Anuradha Paswan: ಹಣ ದೋಚಲು 25 ಮದುವೆಯಾದ ಮಹಿಳೆ; ವಂಚಕಿಯನ್ನು ಹಿಡಿಯಲು ಪೊಲೀಸರು ಮಾಡಿದ್ರು ಮಾಸ್ಟರ್ ಪ್ಲ್ಯಾನ್!
ಲೂಟೇರಿ ದುಲ್ಹನ್ ಎಂದೇ ಕುಖ್ಯಾತವಾದ 32 ವರ್ಷ ಅನುರಾಧಾ ಪಾಸ್ವಾನ್ ಎಂಬಾಕೆಯನ್ನು ಸವಾಯಿ ಮಾಧೋಪುರ ಪೊಲೀಸರು ಬಂಧಿಸಿದ್ದಾರೆ. ಈಕೆ 25 ವರರನ್ನು ವಂಚಿಸಿ, ಲಕ್ಷಾಂತರ ರೂ. ಮೌಲ್ಯದ ಒಡವೆಗಳು ಮತ್ತು ಹಣವನ್ನು ಲಪಟಾಯಿಸಿದ ಆರೋಪವನ್ನು ಎದುರಿಸುತ್ತಿದ್ದಾಳೆ. ಹೊಸ ಹೆಸರು, ಹೊಸ ಊರು ಮತ್ತು ಹೊಸ ಗುರುತಿನೊಂದಿಗೆ ಮದುವೆ ನಾಟಕವಾಡಿ ಒಡವೆಗಳು ಮತ್ತು ಹಣವನ್ನು ಕದ್ದು ಪರಾರಿಯಾಗುತ್ತಿದ್ದಳು. ಆದರೆ ರಾಜಸ್ಥಾನದ ಸವಾಯಿ ಮಾಧೋಪುರ ಪೊಲೀಸರು ಈಕೆಯ ತಂತ್ರಕ್ಕೆ ತಿರುಗುಬಾಣವನ್ನೇ ಹೂಡಿ ಬಂಧಿಸಿದ್ದಾರೆ.

ಆರೋಪಿ ಅನುರಾಧಾ ಪಾಸ್ವಾನ್.

ಜೈಪುರ: 'ಲೂಟೇರಿ ದುಲ್ಹನ್' (Looteri Dulhan) ಎಂದೇ ಕುಖ್ಯಾತಿ ಪಡೆದ 32 ವರ್ಷ ಅನುರಾಧಾ ಪಾಸ್ವಾನ್ (Anuradha Paswan) ಎಂಬಾಕೆಯನ್ನು ರಾಜಸ್ಥಾನದ ಸವಾಯಿ ಮಾಧೋಪುರ (Sawai Madhopur) ಪೊಲೀಸರು ಬಂಧಿಸಿದ್ದಾರೆ. ಈಕೆ 25 ವರರನ್ನು ವಂಚಿಸಿ, ಲಕ್ಷಾಂತರ ಮೌಲ್ಯದ ಒಡವೆಗಳು ಮತ್ತು ಹಣವನ್ನು ಲಪಟಾಯಿಸಿದ ಆರೋಪವನ್ನು ಎದುರಿಸುತ್ತಿದ್ದಾಳೆ. ಹೊಸ ಹೆಸರು, ಹೊಸ ಊರು ಮತ್ತು ಹೊಸ ಗುರುತಿನೊಂದಿಗೆ ಮದುವೆ ನಾಟಕವಾಡಿ ಒಡವೆಗಳು ಮತ್ತು ಹಣವನ್ನು ಕದ್ದು ಪರಾರಿಯಾಗುತ್ತಿದ್ದಳು. ಆದರೆ ಸವಾಯಿ ಮಾಧೋಪುರ ಪೊಲೀಸರು ಈಕೆಯ ತಂತ್ರಕ್ಕೆ ತಿರುಗುಬಾಣವನ್ನೇ ಹೂಡಿ ಬಂಧಿಸಿದ್ದಾರೆ.
