ದೆಹಲಿ, ಏ. 28: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವರ್ಷ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದ್ದು, ಭಯೋತ್ಪಾದಕ ನೆಲೆಗಳನ್ನು ಉಡೀಸ್ ಮಾಡಿದೆ. ಈ ಕಾರ್ಯಾಚರಣೆ ವೇಳೆ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆ (S-400 Air Defence System). ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗಳನ್ನು ಗುರುತಿಸಿ ಆಕಾಶದಲ್ಲಿ ಧ್ವಂಸ ಮಾಡುವ ಮೂಲಕ ಸುದರ್ಶನ ಚಕ್ರ ಎನಿಸಿಕೊಂಡಿರುವ ಎಸ್-400 ಗಮನ ಸೆಳೆದಿತ್ತು. ಹೀಗೆ ಎಸ್-400 ಭಾರತೀಯ ಸೇನೆಯ ವಾಯು ಸೇನೆಯ ಪ್ರಮುಖ ಅಸ್ತ್ರ ಎನಿಸಿಕೊಂಡಿದೆ. ಇದೀಗ ಮತ್ತೊಂದು ಎಸ್-400 ನಮ್ಮ ಸೇನೆಯ ಕೈ ಸೇರಲಿದೆ. ಹೌದು ಮೇಯಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ವರ್ಷ ತುಂಬುವ ಹೊತ್ತಲ್ಲೇ ಮತ್ತೊಂದು ಎಸ್-400 ಭಾರತಕ್ಕೆ ಬರಲಿದೆ.
ರಷ್ಯಾ ಮತ್ತೊಂದು ಎಸ್-400 ಭಾರತಕ್ಕೆ ಹಸ್ತಾಂತರಿಸಲು ಸಜ್ಜಾಗಿದೆ. ಮೇ ಮಧ್ಯ ಭಾಗದಲ್ಲಿ ಇದು ಭಾರತಕ್ಕೆ ಆಗಮಿಸಲಿದೆ. ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ರಕ್ಷಣಾ ವ್ಯವಸ್ಥೆ ಎನಿಸಿಕೊಂಡಿರುವ ಇದರ ಖರೀದಿಗೆ ಭಾರತ 2018ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಹೊಸದಾಗಿ ಬರಲಿರುವ ಈ ಘಟಕವನ್ನು ರಾಜಸ್ಥಾನದಲ್ಲಿ ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ಎಸ್-400
4ನೇ ಘಟಕ
ಭಾರತವು ಒಟ್ಟು 5 ಎಸ್-400 ಖರೀದಿಗೆ ರಷ್ಯಾದೊಂದಿಗೆ 35,000 ಕೋಟಿ ರುಪಾಯಿಗಳ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 3 ದೇಶದಲ್ಲಿ ಕಾರ್ಯಾಚರಿಸುತ್ತಿವೆ. ಇದು 4ನೇ ಘಟಕವಾಗಲಿದೆ. ಈ ವ್ಯವಸ್ಥೆ ಪಾಕಿಸ್ತಾನದ ಸಿಂಧೂ ನದಿಯ ಪೂರ್ವದ ಪ್ರದೇಶಗಳು ಸೇರಿದಂತೆ 400 ಕಿಲೋ ಮೀಟರ್ ವ್ಯಾಪ್ತಿಯವರೆಗಿನ ವೈಮಾನಿಕ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲಿದೆ.
ಭಾರತದ ಆಗಸಕ್ಕೆ 'ಸುದರ್ಶನ ಚಕ್ರ'ದ ಕವಚ; ಏರ್ ಡಿಫೆನ್ಸ್ ಬಲಪಡಿಸಲು ಕೌಂಟರ್-ಡ್ರೋನ್ ಗ್ರಿಡ್ ನಿರ್ಮಾಣ
ಯಾಕಾಗಿ ಈ ಹೆಸರು?
