ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಭಾರತ ಜಾತ್ಯತೀತ ದೇಶ': ದಿಯಾ ಮಿರ್ಜಾ ಜಾಗೃತಿ ವಿಡಿಯೋ ಡಿಲೀಟ್ ಮಾಡಿದ್ದ BMCಗೆ ಬಾಂಬೆ ಹೈಕೋರ್ಟ್ ತರಾಟೆ, ರಿ ಅಪ್‌ಲೋಡ್ ಮಾಡಲು ಆದೇಶ

Dia Mirza: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಪರಿಸರ ಜಾಗೃತಿಯ "ಮಾಲಿನ್ಯ ಮುಕ್ತ ದೀಪಾವಳಿ" ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡೆಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಂಗ್ರಹ ಚಿತ್ರ

ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ಅವರ ಪರಿಸರ ಜಾಗೃತಿಯ "ಮಾಲಿನ್ಯ ಮುಕ್ತ ದೀಪಾವಳಿ" ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಡೆಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ಭಾರತ ಒಂದು ಜಾತ್ಯತೀತ ದೇಶ" ಎಂದು ನೆನಪಿಸಿರುವ ನ್ಯಾಯಾಲಯ, ಅಳಿಸಲಾದ ವಿಡಿಯೋವನ್ನು ತಕ್ಷಣವೇ ಮರುಸ್ಥಾಪಿಸುವಂತೆ ಮಂಗಳವಾರ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಡಾ. ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಮುಂಬೈನಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ರಸ್ತೆ ಹಾಗೂ ಕಾಲುದಾರಿಗಳಲ್ಲಿ ಪಟಾಕಿ ಸಿಡಿಸುವುದನ್ನು ಹೈಕೋರ್ಟ್ ನಿಷೇಧಿಸಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಉಚಿತವಾಗಿ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವಂತೆ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಬಿಎಂಸಿ ಈ ಅಭಿಯಾನ ಹಮ್ಮಿಕೊಂಡಿತ್ತು. ದಿಯಾ ಮಿರ್ಜಾ, ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಉಚಿತವಾಗಿ ವಿಡಿಯೋ ಸಂದೇಶಗಳನ್ನು ರೆಕಾರ್ಡ್ ಮಾಡಿಕೊಟ್ಟಿದ್ದರು.

ಆದರೆ, ದಿಯಾ ಮಿರ್ಜಾ ಅವರ ವಿಡಿಯೋ ಪ್ರಕಟವಾಗುತ್ತಿದ್ದಂತೆ, ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸತಮ್ ಮತ್ತು ಮುಂಬೈ ಮೇಯರ್ ರಿತು ತಾವ್ಡೆ ಆಕ್ಷೇಪ ವ್ಯಕ್ತಪಡಿಸಿದ್ದರು. "ಹಿಂದೂಗಳಿಗೆ ದೀಪಾವಳಿ ಆಚರಿಸುವ ಬಗ್ಗೆ ದಿಯಾ ಮಿರ್ಜಾರಿಂದ ಪಾಠ ಬೇಕಿಲ್ಲ" ಎಂದು ಟೀಕಿಸಿ, ನಟಿಯನ್ನು "ಹಿಂದುತ್ವ ವಿರೋಧಿ" ಎಂದು ಕರೆದಿದ್ದರು. ಈ ರಾಜಕೀಯ ಒತ್ತಡಕ್ಕೆ ಮಣಿದ ಬಿಎಂಸಿ, ಇತರ ಗಣ್ಯರ ವಿಡಿಯೋಗಳನ್ನು ಉಳಿಸಿಕೊಂಡು ದಿಯಾ ಮಿರ್ಜಾ ಅವರ ವಿಡಿಯೋವನ್ನು ಮಾತ್ರ ಡಿಲೀಟ್ ಮಾಡಿತ್ತು.

ʼʼಹಿಂದೂ ವಿರೋಧಿ ದಿಯಾ ಮಿರ್ಜಾ ದೀಪಾವಳಿ ಹೇಗೆ ಆಚರಿಸಬೇಕೆಂದು ನಮಗೆ ಹೇಳಿಕೊಡಬೇಕಾಗಿಲ್ಲʼʼ: ಬಾಲಿವುಡ್‌ ನಟಿಗೆ ಬಿಜೆಪಿ ಖಡಕ್‌ ತಿರುಗೇಟು

ಆದರೆ ಬಿಎಂಸಿ ನಡೆಯನ್ನು ಕೋರ್ಟ್‌ ಇದೀಗ ಟೀಕಿಸಿದೆ. "ಇದು ಕೇವಲ ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ. ದೇಶದಲ್ಲಿ ಪ್ರತಿಯೊಬ್ಬರೂ ಉಸಿರಾಡುವುದು ಒಂದೇ ಗಾಳಿಯನ್ನು. ಇದಕ್ಕೆ ಧರ್ಮ ಅಥವಾ ರಾಜಕೀಯದ ಬಣ್ಣ ಬಳಿಯುವುದು ಅತ್ಯಂತ ದುರದೃಷ್ಟಕರ" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. ಸಮಾಜದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಮತ್ತು ಸಂವಿಧಾನದ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪಿಸಲು ಈ ವಿಡಿಯೋವನ್ನು ತಕ್ಷಣವೇ ಬಿಎಂಸಿಯ ಅಧಿಕೃತ ಖಾತೆಗಳಲ್ಲಿ ಮತ್ತೆ ಅಪ್‌ಲೋಡ್ ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

Vishakha Bhat Heggar

View all posts by this author