ನಾನು ಒಂಟಿಯಾಗಿದ್ದೇನೆ, ಬಡತನದಲ್ಲಿ ಜೀವನ ನಡೆಸುತ್ತಿದ್ದೇನೆ, ದಿಕ್ಕಿಲ್ಲದವಳು, ತಮ್ಮನಿಗೆ ಉದ್ಯೋಗವಿಲ್ಲ, ಮದುವೆಯಾಗಲು ಆಸೆಯಿದೆ. ಆದರೆ ಆರ್ಥಿಕ ಸಂಕಷ್ಟದಿಂದ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಾಧ್ಯವಿಲ್ಲ ಎಂದು 32 ವರ್ಷದ ಅನುರಾಧಾ ಪಾಸ್ವಾನ್ ನಾಟಕವಾಡುತ್ತಿದ್ದಳು. ಆದರೆ ಈಕೆಯ ಸತ್ಯವೇ ಬೇರೆ. ಈಕೆ ನಕಲಿ ಮದುವೆಯ ಗ್ಯಾಂಗ್‌ನ ನಾಯಕಿಯಾಗಿದ್ದು, ಜನರ ಭಾವನೆಗಳನ್ನು ಮತ್ತು ಹಣವನ್ನು ವಂಚಿಸುವ ದಂಧೆಯಲ್ಲಿ ತೊಡಗಿದ್ದಳು.
ಅನುರಾಧಾ ಪಾಸ್ವಾನ್ ಗ್ಯಾಂಗ್ ಸದಸ್ಯರು ಈಕೆಯ ಫೋಟೊಗಳು ಮತ್ತು ಪ್ರೊಫೈಲ್‌ನ್ನು ವರರಿಗೆ ತೋರಿಸಿ ತುಂಬ ಒಳ್ಳೆಯ ಜೋಡಿ ಎಂದು ಬಿಂಬಿಸುತ್ತಿದ್ದರು. ಈ ಕೆಲಸಕ್ಕೆ ಗ್ಯಾಂಗ್‌ನ ಮಧ್ಯವರ್ತಿಯೊಬ್ಬ 2 ಲಕ್ಷ ರೂ. ಶುಲ್ಕ ಪಡೆಯುತ್ತಿದ್ದ. ಎಲ್ಲ ಆದ ನಂತರ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಹಿಂದೂ ವಿಧಿವಿಧಾನಗಳಂತೆ ಮದುವೆ ನಡೆಯುತ್ತಿತ್ತು. ಆಗ ಆರಂಭವಾಗುತ್ತಿತ್ತು ಅನುರಾಧಾಳ ನಾಟಕ.
ಮದುವೆಯಾದ ನಂತರ, ಅನುರಾಧಾ ವರ ಮತ್ತು ಮಾವಂದಿರೊಂದಿಗೆ ಮುಗ್ಧೆಯಂತೆ ವರ್ತಿಸುತ್ತಿದ್ದಳು. ಕುಟುಂಬದ ಎಲ್ಲರೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಸೃಷ್ಟಿಸಿ ವಿಶ್ವಾಸ ಗಳಿಸುತ್ತಿದ್ದಳು. ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮಾದಕ ದ್ರವ್ಯವನ್ನು ಬೆರೆಸಿ, ಒಡವೆಗಳು, ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದಳು.
ಸವಾಯಿ ಮಾಧೋಪುರದ ನಿವಾಸಿ ವಿಷ್ಣು ಶರ್ಮಾ, ಏಪ್ರಿಲ್ 20ರಂದು ಮಧ್ಯಪ್ರದೇಶದ ಅನುರಾಧಾ ಪಾಸ್ವಾನ್‌ರನ್ನು ಮದುವೆಯಾದರು. ಹಿಂದೂ ವಿಧಿವಿಧಾನಗಳಂತೆ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆಯಿತು. ಮಧ್ಯವರ್ತಿ ಪಪ್ಪು ಮೀನಾ ಈ ಮದುವೆಯನ್ನು ಏರ್ಪಡಿಸಿದ್ದಕ್ಕಾಗಿ ವಿಷ್ಣು 2 ಲಕ್ಷ ರೂ. ನೀಡಿದ್ದರು. ಮದುವೆಯಾದ 2 ವಾರಗಳ ಒಳಗೆ ಅನುರಾಧಾ 1.25 ಲಕ್ಷ ರೂ. ಮೌಲ್ಯದ ಒಡವೆಗಳು, 30,000 ರೂ. ನಗದು ಮತ್ತು 30,000 ರೂ. ಮೌಲ್ಯದ ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಳು.
