ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಚ್ಚಿದ ಇಂಧನ ಬೇಡಿಕೆ: ಬಾಂಗ್ಲಾದೇಶಕ್ಕೆ ಭಾರತದಿಂದ 4 ಸಾವಿರ ಟನ್ ಡೀಸೆಲ್ ಪೂರೈಕೆ

Friendship Pipeline: ಇಂಧನದ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತವು ಭಾರತ–ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್‌ ಮೂಲಕ ಸುಮಾರು 4,000 ಮೆಟ್ರಿಕ್‌ ಟನ್‌ ಡೀಸೆಲ್‌ ಪೂರೈಸಿದೆ. ಇದು ಪೈಪ್‌ಲೈನ್‌ ಮೂಲಕ ಸಾಗಿಸಲಾದ 72ನೇ ಕಂತಾಗಿದ್ದು, 2023ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಆರಂಭವಾದ ಬಳಿಕ ಬಾಂಗ್ಲಾದೇಶವು 3,30,087 ಟನ್‌ ಡೀಸೆಲ್‌ ಆಮದು ಮಾಡಿಕೊಂಡಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಸೆ. 16: ಬಾಂಗ್ಲಾದೇಶದಲ್ಲಿ ಇಂಧನದ ಬೇಡಿಕೆ (Fuel Demand) ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತವು ಹೆಚ್ಚುವರಿ ಡೀಸೆಲ್ ಪೂರೈಕೆ (Diesel Supply) ಮಾಡಿದೆ. ಭಾರತ–ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್‌ (India-Bangladesh Friendship Pipeline) ಮೂಲಕ ಸುಮಾರು 4,000 ಮೆಟ್ರಿಕ್‌ ಟನ್‌ ಅಂದರೆ 47 ಲಕ್ಷ ಲೀಟರ್‌ ಡೀಸೆಲ್‌ ಬಾಂಗ್ಲಾದೇಶಕ್ಕೆ ತಲುಪಿದೆ.

ದಿನಾಜ್‌ಪುರದ ಪರ್ಬತಿಪುರ ರಿಸೀವಿಂಗ್‌ ಟರ್ಮಿನಲ್‌ ಡಿಪೋಗೆ ಭಾರತದಿಂದ ಈ ಡೀಸೆಲ್‌ ಬಂದಿದೆ. ಇದು ಸ್ನೇಹ ಪೈಪ್‌ಲೈನ್‌ ಮೂಲಕ ಸಾಗಿಸಲಾದ 72ನೇ ಕಂತಾಗಿದೆ. ಸೆಪ್ಟೆಂಬರ್‌ 13ರಂದು ಬೆಳಗ್ಗೆ 9 ಗಂಟೆಗೆ ಆರಂಭವಾದ ಡೀಸೆಲ್‌ ವರ್ಗಾವಣೆ ಸೆಪ್ಟೆಂಬರ್‌ 15ರಂದು ಪೂರ್ಣಗೊಂಡಿದೆ ಎಂದು ಪರ್ಬತಿಪುರ ರೈಲು ಡಿಪೋದ ಕಾರ್ಯಾಚರಣೆ ವ್ಯವಸ್ಥಾಪಕ ಮೊಹಮ್ಮದ್‌ ರೊಬಿಯುಲ್‌ ಆಲಂ ತಿಳಿಸಿದ್ದಾರೆ.

2018ರ ದ್ವಿಪಕ್ಷೀಯ ಒಪ್ಪಂದದ ಅನ್ವಯ ಬಾಂಗ್ಲಾದೇಶವು 15 ವರ್ಷಗಳ ಅವಧಿಯಲ್ಲಿ ಸುಮಾರು 20 ಲಕ್ಷ ಟನ್‌ ಡೀಸೆಲ್‌ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿತ್ತು. 2023ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಉದ್ಘಾಟನೆಯಾದ ಬಳಿಕ ಇದುವರೆಗೆ 3,30,087 ಟನ್‌ ಡೀಸೆಲ್‌ ಅನ್ನು ಈ ಮಾರ್ಗದ ಮೂಲಕ ಬಾಂಗ್ಲಾದೇಶ ಆಮದು ಮಾಡಿಕೊಂಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ 2023ರ ಮಾರ್ಚ್‌ನಲ್ಲಿ ಭಾರತ–ಬಾಂಗ್ಲಾದೇಶ ಸ್ನೇಹ ಪೈಪ್‌ಲೈನ್‌ ಉದ್ಘಾಟಿಸಿದ್ದರು. ಇದರ ನಿರ್ಮಾಣಕ್ಕೆ 2018ರ ಸೆಪ್ಟೆಂಬರ್‌ನಲ್ಲಿ ಇಬ್ಬರೂ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಪೈಪ್‌ಲೈನ್‌ ಮೂಲಕ ವರ್ಷಕ್ಕೆ 10 ಲಕ್ಷ ಮೆಟ್ರಿಕ್‌ ಟನ್‌ ಹೈ-ಸ್ಪೀಡ್‌ ಡೀಸೆಲ್‌ (HSD) ಸಾಗಿಸುವ ಸಾಮರ್ಥ್ಯವಿದೆ. ಭಾರತ–ಬಾಂಗ್ಲಾದೇಶ ನಡುವಿನ ಮೊದಲ ಗಡಿ ದಾಟುವ ಇಂಧನ ಪೈಪ್‌ಲೈನ್‌ ಇದಾಗಿದೆ. ನುಮಾಲಿಗಢ್‌ ರಿಫೈನರಿ ಲಿಮಿಟೆಡ್‌ 2015ರಿಂದಲೇ ಬಾಂಗ್ಲಾದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿದೆ.

ಇತ್ತೀಚಿಗೆ ಭಾರತದಿಂದ ಬಾಂಗ್ಲಾದೇಶಕ್ಕೆ ಡೀಸೆಲ್‌ ಪೂರೈಕೆ ಮುಂದುವರಿದಿದೆ. ಮಾರ್ಚ್‌ನಲ್ಲಿ 17,000 ಟನ್‌, ಏಪ್ರಿಲ್‌ನಲ್ಲಿ 25,000 ಟನ್‌, ಮೇಯಲ್ಲಿ 8,000 ಟನ್‌ ಮತ್ತು ಜುಲೈನಲ್ಲಿ 8,000 ಟನ್‌ ಸಂಸ್ಕರಿತ ಡೀಸೆಲ್‌ ಅನ್ನು ಭಾರತದಿಂದ ಬಾಂಗ್ಲಾದೇಶ ಆಮದು ಮಾಡಿಕೊಂಡಿತ್ತು.

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವಿನ ಪೂರೈಕೆ ಸವಾಲುಗಳಿಂದ ಬಾಂಗ್ಲಾದೇಶ ಇಂಧನ ಕೊರತೆ ಎದುರಿಸಿದ್ದ ಸಂದರ್ಭದಲ್ಲಿ ಮಾರ್ಚ್‌ನಲ್ಲಿ 17,000 ಟನ್‌ ಡೀಸೆಲ್‌ ಅನ್ನು ಪೈಪ್‌ಲೈನ್‌ ಮೂಲಕ ಆಮದು ಮಾಡಿಕೊಳ್ಳಲಾಗಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಹೆಚ್ಚುವರಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಗಾಗಿ ಬಾಂಗ್ಲಾದೇಶ ಭಾರತಕ್ಕೆ ಮನವಿ ಮಾಡಿತ್ತು.