ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ (military conflict) ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಡೆದಿದ್ದು ತಾವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಈ ಹಿಂದೆ ಹೇಳಿದ್ದರು. ಆಗ ಭಾರತ ಸ್ಪಷ್ಟನೆ ನೀಡಿ ಯಾರೂ ಇದರಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ ಎಂದಿತ್ತು. ಬಳಿಕ ಇದೀಗ ತನ್ನಿಂದಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮವಾಗಿತ್ತು ಎಂದು ಚೀನಾ ಹೇಳಿದೆ. ಇದಕ್ಕೂ ಇದೀಗ ಭಾರತ ಸ್ಪಷ್ಟನೆ ನೀಡಿದ್ದು, ಕದನ ವಿರಾಮವನ್ನು (India-Pakistan ceasefire) ಇಸ್ಲಾಮಾಬಾದ್ ನೇರವಾಗಿ ಮಾತುಕತೆ ನಡೆಸಿದ ಬಳಿಕವೇ ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಕಳೆದ ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದನಾ ಶಿಬಿರಗಳ ಮೇಲೆ ನೇರವಾಗಿ ದಾಳಿ ನಡೆಸಿತ್ತು. ಇದು ಎರಡು ರಾಷ್ಟ್ರಗಳ ನಡುವೆ ಸಂಘರ್ಷದ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು.
ಬಳಿಕ ನವದೆಹಲಿಯೊಂದಿಗೆ ಮಾತುಕತೆ ನಡೆಸಿದ ಇಸ್ಲಾಮಾಬಾದ್ ಕದನ ವಿರಾಮಕ್ಕೆ ಮನವಿ ಮಾಡಿತ್ತು. ಅನಂತರ ಯುದ್ಧ ನಿಲ್ಲಿಸಲಾಯಿತು. ಈ ಬಗ್ಗೆ ಹೇಳಿಕೆ ನೀಡಿದ ಚೀನಾವು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ತಿಳಿಸಿದೆ. ಆದರೆ ಇದನ್ನು ಭಾರತ ದೃಢವಾಗಿ ತಿರಸ್ಕರಿಸಿದೆ.
ಮೋದಿ ನನಗೊಂದು ಆಧಾರ್ ಕಾರ್ಡ್ ನೀಡಿ; ಭಾರತದಲ್ಲಿ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ ಅಮೆರಿಕ ಪ್ರವಾಸಿ
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ. ಆಪರೇಷನ್ ಸಿಂದೂರ್ ಅನಂತರ ಮೇ 10ರಂದು ನಡೆದ ಕದನ ವಿರಾಮವನ್ನು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಮಾತುಕತೆಯ ಬಳಿಕ ನಿರ್ಧರಿಸಲಾಗಿದೆ ಎಂದು ಭಾರತ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮೂರನೇ ವ್ಯಕ್ತಿಯ ಯಾವುದೇ ಪಾತ್ರವಿಲ್ಲ. ಭಾರತ-ಪಾಕಿಸ್ತಾನ ಕದನ ವಿರಾಮವನ್ನು ಎರಡು ದೇಶಗಳ ಡಿಜಿಎಂಒಗಳು ನೇರವಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಸೇರಿದಂತೆ ಹಲವಾರು ಜಾಗತಿಕ ಸಂಘರ್ಷಗಳಿಗೆ ಬೀಜಿಂಗ್ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿದ್ದರು.
100ಕ್ಕೂ ಹೆಚ್ಚು ಭಯೋತ್ಪಾದಕರಿಂದ ಒಳನುಸುಳಲು ಸಂಚು; ಹೊಸ ವರ್ಷಕ್ಕೆ ಜಮ್ಮು-ಕಾಶ್ಮೀರದಲ್ಲಿ ಭಾರಿ ಕಟ್ಟೆಚ್ಚರ
ವಾಂಗ್ ಯಿ ಅವರು ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಎರಡನೇ ಮಹಾಯುದ್ಧದ ಅನಂತರ ಈ ವರ್ಷ ಹೆಚ್ಚಾಗಿ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಭುಗಿಲೆದ್ದಿವೆ. ಶಾಶ್ವತ ಶಾಂತಿಯನ್ನು ನಿರ್ಮಿಸುವ ಪ್ರಯತ್ನದಲ್ಲಿ ಚೀನಾವು ವಸ್ತುನಿಷ್ಠ ಮತ್ತು ತಟಸ್ಥ ನಿಲುವನ್ನು ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದರು.
ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿದ್ದಾಗಿ ಅವರು ತಿಳಿಸಿದರು.