India Air Defence: ಭಾರತದ ಆಗಸಕ್ಕೆ 'ಸುದರ್ಶನ ಚಕ್ರ'ದ ಕವಚ; ಏರ್ ಡಿಫೆನ್ಸ್ ಬಲಪಡಿಸಲು ಕೌಂಟರ್-ಡ್ರೋನ್ ಗ್ರಿಡ್ ನಿರ್ಮಾಣ
ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, ಶತ್ರು ಮತ್ತು ಅಕ್ರಮ ಡ್ರೋನ್‌ಗಳ ವಿರುದ್ಧ ಮೂರು ಸೇನೆಗಳ ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ಏಕೀಕರಿಸುವ ಸಂಯುಕ್ತ CUAS ಗ್ರಿಡ್ ಅನ್ನು ಭಾರತೀಯ ಸಶಸ್ತ್ರ ಪಡೆಗಳು ರೂಪಿಸುತ್ತಿವೆ. ಈ ಹೊಸ ವ್ಯವಸ್ಥೆ IACCS ಸೇರಿದಂತೆ ಈಗಿರುವ ವಾಯು ರಕ್ಷಣಾ ಜಾಲಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಸಣ್ಣ ಡ್ರೋನ್‌ಗಳ ಪತ್ತೆಯ ಜವಾಬ್ದಾರಿಯನ್ನು IACCSಗೆ ನೀಡಿದರೆ ಅದರ ಮೇಲೆ ಹೆಚ್ಚಿನ ಭಾರ ಬೀಳಲಿದೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜ. 7: ವೈರಿ ಹಾಗೂ ಅಕ್ರಮ ಡ್ರೋನ್‌ಗಳ ವಿರುದ್ಧ ಭಾರತದ ವಾಯು ರಕ್ಷಣಾ ವ್ಯವಸ್ಥೆ (India’s air defence)ಯನ್ನು ಆಧುನೀಕರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೂರು ಸೇನೆಗಳಲ್ಲಿ ಡ್ರೋನ್ ವಿರೋಧಿ ಸಾಮರ್ಥ್ಯಗಳನ್ನು ಒಗ್ಗೂಡಿಸುವ ಸಂಯುಕ್ತ ಕೌಂಟರ್ ಅನ್‌ಮ್ಯಾನ್ಡ್ ಏರಿಯಲ್ ಸಿಸ್ಟಮ್ಸ್ (Counter Unmanned Aerial Systems) ಗ್ರಿಡ್ ಅನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತಾವಿತ CUAS ಗ್ರಿಡ್, ಇಂಟಿಗ್ರೇಟೆಡ್ ಏರ್ ಕಮಾಂಡ್ ಅಂಡ್ ಕಂಟ್ರೋಲ್ ಸಿಸ್ಟಮ್ (IACCS) ಸೇರಿದಂತೆ ಈಗಿರುವ ವಾಯು ರಕ್ಷಣಾ ಜಾಲಗಳಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಸಾಂಪ್ರದಾಯಿಕ ವೈಮಾನಿಕ ಬೆದರಿಕೆಗಳ ಜತೆಗೆ ಸಣ್ಣ ಡ್ರೋನ್‌ಗಳನ್ನು ಪತ್ತೆಹಚ್ಚುವ ಜವಾಬ್ದಾರಿ ನೀಡಿದರೆ IACCS ಮೇಲಿನ ಒತ್ತಡ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬದಲಾಗಿ ಈ ಹೊಸ ಗ್ರಿಡ್ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಜಂಟಿ ವಾಯು ರಕ್ಷಣಾ ಕೇಂದ್ರ (JADC)ಗಳೊಂದಿಗೆ ಸಂಪರ್ಕ ಹೊಂದಿದ್ದು, ಶಾಶ್ವತ ಹಾಗೂ ವಿಶೇಷ ಡ್ರೋನ್ ವಿರೋಧಿ ಜಾಲವಾಗಿ ಕಾರ್ಯನಿರ್ವಹಿಸಲಿದೆ.
