ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಮಂಗಳವಾರ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ಮತ್ತು ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Abdullah bin Zayed Al Nahyan) ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಾದೇಶಿಕ ಇಂಧನ ಭದ್ರತೆ ಮತ್ತು ಪರಸ್ಪರ ಹಂಚಿಕೊಂಡ ಆರ್ಥಿಕ ಆದ್ಯತೆಗಳನ್ನು ಮುಂದುವರಿಸುವ ಮಾರ್ಗಗಳ ಕುರಿತು ಚರ್ಚಿಸಲಾಗಿದ್ದು, ಇಬ್ಬರು ನಾಯಕರೊಂದಿಗಿನ ಸಭೆ ಉತ್ತಮವಾಗಿತ್ತು ಎಂದು ರೂಬಿಯೊ ತಿಳಿಸಿದ್ದಾರೆ.
ಯುಎಇ ವಿದೇಶಾಂಗ ಸಚಿವರು ಸೋಮವಾರ ಸಂಜೆ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಮಂಗಳವಾರದ ಸಭೆಯಲ್ಲಿ ಭಾಗವಹಿಸಿದರು.
ಇಂಧನ ವ್ಯಾಪಾರ ಹೆಚ್ಚಿಸಲು ಅಮೆರಿಕ ಒಲವು
ಸಭೆಯ ಬಳಿಕ ಅಮೆರಿಕದ ವಿದೇಶಾಂಗ ಇಲಾಖೆಯು ಪ್ರಕಟಣೆ ಬಿಡುಗಡೆ ಮಾಡಿದ್ದು, ರೂಬಿಯೊ ಮತ್ತು ಜೈಶಂಕರ್ ಅವರು ಮಧ್ಯಪ್ರಾಚ್ಯದ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿಸಿದೆ. ಭಾರತದ ದೊಡ್ಡ ಪ್ರಮಾಣದ ಗ್ರಾಹಕ ಬೇಡಿಕೆಯನ್ನು ಪೂರೈಸುವ ಜೊತೆಗೆ, ಇಂಧನ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಅಮೆರಿಕದೊಂದಿಗೆ ಇಂಧನ ವ್ಯಾಪಾರ ಹೆಚ್ಚಿಸುವುದು ಮಹತ್ವದ ಪಾತ್ರ ವಹಿಸಬಹುದು ಎಂದು ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರ ಹಾಗೂ ನಾಗರಿಕ ಪರಮಾಣು ಸಹಕಾರದಲ್ಲಿ ಇತ್ತೀಚೆಗೆ ಆಗಿರುವ ಪ್ರಗತಿಯನ್ನು ಅವರು ಶ್ಲಾಘಿಸಿದ್ದು, ಉಭಯ ದೇಶಗಳ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಅಮೆರಿಕದ ತಂತ್ರಜ್ಞಾನಗಳು ಹಾಗೂ ರಕ್ಷಣಾ ವ್ಯವಸ್ಥೆಗಳ ಖರೀದಿಯನ್ನು ಹೆಚ್ಚಿಸುವಂತೆಯೂ ಅವರು ಒತ್ತಾಯಿಸಿದರು.
ರಷ್ಯಾದ ತೈಲ ಖರೀದಿ ವಿಚಾರವಾಗಿ ಭಾರತದ ನಿಲುವಿಗೆ ಬೆಂಬಲ
ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸುತ್ತಿದ್ದರೂ, ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ರೂಬಿಯೊ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತವು ತನ್ನ ಇಂಧನ ಪೂರೈಕೆಯ ಮೂಲಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವುದು ವಿವೇಕಯುತ ನಿರ್ಧಾರವಾಗಿದೆ. ಆದರೆ, ಈ ಬದಲಾವಣೆಯನ್ನು ಒಂದೇ ದಿನದಲ್ಲಿ ಸಾಧಿಸುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, ಅದನ್ನು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಭಾರತದ ರಷ್ಯಾದ ತೈಲ ಖರೀದಿಯ ಬಗ್ಗೆ ಪ್ರತಿಕ್ರಿಯಿಸಿದ ರೂಬಿಯೊ, ಈ ವಿಚಾರ ಕೇವಲ ರಷ್ಯಾದ ತೈಲಕ್ಕೆ ಸೀಮಿತವಾಗಿಲ್ಲ. ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿದೆ. ಅಮೆರಿಕವು ಭಾರತದ ಇಂಧನ ಅಗತ್ಯಗಳಿಗೆ ಪೂರಕವಾದ ಮೂಲವಾಗಬಹುದು. ವೆನೆಜುವೆಲಾ ಸೇರಿದಂತೆ ಇತರ ದೇಶಗಳ ಬಗ್ಗೆಯೂ ಚರ್ಚಿಸಿದ್ದೇವೆ. ವೈವಿಧ್ಯಮಯ ಇಂಧನ ಮೂಲಗಳನ್ನು ಹೊಂದಿರುವ ಬಲಿಷ್ಠ ಮಿತ್ರರಾಷ್ಟ್ರಗಳು ಇರುವುದು ಅಮೆರಿಕದ ಹಿತಾಸಕ್ತಿಗೂ ಅನುಕೂಲಕರವಾಗಿದೆ ಎಂದು ತಿಳಿಸಿದರು.
