ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ ಸಂಘರ್ಷ: 40 ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳಲು ಮುಂದಾದ ಭಾರತ

ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆದಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ತಡೆ ಉಂಟಾಗಿರುವ ಕಾರಣ, ಭಾರತ ತನ್ನ ತೈಲ ಸರಬರಾಜನ್ನು ಸುರಕ್ಷಿತಗೊಳಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಅದರ ಭಾಗವಾಗಿ ಸುಮಾರು 40 ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ.

ಹೋರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ)

ನವದೆಹಲಿ, ಮಾ. 11: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಹೊರ್ಮುಜ್ ಜಲಸಂಧಿಯ (Strait of Hormuz) ಮೇಲೆ ಕವಿದಿದೆ. ಜಗತ್ತಿನ ಅತಿ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಪ್ರಮುಖ ಕಾರ್ಯತಂತ್ರದ ನಿರ್ಧಾರವನ್ನು ಕೈಗೊಂಡಿದೆ. ಈ ಮೊದಲು ಕೇವಲ 27 ದೇಶಗಳಿಂದ ಕಚ್ಚಾ ತೈಲ (Crude Oil)ವನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಈಗ ತನ್ನ ವ್ಯಾಪ್ತಿಯನ್ನು 40 ರಾಷ್ಟ್ರಗಳಿಗೆ ವಿಸ್ತರಿಸಿದೆ. ಪ್ರಸ್ತುತ ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 60ರಷ್ಟು ಭಾಗವು ಪರ್ಯಾಯ ಕಾರಿಡಾರ್‌ಗಳ ಮೂಲಕವೇ ಆಗಮಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಹೊರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ನಡುವಿನ ಕಿರಿದಾದ ಮಾರ್ಗವಾಗಿದ್ದು, ಜಗತ್ತಿನ ಒಟ್ಟು ಇಂಧನ ಪೂರೈಕೆಯ ಶೇಕಡಾ 20ರಷ್ಟು ಈ ಮೂಲಕವೇ ಸಾಗುತ್ತದೆ. ಇರಾನ್ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಅಲ್ಜೀರಿಯಾ, ಅಂಗೋಲಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಇರಾಕ್, ಇಸ್ರೇಲ್, ಕುವೈತ್, ನೈಜೀರಿಯಾ, ನಾರ್ವೆ, ಸೌದಿ ಅರೇಬಿಯಾ, ಯುಎಇ, ಅಮೆರಿಕ ಮತ್ತು ವೆನೆಜುವೆಲಾ ಸೇರಿದಂತೆ ವಿವಿಧ ದೇಶಗಳೊಂದಿಗೆ ಸಂಪರ್ಕ ಸಾಧಿಸಿ ತೈಲ ಪೂರೈಕೆಯನ್ನು ಖಚಿತಪಡಿಸಿಕೊಂಡಿದೆ.

ಯುದ್ಧ ಇನ್ನಷ್ಟು ವಿಸ್ತರಣೆ, ಕ್ಷಿಪಣಿ ದಾಳಿಯಲ್ಲಿ ಇನ್ನೊಬ್ಬ ಭಾರತೀಯ ಬಲಿ

ವಿಶೇಷವೆಂದರೆ, ರಷ್ಯಾ ಈಗಲೂ ಭಾರತದ ಪ್ರಾಥಮಿಕ ತೈಲ ಪೂರೈಕೆದಾರ ರಾಷ್ಟ್ರವಾಗಿ ಮುಂದುವರಿದಿದ್ದು, ಕಳೆದ ತಿಂಗಳು ಭಾರತವು ರಷ್ಯಾದಿಂದ ಪ್ರತಿದಿನ ಸರಾಸರಿ 2.04 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಿದೆ. ಇದು ದೇಶದ ಒಟ್ಟು ಪೂರೈಕೆಯ ಸುಮಾರು ಶೇಕಡಾ 20ರಷ್ಟಿದೆ.

ಭಾರತದ ತೈಲ ಸಂಗ್ರಹ ಸಾಮರ್ಥ್ಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿ, ಭಾರತವು ಪ್ರಸ್ತುತ 74 ದಿನಗಳ ಕಾಲ ರಾಷ್ಟ್ರೀಯ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಆಯಕಟ್ಟಿನ ಪೆಟ್ರೋಲಿಯಂ ಮೀಸಲು (SPR) 5.33 ಮಿಲಿಯನ್ ಮೆಟ್ರಿಕ್ ಟನ್ ತೂಕದ ತೈಲವನ್ನು ಹೊಂದಿದ್ದು, ಇದು ತುರ್ತು ಪರಿಸ್ಥಿತಿಯಲ್ಲಿ 9.5 ದಿನಗಳವರೆಗೆ ಸಾಲುತ್ತದೆ. ಇದರ ಜತೆಗೆ ತೈಲ ಮಾರಾಟ ಕಂಪನಿಗಳು (OMCs) 64.5 ದಿನಗಳ ಕಾಲ ಪೂರೈಕೆ ಮಾಡಬಲ್ಲಷ್ಟು ದಾಸ್ತಾನು ಹೊಂದಿವೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಿಕ್ಕಟ್ಟಿನ ಕುರಿತು ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಏನಾದರೂ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಂಚಾರಕ್ಕೆ ಅಡ್ಡಿಪಡಿಸಿದರೆ, ಅಮೆರಿಕವು ಇರಾನ್ ಮೇಲೆ 20 ಪಟ್ಟು ಹೆಚ್ಚು ಭೀಕರವಾಗಿ ದಾಳಿ ನಡೆಸಲಿದೆ ಎಂದು ಗುಡುಗಿದ್ದಾರೆ. ಭಾರತವು ಇಂತಹ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆಯೂ ತನ್ನ ಇಂಧನ ಸರಪಳಿಯನ್ನು ಸುಭದ್ರವಾಗಿರಿಸಲು ಬಹುರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಬಳಸಿಕೊಳ್ಳುತ್ತಿದೆ.