ನವದೆಹಲಿ: ಭಾರತೀಯ ರೈಲ್ವೆ (Indian Railways) ಪ್ರಯಾಣಿಕರಿಗೆ (Passengers) ಮತ್ತೊಂದು ಮಹತ್ವದ ಸೌಲಭ್ಯ ಲಭ್ಯವಾಗಿದೆ. ಜುಲೈ 31ರಿಂದ ದೃಢೀಕೃತ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರು IRCTC ಮೂಲಕವೇ ಟಿಕೆಟ್ ಬುಕ್ಕಿಂಗ್ ಮಾಡುವಾಗ ಹೆಚ್ಚುವರಿ ವೈಯಕ್ತಿಕ ಲಗೇಜ್ (Excess Personal Luggage) ಅನ್ನು ಆನ್‌ಲೈನ್ನಲ್ಲೇ ಬುಕ್ ಮಾಡಬಹುದಾಗಿದೆ.ಇದುವರೆಗೆ ಉಚಿತ ಮಿತಿಗಿಂತ ಹೆಚ್ಚು ಲಗೇಜ್ ಸಾಗಿಸುವವರು ರೈಲು ನಿಲ್ದಾಣದ ಪಾರ್ಸೆಲ್ ಕಚೇರಿಗೆ ತೆರಳಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಲಗೇಜ್ ತೂಕ ಪರಿಶೀಲನೆ ಮಾಡಿಸಿ, ಶುಲ್ಕ ಪಾವತಿಸಬೇಕಾಗಿತ್ತು.
ಹೊಸ ವ್ಯವಸ್ಥೆಯಿಂದ ಈ ಪ್ರಕ್ರಿಯೆ ಬಹುತೇಕ ಆನ್‌ಲೈನ್‌ನಲ್ಲೇ ಪೂರ್ಣಗೊಳ್ಳಲಿದ್ದು, ಪ್ರಯಾಣಿಕರ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಈ ಸೌಲಭ್ಯವನ್ನು ದೃಢೀಕೃತ ಮೀಸಲು ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ನೀಡಲಾಗಿದೆ. ಅವರು ತಮ್ಮೊಂದಿಗೆ ಮೀಸಲು ಬೋಗಿಯಲ್ಲೇ ಸಾಗಿಸುವ ವೈಯಕ್ತಿಕ ಲಗೇಜ್‌ಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
ಯಾವ ವರ್ಗದಲ್ಲಿ ಎಷ್ಟು ಉಚಿತ ಲಗೇಜ್?
- AC First Class: 70 ಕೆ.ಜಿ. ಉಚಿತ, ಗರಿಷ್ಠ 150 ಕೆ.ಜಿ.
- First Class / AC 2-Tier: 50 ಕೆ.ಜಿ. ಉಚಿತ, ಗರಿಷ್ಠ 100 ಕೆ.ಜಿ.
- Sleeper Class: 40 ಕೆ.ಜಿ. ಉಚಿತ, ಗರಿಷ್ಠ 80 ಕೆ.ಜಿ.
- Second Class: 35 ಕೆ.ಜಿ. ಉಚಿತ, ಗರಿಷ್ಠ 70 ಕೆ.ಜಿ.
- AC 3-Tier, AC 3 Economy ಹಾಗೂ AC Chair Car: ಗರಿಷ್ಠ 40 ಕೆ.ಜಿ. ಮಾತ್ರ. ಈ ವರ್ಗಗಳಲ್ಲಿ ಸಾಮಾನ್ಯವಾಗಿ ಹೆಚ್ಚುವರಿ ಲಗೇಜ್ ಬುಕ್ಕಿಂಗ್‌ಗೆ ಅವಕಾಶ ಇರುವುದಿಲ್ಲ.
ಲಗೇಜ್ ಗಾತ್ರಕ್ಕೂ ಮಿತಿ
ರೈಲ್ವೆ ಬೋಗಿಗಳಲ್ಲಿ ಸಾಗಿಸಬಹುದಾದ ಲಗೇಜ್‌ನ ಗಾತ್ರಕ್ಕೂ ಮಿತಿಯನ್ನು ನಿಗದಿಪಡಿಸಲಾಗಿದೆ.
- AC 3-Tier / AC 3 Economy / AC Chair Car: 55 × 45 × 22.5 ಸೆಂ.ಮೀ.
- AC First Class / AC 2-Tier / Sleeper / General Class: 100 × 60 × 25 ಸೆಂ.ಮೀ.
ಹೆಚ್ಚುವರಿ ಲಗೇಜ್‌ಗೆ ಎಷ್ಟು ಶುಲ್ಕ?
ಉಚಿತ ಮಿತಿಯನ್ನು ಮೀರಿದ ಲಗೇಜ್‌ಗೆ ಸಾಮಾನ್ಯ ದರದ 1.5 ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಶುಲ್ಕ ₹30 ಆಗಿದ್ದು, 10 ಕೆ.ಜಿ. ತೂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕನಿಷ್ಠ 50 ಕಿ.ಮೀ. ದೂರವನ್ನು ಪರಿಗಣಿಸಿ ಶುಲ್ಕ ನಿಗದಿಯಾಗುತ್ತದೆ.
ಆನ್‌ಲೈನ್ ಬುಕ್ಕಿಂಗ್ ಹೇಗೆ?
ಪ್ರಯಾಣಿಕರು ಭಾರತೀಯ ರೈಲ್ವೆಯ ಪಾರ್ಸೆಲ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಮೂಲ ಹಾಗೂ ಗಮ್ಯ ನಿಲ್ದಾಣ, ರೈಲು ಸಂಖ್ಯೆ ಮತ್ತು ಲಗೇಜ್ ವಿವರಗಳನ್ನು ದಾಖಲಿಸಬೇಕು. ನಂತರ ಸೃಷ್ಟಿಯಾಗುವ e-Forwarding Note ಪ್ರತಿಯೊಂದಿಗೆ ಲಗೇಜ್ ಅನ್ನು ಹೊರಡುವ ರೈಲು ನಿಲ್ದಾಣದಲ್ಲಿ ಸಲ್ಲಿಸಬೇಕು. ಲಗೇಜ್ ತೂಕ ಪರಿಶೀಲಿಸಿದ ಬಳಿಕ ಅಂತಿಮ ಶುಲ್ಕವನ್ನು ಪಾವತಿಸಿದರೆ Railway Receipt (RR) ನೀಡಲಾಗುತ್ತದೆ.
SMS ಮೂಲಕ ಮಾಹಿತಿ
ಲಗೇಜ್ ಗಮ್ಯಸ್ಥಾನ ತಲುಪಿದ ಕೂಡಲೇ ಪ್ರಯಾಣಿಕರ ಮೊಬೈಲ್‌ಗೆ SMS ಮೂಲಕ ಮಾಹಿತಿ ರವಾನೆಯಾಗುತ್ತದೆ. ಜೊತೆಗೆ Track & Trace ಸೌಲಭ್ಯದ ಮೂಲಕ ಲಗೇಜ್‌ನ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದೆ. ಮೂಲ Railway Receipt (RR) ತೋರಿಸಿ ಗಮ್ಯಸ್ಥಾನದ ಪಾರ್ಸೆಲ್ ಕೌಂಟರ್‌ನಲ್ಲಿ ಲಗೇಜ್ ಪಡೆದುಕೊಳ್ಳಬಹುದು.
ರೈಲ್ವೆ ಮಂಡಳಿಯ ಸೂಚನೆಯಂತೆ CRIS ತಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಈ ಸೇವೆಯನ್ನು ದೇಶದ ಎಲ್ಲಾ ವಲಯ ರೈಲ್ವೆಗಳಲ್ಲಿ ಜುಲೈ 31ರಿಂದ ಜಾರಿಗೆ ತರಲಾಗಿದೆ. ಇದರಿಂದ ಹೆಚ್ಚುವರಿ ಲಗೇಜ್ ಹೊಂದಿರುವ ಪ್ರಯಾಣಿಕರಿಗೆ ಪಾರ್ಸೆಲ್ ಕಚೇರಿಯಲ್ಲಿ ದೀರ್ಘ ಸಮಯ ಕಾದು ಬುಕ್ಕಿಂಗ್ ಮಾಡುವ ಅಗತ್ಯ ಬಹುತೇಕ ತಪ್ಪಲಿದೆ.