ನವದೆಹಲಿ, ಮೇ 30: ಫೆಬ್ರವರಿ 28ರಂದು ಇರಾನ್ ಯುದ್ಧಕ್ಕೆ ಪ್ರವೇಶಿಸಿದಾಗಿನಿಂದ ವಿಶ್ವದ ಅತ್ಯಂತ ನಿರ್ಣಾಯಕ ತೈಲ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯು (Strait of Hormuz) ಸಂಪೂರ್ಣವಾಗಿ ದಿಗ್ಬಂಧನಕ್ಕೆ ಒಳಗಾಗಿದೆ. ಇರಾನ್ ಮತ್ತು ಒಮಾನ್ (Iran-Oman) ನಡುವಿನ ಈ ಕಿರಿದಾದ ಮಾರ್ಗವು ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಶೇಕಡಾ 20ರಷ್ಟನ್ನು ಹೊತ್ತೊಯ್ಯುತ್ತದೆ. ಏಪ್ರಿಲ್ 9ರ ಕದನ ವಿರಾಮದ ನಂತರವೂ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಆದಾಗ್ಯೂ ಈ ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಹಲವು ಭಾರತೀಯ ಹಡಗುಗಳು ಈ ಜಲಸಂಧಿಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದ್ದು, ಭಾರತ ತನ್ನ ಇಂಧನ ಪೂರೈಕೆಯನ್ನು ಕಾಯ್ದುಕೊಳ್ಳಲು ನೆರವಾಗಿವೆ.
ಯುದ್ಧಕ್ಕೆ ಕಾರಣವಾದ ಅಮೆರಿಕ-ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಜಲಸಂಧಿಯಲ್ಲಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದರಿಂದ ಭಾರತದ ಈ ನಡೆ ಮಹತ್ವದ್ದಾಗಿದೆ. ಶುಕ್ರವಾರ (ಮೇ 29) ನಡೆದ ಅಂತರ್-ಸಚಿವಾಲಯದ ಸಭೆಯಲ್ಲಿ ನೌಕಾಯಾನ ಸಚಿವಾಲಯದ ಅಧಿಕಾರಿಗಳು ಕಾರ್ಯಾಚರಣೆಯ ರಹಸ್ಯ ವಿವರಗಳನ್ನು ಬಹಿರಂಗಪಡಿಸದೆ, ಭಾರತವು ಈ ಉದ್ವಿಗ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
"ನಾವು ಇರಾನ್ ಜತೆ ಹೇಗೆ ಸಮನ್ವಯ ಸಾಧಿಸುತ್ತೇವೆ ಮತ್ತು ಹಡಗುಗಳ ಸಂಚಾರಕ್ಕೆ ಹೇಗೆ ಆದ್ಯತೆ ನೀಡುತ್ತೇವೆ ಎಂಬುದನ್ನು ಭದ್ರತಾ ಕಾರಣಗಳಿಗಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಈ ಸಮನ್ವಯವನ್ನು ನಿರ್ವಹಿಸುತ್ತಿದ್ದೇವೆ" ಎಂದು ಬಂದರು ಮತ್ತು ನೌಕಾಯಾನ ಸಚಿವಾಲಯದ ನಿರ್ದೇಶಕ ಒಪೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ರಸಗೊಬ್ಬರ ಸಚಿವಾಲಯಗಳೊಂದಿಗೆ ಜಂಟಿಯಾಗಿ ಚರ್ಚಿಸಿ ಅಗತ್ಯ ವಸ್ತುಗಳ ಹಡಗುಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆ ಮರುಸ್ಥಾಪನೆಗೆ ನಿರ್ದೇಶನ ನೀಡಲು ಹೈಕೋರ್ಟ್ ನಕಾರ
ಶರ್ಮಾ ಅವರ ಪ್ರಕಾರ, ಸದ್ಯ ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ಭಾರತದ ಧ್ವಜ ಹೊಂದಿರುವ ಸುಮಾರು 13 ಹಡಗುಗಳಿವೆ. ಇವುಗಳಲ್ಲಿ ಒಂದು ಎಲ್‌ಪಿಜಿ ಟ್ಯಾಂಕರ್, ಐದು ಕಚ್ಚಾ ತೈಲ ಟ್ಯಾಂಕರ್‌ಗಳು, ಒಂದು ರಾಸಾಯನಿಕ ಟ್ಯಾಂಕರ್, ಮೂರು ಕಂಟೈನರ್ ಹಡಗುಗಳು, ಎರಡು ಬಲ್ಕ್ ಕ್ಯಾರಿಯರ್‌ಗಳು ಮತ್ತು ಒಂದು ಡ್ರೆಡ್ಜರ್ ಸೇರಿವೆ. ಅಪಾಯದ ನಡುವೆಯೂ ಈ ಮಾರ್ಗದಲ್ಲಿ ಅತಿ ಹೆಚ್ಚು ಹಡಗುಗಳನ್ನು ಮುನ್ನಡೆಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಶಿವಾಲಿಕ್, ನಂದಾದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್ ಸೇರಿ ಹಲವು ಭಾರತೀಯ ಹಡಗುಗಳು ಈ ಮಾರ್ಗದ ಮೂಲಕವೇ ದೇಶಕ್ಕೆ ಬಂದಿವೆ.
ಸಾರ್ವಜನಿಕವಾಗಿ ಲಭ್ಯವಿರುವ ಹಡಗು ಟ್ರ್ಯಾಕಿಂಗ್ ಡೇಟಾದಿಂದ ಹಡಗುಗಳ ಸುರಕ್ಷತೆಗೆ ಧಕ್ಕೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇವು ವಾಣಿಜ್ಯ ಅಪ್ಲಿಕೇಶನ್‌ಗಳಾಗಿದ್ದು, ಎಲ್ಲರಿಗೂ ಮುಕ್ತವಾಗಿವೆ. ಸಾರ್ವಜನಿಕ ಡೊಮೇನ್‌ನಲ್ಲಿರುವ ಡೇಟಾವನ್ನು ಜನರು ತಮ್ಮ ಉದ್ದೇಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಆದರೆ ಪ್ರಸ್ತುತ ಈ ಡೇಟಾ ನಮಗೂ ಹಡಗುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತಿದೆ" ಎಂದಿದ್ದಾರೆ.