ನವದೆಹಲಿ, ಆ. 25: ಕಳೆದ ವರ್ಷ ಭಾರತೀಯ ಪಡೆಗಳು ಕೈಗೊಂಡಿದ್ದ ಆಪರೇಷನ್ ಸಿಂದೂರ್ (Operation Sindoor) ವಾಯುದಾಳಿಯ ಸಂದರ್ಭದಲ್ಲಿ ಪಾಕಿಸ್ತಾನ (Pakistan) ಸಶಸ್ತ್ರ ಪಡೆಗಳ ಪ್ರಮುಖ ಅಣು ಕೇಂದ್ರವಾದ ಕಿರಣಾ ಹಿಲ್ಸ್ (Kirana Hills) ಮೇಲೆ ಬಿದ್ದ ಭಾರತೀಯ ಡ್ರೋನ್ ದಾಳಿಯು ಉದ್ದೇಶಪೂರ್ವಕವಾಗಿರಲಿಲ್ಲ. ಬದಲಿಗೆ ಇಂಧನ ಖಾಲಿಯಾದ ಕಾರಣ ಆಕಸ್ಮಿಕವಾಗಿ ಅಪ್ಪಳಿಸಿತ್ತು ಎಂಬ ಮಹತ್ವದ ರಹಸ್ಯವನ್ನು ಭಾರತದ ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ (General Anil Chauhan) ಬಹಿರಂಗಪಡಿಸಿದ್ದಾರೆ.
ನವದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜನರಲ್ ಅನಿಲ್ ಚೌಹಾಣ್, ಕಿರಣಾ ಹಿಲ್ಸ್ ಘಟನೆಯ ಸುತ್ತ ಹಬ್ಬಿದ್ದ ಹಲವು ಊಹಾಪೋಹಗಳಿಗೆ ಮತ್ತು ನಿಗೂಢತೆಗೆ ಸ್ಪಷ್ಟ ವಿವರಣೆ ನೀಡಿದರು. ಆಪರೇಷನ್ ಸಿಂದೂರ್ ವಾಯುದಾಳಿಯ ವೇಳೆ ಇಸ್ರೇಲ್ ತಂತ್ರಜ್ಞಾನ ಆಧಾರಿತ ಹಾರೂಪ್ ಲೋಯ್ಟರಿಂಗ್ ಮ್ಯುನಿಷನ್ (ಆತ್ಮಾಹುತಿ ಡ್ರೋನ್) ಪಾಕಿಸ್ತಾನದ ರೇಡಾರ್ ವ್ಯವಸ್ಥೆಗಳನ್ನು ಹುಡುಕಿ ಹೊಡೆದುರುಳಿಸುವ ಉದ್ದೇಶದಿಂದ ಸರಗೋಧಾ ಮತ್ತು ಸರಗೋಧಾದಿಂದ ಉತ್ತರಕ್ಕೆ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕಿರಣಾ ಹಿಲ್ಸ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿತ್ತು.
ಕಿರಣಾ ಹಿಲ್ಸ್ ಮೇಲೆ ಅಪ್ಪಳಿಸಿದ ಡ್ರೋನ್:
ಸುಮಾರು ಎರಡು ಗಂಟೆಗಳ ಕಾಲ ಮಾತ್ರ ನಿರಂತರ ಹಾರಾಟ ನಡೆಸುವ ಬ್ಯಾಟರಿ ಹಾಗೂ ಇಂಧನ ಸಾಮರ್ಥ್ಯವನ್ನು ಹೊಂದಿರುವ ಈ ಲೋಯ್ಟರ್ ಮದ್ದುಗುಂಡಿಗೆ ಯಾವುದೇ ನಿರ್ದಿಷ್ಟ ಶತ್ರು ರೇಡಾರ್ ಗುರಿ ಸಿಗದಿದ್ದಾಗ ಹಾಗೂ ನಿಗದಿತ ಇಂಧನ ಸಂಪೂರ್ಣ ಮುಗಿದುಬಂದಾಗ, ಅದು ಕಿರಣಾ ಹಿಲ್ಸ್ ಗುಡ್ಡಗಾಡು ಪ್ರದೇಶದ ಮೇಲೆ ಬಿದ್ದಿದೆ ಎಂದು ಅವರು ವಿವರಿಸಿದರು. ಈ ಹಿಂದೆ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ವೇಳೆ ಭಾರತ ಉದ್ದೇಶಪೂರ್ವಕವಾಗಿ ಕಿರಣಾ ಹಿಲ್ಸ್ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ನಿವೃತ್ತ ಏರ್ ಮಾರ್ಷಲ್ ಎ.ಕೆ. ಭಾರ್ತಿ ನೀಡಿದ್ದ ಹೇಳಿಕೆ ಸಂಪೂರ್ಣ ಸತ್ಯವಾಗಿದೆ ಎಂದು ಜನರಲ್ ಚೌಹಾಣ್ ದೃಢಪಡಿಸಿದರು.
ಒಂದು ದಶಕ ಪೂರೈಸಿದ ಯುಪಿಐ ಕ್ರಾಂತಿ: ಡಿಜಿಟಲ್ ಅನುಭವ ಹಂಚಿಕೊಳ್ಳಲು ನಾಗರಿಕರಿಗೆ ಮೋದಿ ಕರೆ
ಇದೇ ಸಂದರ್ಭದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಸ್ಕರ್ದು ವಾಯುನೆಲೆಯ ಮೇಲೂ ದಾಳಿ ನಡೆಸಲು ವಾಯುಪಡೆಗೆ ಆರಂಭದಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು ಎಂದು ಚೌಹಾಣ್ ತಿಳಿಸಿದರು. ಆದರೆ ಕಾರ್ಯಾಚರಣೆಯ ಸಮಯದಲ್ಲಿ ಅಲ್ಲಿನ ತೀವ್ರ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಆ ಯೋಜನೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿ, ಪರ್ಯಾಯವಾಗಿ ಪಾಕಿಸ್ತಾನದ ಭೋಲಾರಿ ವಾಯುನೆಲೆಯ ಹ್ಯಾಂಗರ್ ಮೇಲೆ ಯಶಸ್ವಿಯಾಗಿ ದಾಳಿ ನಡೆಸಲಾಯಿತು ಎಂದರು.
ಭಾರತೀಯ ವಾಯುಪಡೆಯ ಗಾಂಧಿನಗರ ಮೂಲದ ನೈಋತ್ಯ ಏರ್ ಕಮಾಂಡ್ ನಡೆಸಿದ ಮೇ 10ರ ಈ ದಾಳಿಯು ಭೋಲಾರಿ ಹ್ಯಾಂಗರ್ ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತ್ತು. ಉಪಗ್ರಹ ಚಿತ್ರಗಳು ಹ್ಯಾಂಗರ್‌ನ ಛಾವಣಿ ಛಿದ್ರಗೊಂಡು ಭಾರಿ ಹಾನಿಯಾಗಿರುವುದನ್ನು ಸಾಬೀತುಪಡಿಸಿದ್ದು, ಭಾರತೀಯ ವಾಯುಪಡೆಯ ಅತ್ಯಂತ ನಿಖರ ಮತ್ತು ಶಕ್ತಿಶಾಲಿ ದಾಳಿಗೆ ಸಾಕ್ಷಿ ಎನಿಸಿಕೊಂಡಿದೆ