ದೇಶದ ಹಿತಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ: ಸಿಜೆಪಿ ಪ್ರತಿಭಟನೆ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕರೆ
ರಕ್ಷಣಾ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒತ್ತು
ಈ ವರ್ಷ ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ರೂಬಿಯೊ ಮಂಗಳವಾರ ಮುಂಬೈಗೆ ಆಗಮಿಸಿದರು. ಅವರ ಭೇಟಿಯ ಸಂದರ್ಭದಲ್ಲಿ ರಕ್ಷಣೆ, ಭದ್ರತೆ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಅಮೆರಿಕ, ರಷ್ಯಾ, ಚೀನಾ ನಡುವೆ ಶಸ್ತ್ರ ನಿಯಂತ್ರಣ ಮಾತುಕತೆಗೆ ಬೆಂಬಲ
ಅಮೆರಿಕ, ರಷ್ಯಾ ಮತ್ತು ಚೀನಾ ನಡುವೆ ಶಸ್ತ್ರ ನಿಯಂತ್ರಣದ ಕುರಿತು ಮಾತುಕತೆ ನಡೆಯುವ ಪ್ರಸ್ತಾಪಕ್ಕೂ ರೂಬಿಯೊ ಬೆಂಬಲ ಸೂಚಿಸಿದರು. ವಿಶ್ವದ ಪ್ರಮುಖ ಮೂರು ಪರಮಾಣು ಶಕ್ತಿಗಳ ನಡುವೆ ಸಂವಾದ ನಡೆಯುವುದು ಜಾಗತಿಕ ಶಾಂತಿಗೆ ಪ್ರಯೋಜನಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯದಲ್ಲಿ ನಾಯಕರ ಮಟ್ಟದ ಚರ್ಚೆಗೆ ಮುಕ್ತ ಮನಸ್ಸು ಹೊಂದಿದ್ದಾರೆ ಎಂದು ರೂಬಿಯೊ ತಿಳಿಸಿದರು.
ಪರಸ್ಪರ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದರೂ, ರಾಜತಾಂತ್ರಿಕತೆಯಲ್ಲಿ ಸಂವಹನ ಅತ್ಯಗತ್ಯ ಎಂದು ಅವರು ಹೇಳಿದರು. ಆದರೆ, ಚೀನಾ ಈ ಮಾತುಕತೆಯಲ್ಲಿ ಭಾಗವಹಿಸಲು ಸಿದ್ಧವಿದೆಯೇ ಎಂಬ ಬಗ್ಗೆ ಖಚಿತತೆ ಇಲ್ಲ ಎಂದರು. ಇತರ ಪರಮಾಣು ಶಕ್ತಿಗಳಿಗೆ ಸಮನಾದ ಸಾಮರ್ಥ್ಯವನ್ನು ತಲುಪಿದ ಬಳಿಕವೇ ಶಸ್ತ್ರ ನಿಯಂತ್ರಣದ ಕುರಿತು ಚರ್ಚಿಸುವುದಾಗಿ ಚೀನಾ ಈ ಹಿಂದೆ ಹೇಳಿಕೊಂಡಿದೆ ಎಂದೂ ರೂಬಿಯೊ ಉಲ್ಲೇಖಿಸಿದರು.