೇ ತೀರ್ಪು ಅಥವಾ ಆದೇಶ ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಪುನರುಚ್ಚರಿಸಿದೆ.

ವಿಶ್ವ ಪರಿಸರ ದಿನ ಕಾರ್ಯಕ್ರಮ; ಸ್ವಚ್ಛತೆ, ಹಸಿರು ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ಮಹತ್ವ ಒತ್ತಿಹೇಳಿದ ಪ್ರಧಾನಿ

1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧು ನದಿ ವ್ಯವಸ್ಥೆಯ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಸಿಂಧು ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಕಳೆದ ವರ್ಷದ ಪಹಲ್ಗಾಮ್ ಉಗ್ರ ದಾಳಿಯ ನಂತರ, ಅಂತರರಾಷ್ಟ್ರೀಯ ಕಾನೂನುಗಳಡಿ ತನ್ನ ಸಾರ್ವಭೌಮ ಹಕ್ಕುಗಳನ್ನು ಚಲಾಯಿಸಿ ಭಾರತ ಈ ಒಪ್ಪಂದವನ್ನು ಅಮಾನತಿನಲ್ಲಿರಿಸಿದೆ.

"ಒಪ್ಪಂದ ಅಮಾನತಿನಲ್ಲಿರುವವರೆಗೆ ಅದರ ಯಾವುದೇ ಬಾಧ್ಯತೆಗಳನ್ನು ಪಾಲಿಸುವ ಅಗತ್ಯ ಭಾರತಕ್ಕಿಲ್ಲ. ಭಾರತದ ಸಾರ್ವಭೌಮ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರ ಈ ಕಾನೂನುಬಾಹಿರ ನ್ಯಾಯಮಂಡಳಿಗೆ ಇಲ್ಲ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪಾಕಿಸ್ತಾನ ಅಂತರರಾಷ್ಟ್ರೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ತನ್ನ ಭಯೋತ್ಪಾದಕ ಚಟುವಟಿಕೆಗಳಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದೆ. ಭಯೋತ್ಪಾದನೆಗೆ ಜಾಗತಿಕ ಕೇಂದ್ರವಾಗಿರುವ ತನ್ನ ಪಾತ್ರದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಟೀಕಿಸಿದೆ.