ನವದೆಹಲಿ, ಮೇ 13: ಚಿನ್ನ (Gold) ಮತ್ತು ಬೆಳ್ಳಿಯ (Silver) ಬೆಲೆಗಳು ಮತ್ತಷ್ಟು ದುಬಾರಿಯಾಗಲಿವೆ. ಚಿನ್ನ ಖರೀದಿಯನ್ನು ಮುಂದೂಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಚಿನ್ನ ಮತ್ತು ಬೆಳ್ಳಿ ಮೇಲಿನ ಒಟ್ಟು ಒಟ್ಟು ಆಮದು ಸುಂಕವನ್ನು (Import Duty) ತಕ್ಷಣದಿಂದ ಜಾರಿಗೆ ಬರುವಂತೆ 15% ಕ್ಕೆ ಭಾರಿ ಏರಿಕೆ ಮಾಡಿದೆ. ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Foreign Exchange Reserves) ರಕ್ಷಿಸಲು ಮತ್ತು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಮೂಲ ಕಸ್ಟಮ್ಸ್ ಸುಂಕ (BCD) ಶೇ. 5ರಷ್ಟಿತ್ತು. ಈಗ ಇದನ್ನು ಶೇ. 10ಕ್ಕೆ ಏರಿಕೆ ಮಾಡಲಾಗಿದೆ. ಸೆಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮೂಲ ಕಸ್ಟಮ್ಸ್ ಸುಂಕ ಶೇ. 5ರಷ್ಟು ಏರಿಕೆ ಮಾಡಿದ್ದರಿಂದ ಒಟ್ಟು ಆಮದು ಸುಂಕ ಶೇ.15ಕ್ಕೆ ಏರಿಕೆಯಾಗಿದೆ.
ತೈಲ ದರ 116 ಡಾಲರ್‌ಗೆ ಹೆಚ್ಚಳ, ಸೆನ್ಸೆಕ್ಸ್ 2,500 ಅಂಕ ಮಹಾ ಪತನ ; ಚಿನ್ನ-ಬೆಳ್ಳಿ ದರ ಇಳಿಕೆ
ಆಮದು ಸುಂಕ ಹೆಚ್ಚಾದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತಕ್ಷಣವೇ ದುಬಾರಿಯಾಗಲಿವೆ. ಮುಂಬರುವ ಹಬ್ಬ ಹಾಗೂ ಮದುವೆ ಸೀಸನ್‌ಗಳಲ್ಲಿ ಆಭರಣ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್‌ಟಿ ಜೊತೆಗೆ ಈ ಹೆಚ್ಚುವರಿ ಸುಂಕದ ಹೊರೆಯೂ ತಟ್ಟಲಿದೆ. ಆಮದಾಗುವ ಚಿನ್ನದ ಮೇಲೆ ಶೇ. 15 ತೆರಿಗೆ ವಿಧಿಸಲಾಗಿದೆ. ಇದರ ಜೊತೆ ಚಿನ್ನದ ಮೌಲ್ಯದ ಮೇಲೆ ಶೇ. 3 ಜಿಎಸ್‌ಟಿ ಮೊದಲದೇ ವಿಧಿಸಲಾಗಿದೆ. ಹೀಗಾಗಿ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ.
ಏರಿಕೆ ಮಾಡಿದ್ದು ಯಾಕೆ?
ಭಾರತದ ಚಿನ್ನದ ಆಮದು ಬಿಲ್ 2025 ರಲ್ಲಿ ಸುಮಾರು 58.9 ಬಿಲಿಯನ್ ಡಾಲರ್‌ಗೆ(5.62 ಲಕ್ಷ ಕೋಟಿ ರೂ.) ತಲುಪಿತ್ತು, ಇದು ದೇಶದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೆ ಭಾರಿ ಒತ್ತಡ ಹೇರಿತು. ಚಿನ್ನಕ್ಕಾಗಿ ಭಾರತೀಯ ರೂ. ನೀಡಿ ಡಾಲರ್ ಖರೀದಿಸುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ರೂ. ಮೌಲ್ಯ ಕುಸಿಯುತ್ತಿತ್ತು. ಇದನ್ನು ತಡೆಯಲು ಆಮದು ಪ್ರಮಾಣವನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.