ನವದೆಹಲಿ, ಏ. 18: ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಶನಿವಾರ ಭಾರತದ ಧ್ವಜ (Indian Flag) ಹೊಂದಿರುವ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್ (Iran) ಪಡೆಗಳು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಭಾರತ (India) ಸರ್ಕಾರವು ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತಾಲಿ (Dr Mohammad Fathali) ಅವರನ್ನು ವಿದೇಶಾಂಗ ಇಲಾಖೆಗೆ ಕರೆಸಿಕೊಂಡು ಅಧಿಕೃತವಾಗಿ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಘಟನೆಯು ಈಗಾಗಲೇ ಇರುವ ರಾಜತಾಂತ್ರಿಕ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಕೇಂದ್ರ ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ, ಜಾಗತಿಕವಾಗಿ ಅತ್ಯಂತ ಜನನಿಬಿಡ ಹಾಗೂ ಆಯಕಟ್ಟಿನ ಸಮುದ್ರ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ನಾಗರಿಕ ಹಡಗುಗಳ ಮೇಲೆ ಯಾವ ಕಾನೂನು ಅಥವಾ ಅಧಿಕಾರದ ಅಡಿಯಲ್ಲಿ ಇರಾನ್ ಪಡೆಗಳು ದಾಳಿ ನಡೆಸಿವೆ ಎಂಬ ಬಗ್ಗೆ ನವದೆಹಲಿಯು ʼಗಂಭೀರ ಕಳವಳ ಮತ್ತು ತೀವ್ರ ಅಸಮಾಧಾನʼವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇರಾನ್ ಸರ್ಕಾರದಿಂದ ಸ್ಪಷ್ಟ ಮತ್ತು ಲಿಖಿತ ವಿವರಣೆಯನ್ನು ಕೋರಿದೆ.
ಭಾರತದಿಂದ ಇರಾನ್‌ಗೆ ಸಮನ್ಸ್:
ವರದಿಗಳ ಪ್ರಕಾರ, ಇರಾನ್ ಕ್ರಾಂತಿಕಾರಿ ಗಾರ್ಡ್ (IRGC) ಘಟಕಗಳು ನಡೆಸಿದ ಈ ಗುಂಡಿನ ದಾಳಿಯಲ್ಲಿ ಸಿಬ್ಬಂದಿಗೆ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಹಡಗಿಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಆದರೂ, ಲಾರಾಕ್ ದ್ವೀಪದ ಸಮೀಪವಿರುವ ಐಆರ್‌ಜಿಸಿ ನಿಯಂತ್ರಿತ ಪಾಯಿಂಟ್‌ನಿಂದ ಎರಡು ಭಾರತೀಯ ಹಡಗುಗಳು ತಮ್ಮ ಪಥವನ್ನು ಬದಲಿಸಿ ಹಿಂತಿರುಗಬೇಕಾಯಿತು. ಶನಿವಾರ ಬೆಳಗ್ಗೆ ಎಂಟು ಭಾರತೀಯ ಹಡಗುಗಳು ಈ ಮಾರ್ಗದಲ್ಲಿ ಸಾಗಲು ಸಿದ್ಧವಾಗಿದ್ದರೂ, 'ದೇಶ್ ಗರಿಮಾ' ನೌಕೆಯನ್ನು ಹೊರತುಪಡಿಸಿ ಉಳಿದ ಏಳು ಹಡಗುಗಳು ಈ ದಾಳಿಯಿಂದಾಗಿ ತಮ್ಮ ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಿದವು.
ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’
ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಈಗ ಯುದ್ಧದಂತಹ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜಾಗತಿಕ ತೈಲ ವ್ಯಾಪಾರದ ಸುಮಾರು ಶೇಕಡಾ 20ರಷ್ಟು ಭಾಗವು ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುವುದರಿಂದ, ವಾಣಿಜ್ಯ ಹಡಗುಗಳ ಸುರಕ್ಷತೆ ಈಗ ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದಲೂ ದೊಡ್ಡ ಸವಾಲಾಗಿದೆ. ಭಾರತದ ಶಿಪ್ಪಿಂಗ್ ಮಹಾನಿರ್ದೇಶನಾಲಯವು ಪ್ರಸ್ತುತ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಮುದ್ರದಲ್ಲಿರುವ ಭಾರತೀಯ ನಾವಿಕರ ಮತ್ತು ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಗಂಭೀರ ಬೆಳವಣಿಗೆಯು ಈ ಪ್ರದೇಶದ ಭದ್ರತೆಯ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆಯಿದೆ.