ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜುಲೈ 1ರಿಂದ ಪಾಸ್‌ಪೋರ್ಟ್ ಶುಲ್ಕದಲ್ಲಿ ಭಾರಿ ಏರಿಕೆ: ಸಾಮಾನ್ಯಕ್ಕೆ 2,500 ರುಪಾಯಿ, ತತ್ಕಾಲ್‌ಗೆ 5,000 ರುಪಾಯಿ ನಿಗದಿ

Passport Fees: ಜುಲೈ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಮತ್ತು ಸಂಬಂಧಿತ ಸೇವೆಗಳ ಶುಲ್ಕವನ್ನು ಹೆಚ್ಚಿಸಿದೆ. ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನು 1,500 ರುಪಾಯಿಯಿಂದ 2,500 ರುಪಾಯಿಗೆ ಹಾಗೂ ತತ್ಕಾಲ್ ಶುಲ್ಕ 5,000 ರುಪಾಯಿಗೆ ಏರಿಕೆಯಾಗಿದೆ. ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಿಗೆ ಪಡೆಯುವ ಶುಲ್ಕ ಸೇರಿ ಇತರ ಸೇವೆಗಳ ದರಗಳಲ್ಲಿಯೂ ಹೆಚ್ಚಳವಾಗಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಜೂ. 25: ಕೇಂದ್ರ ಸರ್ಕಾರವು ಸುಮಾರು 14 ವರ್ಷಗಳ ನಂತರ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಜುಲೈ 1ರಿಂದ ಜಾರಿಗೆ ಬರುವಂತೆ ಸಾಮಾನ್ಯ ಯೋಜನೆಯಡಿ ಹೊಸ ಪಾಸ್‌ಪೋರ್ಟ್ ದರವನ್ನು 2,500 ರುಪಾಯಿಗೆ ಹಾಗೂ ತತ್ಕಾಲ್ ಯೋಜನೆಯ ಪಾಸ್‌ಪೋರ್ಟ್‌ಗೆ 5,000 ರುಪಾಯಿ ನಿಗದಿಪಡಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) 'ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು, 2026'ರ ಅಡಿಯಲ್ಲಿ ಈ ಹೊಸ ಪರಿಷ್ಕೃತ ದರಗಳ ಅಧಿಸೂಚನೆಯನ್ನು ಹೊರಡಿಸಿದೆ. ಕೊನೆಯದಾಗಿ 2012ರಲ್ಲಿ ಪಾಸ್‌ಪೋರ್ಟ್ ಶುಲ್ಕವನ್ನು ಪರಿಷ್ಕರಿಸಲಾಗಿತ್ತು.

36 ಪುಟಗಳ ಹೊಸ/ಮರುನವೀಕರಣ ಪಾಸ್‌ಪೋರ್ಟ್ (18 ವರ್ಷ ಮೇಲ್ಪಟ್ಟವರಿಗೆ)

ಸಾಮಾನ್ಯ ನಿಯಮದಡಿ: 2,500 ರುಪಾಯಿ (ಹಳೆಯ ದರ 1,500 ರುಪಾಯಿ)

ತತ್ಕಾಲ್ ನಿಯಮದಡಿ: 5,000 ರುಪಾಯಿ (ಹಳೆಯ ದರ 3,500 ರುಪಾಯಿ)

ಮರುನವೀಕರಣ ಪಾಸ್‌ಪೋರ್ಟ್

ಸಾಮಾನ್ಯ ನಿಯಮದಡಿ: 3,500 ರುಪಾಯಿ (ಹಳೆಯ ದರ 2,000 ರುಪಾಯಿ)

ತತ್ಕಾಲ್ ನಿಯಮದಡಿ: 6,000 ರುಪಾಯಿ (ಹಳೆಯ ದರ 4,000 ರುಪಾಯಿ)

ಅಪ್ರಾಪ್ತ ವಯಸ್ಕರಿಗೆ (18 ವರ್ಷದೊಳಗಿನವರಿಗೆ)

