ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tourist Visas: ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ನೀಡಲು ಭಾರತದ ಯೋಜನೆ

ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಭಾರತವು ಮೊದಲ ಬಾರಿಗೆ ಸ್ನೇಹ ಹಸ್ತ ಚಾಚಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದಿನಿಂದ ಚೀನಾ ನಾಗರಿಕರಿಗೆ ಭಾರತದಿಂದ ಪ್ರವಾಸಿ ವೀಸಾ

ನವದೆಹಲಿ: ಚೀನಾ (China) ಮತ್ತು ಭಾರತದ (India) ನಡುವಿನ ಹಲವಾರು ದಶಕಗಳ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಇದೀಗ ಚೀನಾ ನಾಗರಿಕರಿಗೆ (Chinese Citizens) ಪ್ರವಾಸಿ ವೀಸಾಗಳನ್ನು (Tourist Visas) ಪುನರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಭಾರತವು ಚೀನಾದ ಕಡೆ ಮೊದಲ ಬಾರಿಗೆ ಸ್ನೇಹ ಹಸ್ತ ಚಾಚಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಭಾರತವು ಜುಲೈ 24 ರಿಂದ ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಲಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MFA), ʼʼಜುಲೈ 24ರಿಂದ ಭಾರತವು ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಲು ಸಜ್ಜಾಗಿದೆ. ಇದು ಎರಡು ದೇಶಗಳ ಸಂಬಂಧ ಸುಧಾರಣೆಯಲ್ಲಿ ಒಂದು ಸಕಾರಾತ್ಮಕ ಬೆಳವಣಿಗೆ. ಇದರಿಂದ ಚೀನಾ ನಾಗರಿಕರಿಗೆ ಗಡಿಯಾಚೆಗಿನ ಪ್ರಯಾಣ ಸರಾಗವಾಗಲಿದೆʼʼ ಎಂದು ಹೇಳಿದೆ.

ʼʼಇದು ಸಾಕಷ್ಟು ಪ್ರಯೋಜನಕಾರಿ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಚೀನಾ ಕೂಡ ಭಾರತದೊಂದಿಗೆ ಸಂವಹನವನ್ನು ನಡೆಸಲಿದೆʼʼ ಎಂದು ತಿಳಿಸಿದೆ.



ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸಂಚಾರ, ವೀಸಾ ವಿತರಣೆ ಮತ್ತು ಯಾತ್ರಿಕರಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಈ ವರ್ಷದ ಆರಂಭದಲ್ಲೇ ಎರಡು ದೇಶಗಳು ಒಪ್ಪಿಕೊಂಡಿವೆ ಎನ್ನಲಾಗಿದೆ. ಇದರಿಂದ 2020ರಲ್ಲಿ ಉದ್ಬವವಾಗಿದ್ದ ಗಡಿ ಘರ್ಷಣೆ ಬಳಿಕ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಂಡು ಬಂದಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಕೆಲವು ದಿನಗಳ ಹಿಂದೆ ಬೀಜಿಂಗ್‌ಗೆ ಭೇಟಿ ನೀಡಿದ್ದರು. ಈ ಬಳಿಕ ಇದೀಗ ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ನೀಡುವ ಕುರಿತು ಭಾರತ ಘೋಷಿಸಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಳೆದ ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ನಡೆದ ಸಭೆಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಚೀನಾ ವಿದೇಶಾಂಗ ಕಾರ್ಯದರ್ಶಿ ಸನ್ ವೀಡಾಂಗ್ ಅವರು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪುನರ್ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ನಡುವೆ ನದಿಗಳಿಗೆ ಸಂಬಂಧಿಸಿದ ಜಲವಿಜ್ಞಾನದ ದತ್ತಾಂಶ ಮತ್ತು ಇತರ ಸಹಕಾರವನ್ನು ಒದಗಿಸುವ ಬಗ್ಗೆ ಚರ್ಚಿಸಲು ಭಾರತ ಮತ್ತು ಚೀನಾ ತಜ್ಞರ ಸಭೆ ಕರೆಯಲು ಸನ್ ವೀಡಾಂಗ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇತೀಚೆಗಷ್ಟೇ ಭಾರತದ ವಿದೇಶಾಂಗ ಸಚಿವ (ಇಎಎಂ) ಎಸ್. ಜೈಶಂಕರ್ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ: Plane Crash: ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ; ಮಕ್ಕಳು ಸೇರಿ 49 ಜನರ ಸಾವು?

ಭಾರತ- ಚೀನಾ ಉದ್ವಿಗ್ನತೆ

2020ರ ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಮಿಲಿಟರಿ ಬಿಕ್ಕಟ್ಟು ಕಾಣಿಸಿಕೊಂಡು ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಮಾರಕ ಘರ್ಷಣೆಗೆ ಕಾರಣವಾಯಿತು. ಇದು ಎರಡು ರಾಷ್ಟ್ರ್ರಗಳ ನಡುವಿನ ಸಂಬಂಧವನ್ನು ಹದಗೆಡಿಸಿತ್ತು. 202೪ರ ಅಕ್ಟೋಬರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಮಿಲಿಟರಿ ಮುಖಾಮುಖಿ ಕೊನೆಯಾದ ಒಂಬತ್ತು ತಿಂಗಳ ಬಳಿಕ ಭಾರತ ಮತ್ತು ಚೀನಾ ತಮ್ಮ ನಡುವಿನ ಸಂಬಂಧ ಸುಧಾರಣೆಯತ್ತ ಹೆಜ್ಜೆ ಇಡುತ್ತಿದೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ಮತ್ತೆ ವಿತರಿಸಲು ಭಾರತ ಸಿದ್ಧತೆ ನಡೆಸಿದೆ. ಈ ಮೂಲಕ ಸುಮಾರು ಐದು ವರ್ಷಗಳ ಬಳಿಕ ಚೀನಾ ನಾಗರಿಕರಿಗೆ ಭಾರತ ಪ್ರವಾಸ ಮಾಡುವ ಅವಕಾಶ ಮತ್ತೆ ಸಿಗಲಿದೆ.