ಎಸ್-400 ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಗಮನಿಸಿ ಇದಕ್ಕೆ ಸುದರ್ಶನ ಚಕ್ರ ಎನ್ನುವ ಹೆಸರಿಡಲಾಗಿದೆ. ಸುದರ್ಶನ ಚಕ್ರ ಎಂದರೆ ಪುರಾಣದಲ್ಲಿ ಬರುವ ಪ್ರಮುಖ ಆಯುಧ. ವಿಷ್ಣುವಿನ ಕೈಯಲ್ಲಿರುವ ಇದು ಶತ್ರಗಳ ಎದೆಯಲ್ಲಿ ನಡುಕ ಹುಟ್ಟಿಸುವಷ್ಟು ಶಕ್ತಿಶಾಲಿ. ಇದೇ ಕಾರಣಕ್ಕೆ ನೆಲದಿಂದಲೇ ಆಗಸದಲ್ಲಿರುವ ಶತ್ರು ಸೇನೆಯ ದಾಳಿಯನ್ನು ತಡೆಗಟ್ಟುವ ಎಸ್-400 ವ್ಯವಸ್ಥೆಗೆ ಸುದರ್ಶನ ಚಕ್ರ ಎಂಬ ಅನ್ವರ್ಥ ನಾಮ ಇಡಲಾಗಿದೆ.
600 ಕಿ.ಮೀ. ದೂರದಲ್ಲಿರುವುದನ್ನು ಶತ್ರುವನ್ನು ಪತ್ತೆ ಮಾಡಬಲ್ಲ ಸಾಮರ್ಥ್ಯ
ರಷ್ಯಾದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿದ ಎಸ್–400 ವಿಶ್ವದ ಅತ್ಯಾಧುನಿಕ ದೂರಗಾಮಿ ಮೇಲ್ಮೈಯ ವಾಯು ಕ್ಷಿಪಣಿ ವ್ಯವಸ್ಥೆಗಳಲ್ಲಿ ಒಂದು. ಇದು 600 ಕಿಲೋ ಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಲೋ ಮೀಟರ್‌ಗಳವರೆಗಿನ ಗುರಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಇದು ವಿಮಾನ, ಡ್ರೋನ್, ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಹೊಡೆದುರುಳಿಸುತ್ತದೆ.
ಸುಮಾರು 400 ಕಿ.ಮೀ. ದೂರದಲ್ಲಿರುವ ಸ್ಟೆಲ್ತ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಹಾರುವ ಗುರಿಗಳನ್ನು ಹೊಡೆದುರುಳಿಸುವ ವ್ಯವಸ್ಥೆಯನ್ನು ಇದರಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಿಡಿತಲೆ ಕ್ಷಿಪಣಿಗಳು ಮತ್ತು ಶಬ್ದಾತೀತ ಗುರಿಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಒಳಗೊಂಡಿದೆ. ಎಸ್-400 ಬ್ಯಾಟರಿಯು ದೀರ್ಘ-ಶ್ರೇಣಿಯ ರೇಡಾರ್, ಕಮಾಂಡ್ ಪೋಸ್ಟ್ ವೆಹಿಕಲ್, ಟಾರ್ಗೆಟ್ ಅಕ್ವಿಸಿಷನ್ ರೇಡಾರ್ ಮತ್ತು ಎರಡು ಬೆಟಾಲಿಯನ್ ಲಾಂಚರ್‌ಗಳನ್ನೂ ಹೊಂದಿದೆ. ಪ್ರತಿ ಲಾಂಚರ್ 4 ಟ್ಯೂಬ್‌ಗಳನ್ನು ಹೊಂದಿರುತ್ತದೆ.
ಪಾಕ್ ಡ್ರೋನ್, ಕ್ಷಿಪಣಿಯನ್ನು ಹೊಡೆದುರುಳಿಸಿದ ಸುದರ್ಶನ ಚಕ್ರ
ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದು ಎನ್ನುವುದು ಇದರ ಮತ್ತೊಂದು ವೈಶಿಷ್ಟ್ಯ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.