ಸಾಮಾನ್ಯ ನಿಯಮದಡಿ: 1,750 ರುಪಾಯಿ

ತತ್ಕಾಲ್ ನಿಯಮದಡಿ: 4,250 ರುಪಾಯಿ

ಕಳೆದುಹೋದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಿ ಶುಲ್ಕ

ಪಾಸ್‌ಪೋರ್ಟ್ ಕಳೆದುಕೊಂಡರೆ ಅಥವಾ ಹಾನಿಯಾದರೆ ಹೊಸದಾಗಿ ಪಡೆಯಲು ಇನ್ಮುಂದೆ ದುಬಾರಿ ಹಣ ತೆರಬೇಕಾಗುತ್ತದೆ. 36 ಪುಟಗಳ ಬದಲಿ ಪಾಸ್‌ಪೋರ್ಟ್‌ಗೆ ಸಾಮಾನ್ಯ ನಿಯಮದಡಿ 5,000 ರುಪಾಯಿ ಮತ್ತು ತತ್ಕಾಲ್‌ಗೆ 7,500 ರುಪಾಯಿ ನಿಗದಿಪಡಿಸಲಾಗಿದೆ. ಅದೇ ರೀತಿ 60 ಪುಟಗಳ ಬದಲಿ ಪಾಸ್‌ಪೋರ್ಟ್‌ಗೆ ಕ್ರಮವಾಗಿ 6,000 ರುಪಾಯಿ ಹಾಗೂ 8,500 ರುಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಅಪ್ರಾಪ್ತರ ಬದಲಿ ಪಾಸ್‌ಪೋರ್ಟ್‌ಗೆ ಸಾಮಾನ್ಯವಾಗಿ 4,250 ರುಪಾಯಿ ಹಾಗೂ ತತ್ಕಾಲ್‌ಗೆ 6,750 ರುಪಾಯಿ ನಿಗದಿಪಡಿಸಲಾಗಿದೆ.

ಬೆಂಗಳೂರಿನಲ್ಲಿ ಪಾಸ್‌ಪೋರ್ಟ್‌ ವೆರಿಫಿಕೇಶನ್‌ಗೆ ಹೊಸ ನಿಯಮ

ಇತರ ಸೇವೆಗಳ ದರಗಳೂ ಹೆಚ್ಚಳ

ಭಾರತದಲ್ಲಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC), ಸರೆಂಡರ್ ಸರ್ಟಿಫಿಕೇಟ್ ಮತ್ತು ಗ್ಲೋಬಲ್ ಎಂಟ್ರಿ ಪ್ರೋಗ್ರಾಂ ವೆರಿಫಿಕೇಶನ್‌ಗಳ ಶುಲ್ಕವನ್ನು ದೇಶದೊಳಗೆ 750 ರುಪಾಯಿ ಹಾಗೂ ವಿದೇಶಗಳಲ್ಲಿ 40 ಯುಎಸ್‌ ಡಾಲರ್ (USD)ಗೆ ನಿಗದಿಪಡಿಸಲಾಗಿದೆ. ಐಡೆಂಟಿಟಿ ಸರ್ಟಿಫಿಕೇಟ್‌ಗೆ ಭಾರತದಲ್ಲಿ 1,000 ರುಪಾಯಿ ಹಾಗೂ ವಿದೇಶಗಳಲ್ಲಿ 50 ಯುಎಸ್‌ ಡಾಲರ್ ವೆಚ್ಚವಾಗಲಿದೆ. ತುರ್ತು ಪ್ರಮಾಣಪತ್ರಗಳನ್ನು (Emergency Certificates) ಭಾರತದೊಳಗೆ ಉಚಿತವಾಗಿ ನೀಡಲಾಗುವುದು. ಆದರೆ ವಿದೇಶಗಳಲ್ಲಿ ಇದಕ್ಕೆ 15 ಯುಎಸ್‌ ಡಾಲರ್ ವಿಧಿಸಲಾಗುತ್ತದೆ.

ಜುಲೈ 1 ಅಥವಾ ಅದಾದ ನಂತರ ಸಲ್ಲಿಕೆಯಾಗುವ ಎಲ್ಲ ಪಾಸ್‌ಪೋರ್ಟ್ ಅರ್ಜಿಗಳಿಗೆ ಈ ಹೊಸ ದರಗಳು ಅನ್ವಯವಾಗಲಿವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.