India-Pak Conflict: ಇಂದು ನಿನ್ನೆಯದ್ದಲ್ಲ ಇಂಡಿಯಾ-ಪಾಕ್ ಸಂಘರ್ಷ; ಇಲ್ಲಿದೆ ಸಂಪೂರ್ಣ ಮಾಹಿತಿ
ಏಪ್ರಿಲ್ 22, 2025 ರಂದು 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಮೊದಲೇ ಬೂದಿ ಮುಚ್ಚಿದ ಕೆಂಡದಂತಿದ್ದ ಭಾರತ-ಪಾಕಿಸ್ತಾನ ನಡುವಿನ ಪ್ರಕ್ಷುಬ್ಧತೆ ಕಿಡಿಗೆ ಕಿಚ್ಚು ಹಚ್ಚಿದೆ. ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ದಟ್ಟವಾಗಿದೆ. ಆದರೆ ಈ ಯುದ್ಧ, ಸಂಘರ್ಷ ಇಂದು ನಿನ್ನೆಯದ್ದಲ್ಲ. 1947 ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಭಾರತ ಮತ್ತು ಪಾಕಿಸ್ತಾನ ಹಲವಾರು ಯುದ್ಧಗಳು ಮತ್ತು ಸಂಘರ್ಷಗಳಲ್ಲಿ ಭಾಗಿಯಾಗಿವೆ. ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಸ್ಕ್ರಾಲ್ ಮಾಡಿ.



ಮೊದಲ ಭಾರತ-ಪಾಕಿಸ್ತಾನ ಯುದ್ಧ (1947-48): ಮೊದಲ ಕಾಶ್ಮೀರ ಯುದ್ಧ ಎಂದೂ ಕರೆಯಲ್ಪಡುವ ಇದು ಅಕ್ಟೋಬರ್ 1947 ರಲ್ಲಿ ಪ್ರಾರಂಭವಾಯಿತು. ಸ್ವಾತಂತ್ರ್ಯದ ನಂತರ ಕಾಶ್ಮೀರ ಪ್ರದೇಶದ ಮೇಲೆ ಈ ಯುದ್ಧ ನಡೆಯಿತು. ಜನವರಿ 1, 1949 ರ ರಾತ್ರಿ 23:59 ಕ್ಕೆ ಔಪಚಾರಿಕ ಕದನ ವಿರಾಮವನ್ನು ಘೋಷಿಸಲಾಯಿತು. ಇದು ಗಡಿ ನಿಯಂತ್ರಣ ರೇಖೆಯ ಸ್ಥಾಪನೆಗೆ ಕಾರಣವಾಯಿತು.

1965 ರ ಇಂಡೋ-ಪಾಕಿಸ್ತಾನಿ ಯುದ್ಧ: ಕಾಶ್ಮೀರ ಪ್ರದೇಶಕ್ಕೆ ತನ್ನ ಪಡೆಗಳನ್ನು ಒಳನುಸುಳಲು ಪಾಕಿಸ್ತಾನ ನಡೆಸಿದ ಆಪರೇಷನ್ ಜಿಬ್ರಾಲ್ಟರ್ ನಂತರ 17 ದಿನಗಳ ಯುದ್ಧ ಪ್ರಾರಂಭವಾಯಿತು. ಇದು 1966 ರಲ್ಲಿ ಸೋವಿಯತ್ ಒಕ್ಕೂಟ ಮತ್ತು ಯುಎಸ್ ಮಧ್ಯಸ್ಥಿಕೆಯಲ್ಲಿ ತಾಷ್ಕೆಂಟ್ ಒಪ್ಪಂದದೊಂದಿಗೆ ಕದನ ವಿರಾಮದಲ್ಲಿ ಕೊನೆಗೊಂಡಿತು.

1971 ರ ಭಾರತ-ಪಾಕಿಸ್ತಾನ ಯುದ್ಧ: ಇದು ಕಾಶ್ಮೀರಕ್ಕಾಗಿ ನಡೆದ ಯುದ್ಧ ಅಲ್ಲ. ಆದರೆ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯಿಂದ ಹುಟ್ಟಿಕೊಂಡಿತು, ಇದು ಅಂತಿಮವಾಗಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಇದು ಭಾರತಕ್ಕೆ ನಿರ್ಣಾಯಕ ವಿಜಯವಾಗಿತ್ತು.

1999 ರ ಕಾರ್ಗಿಲ್ ಯುದ್ಧ: ಪಾಕಿಸ್ತಾನಿ ಸೈನ್ಯಕ್ಕೆ ದೊಡ್ಡ ಸೋಲುನುಸಿದ ಯುದ್ಧ ಇದು. ಪಾಕಿಸ್ತಾನಿ ಪಡೆಗಳು ಎಲ್ಒಸಿಯಾದ್ಯಂತ ನುಸುಳಿ ಕಾರ್ಗಿಲ್ ಜಿಲ್ಲೆಯ ಪ್ರಮುಖ ಭಾಗಗಳನ್ನು ಆಕ್ರಮಿಸಿಕೊಂಡ ನಂತರ ಯುದ್ಧ ನಡೆಯಿತು. ಸಂಘರ್ಷದ ಎರಡು ತಿಂಗಳ ನಂತರ, ಭಾರತವು ಪ್ರದೇಶಗಳ ಮೇಲೆ ಮತ್ತೆ ಹಿಡಿತ ಸಾಧಿಸಿತು.

ಇವುಗಳ ಹೊರತಾಗಿ, ಹಲವಾರು ಇತರ ಸಂಘರ್ಷಗಳು ಮತ್ತು ಬಿಕ್ಕಟ್ಟುಗಳು ನಡೆದಿವೆ. ಅತ್ಯಂತ ಗಮನಾರ್ಹ ಮತ್ತು ದೀರ್ಘಕಾಲೀನವಾದದ್ದು ಸಿಯಾಚಿನ್ ಸಂಘರ್ಷ (1984-2003). ಕದನ ವಿರಾಮದ ಹೊರತಾಗಿಯೂ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಭಾರೀ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಶಮನಗೊಳಿಸಲಾಯಿತು.

2016 ರಲ್ಲಿ ಕಾಶ್ಮೀರದ ಉರಿಯಲ್ಲಿರುವ ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಎಲ್ಒಸಿಯಾದ್ಯಂತ ಪ್ರತೀಕಾರದ "ಸರ್ಜಿಕಲ್ ಸ್ಟ್ರೈಕ್"ಗಳನ್ನು ನಡೆಸಿತು.

2019ರಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದ ಮೇಲೆ ವೈಮಾನಿಕದಾಳಿ ನಡೆಸಿತು.