ಬೆಂಗಳೂರು: 2001 ರಿಂದ 2026 ರ ನಡುವಿನ ಅವಧಿಯಲ್ಲಿ ಗುಜರಾತ್ ಹಾಗೂ ಭಾರತದಲ್ಲಿ ಜಲ ಆಡಳಿತ ವಿಕಸನಗೊಂಡ ಹಾದಿಯನ್ನು ಸಮಗ್ರವಾಗಿ ದಾಖಲಿಸಿರುವ ‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ (ಗುಜರಾತ್‌ನಿಂದ ಭಾರತಕ್ಕೆ: ಜಗತ್ತಿಗಾಗಿ ನೀರಿನ ಪಾಠಗಳು) ಎಂಬ ಶೀರ್ಷಿಕೆಯ ನೂತನ ಅಧ್ಯಯನ ವರದಿಯನ್ನು ನಗರದ ಪ್ರತಿಷ್ಠಿತ ಐಐಎಂ ಬೆಂಗಳೂರು ಕ್ಯಾಂಪಸ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್) ರಾಷ್ಟ್ರಗಳ ನೀತಿ ನಿರೂಪಕರು ಹಾಗೂ ಕ್ಷೇತ್ರ ಕಾರ್ಯಕರ್ತ ರಿಗೆ ಭಾರತದ ಅನುಭವದಿಂದ ದಕ್ಕಿದ ಮಹತ್ವದ ಪಾಠಗಳನ್ನು ಈ ವರದಿಯು ಮುಂದಿಟ್ಟಿದೆ.
ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್ ಡಬ್ಲ್ಯು. ಸ್ಮಿತ್, ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್ ವಾಟರ್ (ಸಿಇಇಡಬ್ಲ್ಯೂ) ಫೆಲೋ ನಿತಿನ್ ಬಸ್ಸಿ ಹಾಗೂ ಭಾರತ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರು ಜಂಟಿಯಾಗಿ ