ನವದೆಹಲಿ: ಪಾಸ್‌ಪೋರ್ಟ್ (Passport) ಅನ್ನು ನಾಗರಿಕತ್ವದ ಪುರಾವೆಯಾಗಿ ಬಳಸುವ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಎಳೆದಿರುವ ಕೇಂದ್ರ ವಿದೇಶಾಂಗ ಸಚಿವಾಲಯ (Ministry of External Affairs) ಭಾರತೀಯ ಪಾಸ್‌ಪೋರ್ಟ್ ಕೇವಲ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ಅಧಿಕೃತ ಪ್ರಯಾಣದ ದಾಖಲೆ ಮಾತ್ರ; ಅದು ನಾಗರಿಕತ್ವದ ಅಂತಿಮ ಅಥವಾ ನಿರ್ಣಾಯಕ ಪುರಾವೆ ಅಲ್ಲ ಎಂದು ಸ್ಪಷ್ಟಪಡಿಸಿದೆ.
545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು
ಕಳೆದ ದಶಕದಲ್ಲಿ ದೇಶದಾದ್ಯಂತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆ 545ಕ್ಕೆ ಏರಿಕೆಯಾಗಿದೆ. ಇದು ಹಿಂದಿನಿಗಿಂತ ಸುಮಾರು ಆರು ಪಟ್ಟು ಹೆಚ್ಚಳವಾಗಿದೆ. ಈ ವರ್ಷ ಇನ್ನೂ 20 ಹೊಸ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಯೋಜಿಸಿದ್ದು, 2027ರೊಳಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಕನಿಷ್ಠ ಒಂದು ಪಾಸ್‌ಪೋರ್ಟ್ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದೆ.
ದೂರದ ಪ್ರದೇಶಗಳಿಗೂ ಸೇವೆ
ದೂರದ ಹಾಗೂ ದುರ್ಗಮ ಪ್ರದೇಶಗಳಿಗೆ ವಿಶೇಷ ಮೊಬೈಲ್ ಪಾಸ್‌ಪೋರ್ಟ್ ತಂಡಗಳನ್ನು ಕಳುಹಿಸಲಾಗುತ್ತಿದೆ. ಕಳೆದ ವರ್ಷ ನಡೆಸಿದ ವಿಶೇಷ ಶಿಬಿರಗಳ ಮೂಲಕ ಸುಮಾರು 3 ಲಕ್ಷ ಜನರಿಗೆ ಪಾಸ್‌ಪೋರ್ಟ್ ವಿತರಿಸಲಾಗಿದೆ.
ಕೇವಲ 10% ಭಾರತೀಯರ ಬಳಿ ಪಾಸ್‌ಪೋರ್ಟ್
ಪ್ರಸ್ತುತ ಭಾರತದ ಜನಸಂಖ್ಯೆಯಲ್ಲಿ ಸುಮಾರು 10% ಜನರ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ಶಿಕ್ಷಣ, ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ವಿದೇಶ ಪ್ರಯಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಪಾಸ್‌ಪೋರ್ಟ್ ಸೇವೆಯನ್ನು ತಲುಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ
25 ದೇಶಗಳೊಂದಿಗೆ ಮೊಬಿಲಿಟಿ ಒಪ್ಪಂದ
ಭಾರತವು 25 ರಾಷ್ಟ್ರಗಳೊಂದಿಗೆ 27 ಮೊಬಿಲಿಟಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಹಾಗೂ ಹಲವು ಗಲ್ಫ್ ರಾಷ್ಟ್ರಗಳು ಇದರಲ್ಲಿ ಸೇರಿವೆ. ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಹಾಗೂ ಉದ್ಯೋಗಾರ್ಥಿಗಳ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈ ಒಪ್ಪಂದಗಳನ್ನು ಮಾಡಲಾಗಿದೆ.
ಭಾರತೀಯರಿಗೆ ಹೆಚ್ಚಿದ ವೀಸಾ ಸೌಲಭ್ಯ
ಪ್ರಸ್ತುತ 27 ರಾಷ್ಟ್ರಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿವೆ. 47 ದೇಶಗಳು ವೀಸಾ ಆನ್ ಅರೈವಲ್ ಹಾಗೂ 66 ರಾಷ್ಟ್ರಗಳು ಇ-ವೀಸಾ ಸೌಲಭ್ಯ ಒದಗಿಸುತ್ತಿವೆ.
ವಿದೇಶ ಉದ್ಯೋಗಿಗಳಿಗೆ ವಿಶೇಷ ನೆರವು
2022ರ ಅಕ್ಟೋಬರ್‌ನಲ್ಲಿ ಆರಂಭವಾದ eMigrate 2.0 ಪೋರ್ಟಲ್ ಮೂಲಕ ಇದುವರೆಗೆ ಸುಮಾರು 7 ಲಕ್ಷ ಭಾರತೀಯ ಕಾರ್ಮಿಕರಿಗೆ ವಿದೇಶ ಉದ್ಯೋಗಕ್ಕಾಗಿ ವಲಸೆ ಅನುಮತಿ ನೀಡಲಾಗಿದೆ. ಜೊತೆಗೆ, ವಿದೇಶಕ್ಕೆ ತೆರಳುವ ಕಾರ್ಮಿಕರಿಗೆ ದೇಶವಾರು ಸಾಂಸ್ಕೃತಿಕ ಮಾಹಿತಿ, ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮಾರ್ಗದರ್ಶನ ನೀಡುವ ಪೂರ್ವ ತರಬೇತಿ ಕಾರ್ಯಕ್ರಮಗಳನ್ನು ಸರ್ಕಾರ ನಡೆಸುತ್ತಿದೆ. ಗಲ್ಫ್ ರಾಷ್ಟ್ರಗಳು ಹಾಗೂ ಸಿಂಗಾಪುರದಲ್ಲಿ ಸಂಕಷ್ಟದಲ್ಲಿರುವ ಭಾರತೀಯ ಮಹಿಳೆಯರಿಗೆ ಕಾನೂನು ನೆರವು ಮತ್ತು ಮಾನಸಿಕ ಸಮಾಲೋಚನೆ ಒದಗಿಸುವ ವಿಶೇಷ ಸಹಾಯ ಕೇಂದ್ರಗಳನ್ನೂ ಸರ್ಕಾರ ಆರಂಭಿಸಿದೆ.
ಸರ್ಕಾರದ ಗುರಿ
ಪಾಸ್‌ಪೋರ್ಟ್ ಕೆಲವೇ ಜನರ ಸೌಲಭ್ಯವಾಗಿರದೆ, ಕೋಟ್ಯಾಂತರ ಭಾರತೀಯರಿಗೆ ಸುಲಭವಾಗಿ ದೊರೆಯುವ ಪ್ರಯಾಣದ ದಾಖಲೆಯಾಗಿ ರೂಪಿಸುವುದು ಹಾಗೂ ಸುರಕ್ಷಿತ, ಕಾನೂನುಬದ್ಧ ಮತ್ತು ಲಾಭದಾಯಕ ಅಂತರರಾಷ್ಟ್ರೀಯ ವಲಸೆಗೆ ಉತ್ತೇಜನ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.