ಕಳೆದ 5-6 ವರ್ಷಗಳಲ್ಲಿ ಮೂರೂ ಸೇನಾ ವಿಭಾಗಗಳು ಪಡೆದುಕೊಂಡಿರುವ ಅನೇಕ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಈ ಗ್ರಿಡ್ ಒಗ್ಗೂಡಿಸಲಿದೆ. ಇದರ ಮೂಲಕ ಕಡಿಮೆ ಎತ್ತರದಲ್ಲಿ ಹಾರುವ ಮತ್ತು ಮಾನವ ರಹಿತ ವೈಮಾನಿಕ ಬೆದರಿಕೆಗಳನ್ನು ತಕ್ಷಣ ಗಮನಿಸುವುದು ಹಾಗೂ ವೇಗವಾಗಿ ಪ್ರತಿಕ್ರಿಯಿಸುವುದು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಚಿಂತನೆಯ ಹೃದಯಭಾಗವೇ ಸಾಮಾಜಿಕ ನ್ಯಾಯ
ಈ ಕ್ರಮವನ್ನು ‘ಆಪರೇಶನ್ ಸಿಂದೂರ್’ ಸಂದರ್ಭದಲ್ಲಿ ದೊರೆತ ಕಾರ್ಯಾಚರಣಾ ಅನುಭವಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ. ಆ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ಸೇನೆ ಟರ್ಕಿ ಮತ್ತು ಚೀನಾ ಮೂಲದ ಡ್ರೋನ್‌ಗಳನ್ನು ಬಳಸಿ ಭಾರತೀಯ ನಾಗರಿಕ ಹಾಗೂ ಸೇನೆಯನ್ನು ಗುರಿಯಾಗಿಸಲು ಪ್ರಯತ್ನಿಸಿತ್ತು. ಈ ದಾಳಿಗಳನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಲಾಗಿದ್ದು, ವಿಶೇಷವಾಗಿ ಸೇನಾ ವಾಯು ರಕ್ಷಣಾ ಘಟಕಗಳು L-70 ಮತ್ತು ZU-23 ಗನ್‌ಗಳನ್ನು ಬಳಸಿ ಸಣ್ಣ ಡ್ರೋನ್‌ಗಳನ್ನು ವಿಫಲಗೊಳಿಸಿದ್ದವು.
ಇದಲ್ಲದೆ, ಭವಿಷ್ಯದಲ್ಲಾಗಬಹುದಾದ ಡ್ರೋನ್ ಮತ್ತು ವಾಯು ದಾಳಿಗಳಿಂದ ನಾಗರಿಕ ಪ್ರದೇಶಗಳನ್ನು ರಕ್ಷಿಸಲು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವಾಯು ರಕ್ಷಣಾ ಗನ್‌ಗಳನ್ನು ನಿಯೋಜಿಸುವ ಕಾರ್ಯದಲ್ಲೂ ಭಾರತೀಯ ಸೇನೆ ತೊಡಗಿದೆ.
ವಿಸ್ತೃತವಾಗಿ ನೋಡಿದರೆ, ಈ ಕೌಂಟರ್-ಡ್ರೋನ್ ಗ್ರಿಡ್ ‘ಮಿಷನ್ ಸುದರ್ಶನ ಚಕ್ರ’ದ ಭಾಗವಾಗಿದೆ. ಇದು ದೇಶವ್ಯಾಪಿಯಾಗಿ ವೈಮಾನಿಕ ಬೆದರಿಕೆಗಳ ವಿರುದ್ಧ ಸಮಗ್ರ ರಕ್ಷಣಾ ಕವಚ ನಿರ್ಮಿಸುವ ಉದ್ದೇಶ ಹೊಂದಿದೆ. 2025ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ನಿಂತು ಮಾಡಿದ ಭಾಷಣದಲ್ಲಿ ಈ ಮಿಷನ್ ಅನ್ನು ಘೋಷಿಸಿದ್ದರು.
ಇತ್ತೀಚೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ 68ನೇ ವಾರ್ಷಿಕೋತ್ಸವದ ಅಂಗವಾಗಿ ಅದರ ಮುಖ್ಯ ಕಚೇರಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಯ, ಈ ಉಪಕ್ರಮವನ್ನು ಜಾರಿಗೆ ತರಲು DRDO ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದರು.