ಇಸ್ಲಾಮಾಬಾದ್: ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಭಾರತ 100 ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಭಾರತದ ದಾಳಿ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣಗೊಂಡಿದೆ. ಇದೀಗ ಭಾರತ ಮತ್ತೆ ಆಪರೇಷನ್ ಸಿಂದೂರ ಶುರು ಮಾಡಿದೆ. ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿನ ಭಾರತೀಯ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಿನ್ನೆ ತಡರಾತ್ರಿ ಮತ್ತು ಇಂದು ಬೆಳಗಿನ ಜಾವ ಪಾಕಿಸ್ತಾನ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ದಾಳಿಗೆ ಪ್ರಯತ್ನಿಸಿತ್ತು. ಇದೀಗ ಈ ಕುರಿತು ರಕ್ಷಣಾ ಇಲಾಖೆ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಭಾರತೀಯ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ತಟಸ್ಥಗೊಳಿಸಿವೆ ಎಂದು ಸರ್ಕಾರ ಹೇಳಿದೆ. ಚೀನಾ ಅಭಿವೃದ್ಧಿಪಡಿಸಿದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಘಟಕಗಳನ್ನು ಹೊಡೆದುರುಳಿಸಲಾಗಿದೆ. ಲಾಹೋರ್, ರಾವಲ್ಪಂಡಿ, ಕರಾಚಿ ಸೇರಿದಂತೆ ಒಟ್ಟು ಪಾಕಿಸ್ತಾನದ 12 ಸ್ಥಳಗಳಲ್ಲಿ ಪ್ರತಿದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಭಾರತ - ಪಾಕಿಸ್ತಾನ ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ; ಪೊಲೀಸರ ರಜೆ ರದ್ದು, ಶಾಲಾ ಕಾಲೇಜಿಗೆ ರಜೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯುದ್ದಕ್ಕೂ ಮಾರ್ಟರ್‌ಗಳು ಮತ್ತು ಭಾರೀ ಕ್ಯಾಲಿಬರ್ ಫಿರಂಗಿಗಳನ್ನು ಬಳಸಿ ತನ್ನ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದ ಇದುವರೆಗೆ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಹದಿನಾರು ಅಮಾಯಕರು ಬಲಿಯಾಗಿದ್ದಾರೆ.