"ನಾನು ಒಂದು ಕೈಬಂಡಿಯನ್ನು ನಡೆಸುತ್ತಿದ್ದು, ಸಾಲ ಮಾಡಿ ಮದುವೆಯಾದೆ. ಮೊಬೈಲ್ ಕೂಡ ಸಾಲದ ಮೇಲೆ ತೆಗೆದುಕೊಂಡಿದ್ದೆ. ಅದನ್ನೂ ಆಕೆ ಕದ್ದಳು. ಆಕೆ ನನ್ನನ್ನು ವಂಚಿಸುತ್ತಾಳೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ," ಎಂದು ವಿಷ್ಣು ಶರ್ಮಾ ಹೇಳಿದ್ದಾರೆ. ಅನುರಾಧಾ ಪರಾರಿಯಾದ ರಾತ್ರಿಯನ್ನು ನೆನಪಿಸಿಕೊಂಡ ಅವರು, "ನಾನು ಕೆಲಸದಿಂದ ತಡವಾಗಿ ಮನೆಗೆ ಬಂದೆ. ಊಟ ಮಾಡಿ ತಕ್ಷಣ ಮಲಗಿದೆ. ಸಾಮಾನ್ಯವಾಗಿ ನಾನು ಹೆಚ್ಚು ಮಲಗುವುದಿಲ್ಲ, ಆದರೆ ಆ ರಾತ್ರಿ ಯಾರೋ ನಿದ್ರೆ ಬರುವ ಮಾತ್ರೆ ಕೊಟ್ಟಂತೆ ಗಾಢವಾಗಿ ನಿದ್ದೆ ಮಾಡಿದೆ" ಎಂದು ವಿವರಿಸಿದ್ದಾರೆ. ವಿಷ್ಣು ಶರ್ಮಾ ಅವರ ತಾಯಿಯೂ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಇದಾದ ನಂತರ, ಶರ್ಮಾ ಕುಟುಂಬವು ಪೊಲೀಸರಿಗೆ ದೂರು ನೀಡಿದೆ.
ಈ ಸುದ್ದಿಯನ್ನು ಓದಿ: Haryana Crime: ಸ್ನೇಹಿತನ ಖಾಸಗಿ ಭಾಗಕ್ಕೆ ಪೈಪ್ ಇಟ್ಟು ನೀರು ಬಿಟ್ಟ ಯುವಕರು; ಮುಂದೆ ಆಗಿದ್ದು ಮಾತ್ರ ಘೋರ ದುರಂತ
ವಿಷ್ಣು ಶರ್ಮಾ ಕೊಟ್ಟ ಮಾಹಿತಿಯ ಆಧಾರದ ಮೇಲೆ, ಸವಾಯಿ ಮಾಧೋಪುರ ಪೊಲೀಸರು ಅನುರಾಧಾ ಪಾಸ್ವಾನ್ ಹೂಡಿದ ಬಾಣವನ್ನೇ ಹೂಡಿದ್ದರು. ಒಬ್ಬ ಕಾನ್‌ಸ್ಟೆಬಲ್‌ನನ್ನು ಭಾವಿ ವರನಾಗಿ ನಟಿಸುವಂತೆ ಮಾಡಲಾಯಿತು. ಮಧ್ಯವರ್ತಿಯ ಮೂಲಕ ಹಲವು ಮಹಿಳೆಯರ ಫೋಟೊಗಳನ್ನು ತೋರಿಸಲಾಯಿತು. "ತನಿಖೆಯಲ್ಲಿ ಎಲ್ಲ ದಾಖಲೆಗಳು ಮತ್ತು ಮದುವೆ ಒಪ್ಪಂದಗಳು ನಕಲಿಯೆಂದು ಕಂಡುಬಂದಿತು. ನಮ್ಮ ತಂಡದಿಂದ, ನಾವು ಕಾನ್‌ಸ್ಟೆಬಲ್‌ನನ್ನು ವರನನ್ನಾಗಿ ಸಿದ್ಧಪಡಿಸಿ ಮಹಿಳೆಯನ್ನು ಮೋಸಗೊಳಿಸಿ ಮದುವೆ ಮಾಡಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಅನುರಾಧಾಳನ್ನು ಭೋಪಾಲ್‌ನಲ್ಲಿ ಬಂಧಿಸಲಾಗಿದೆ.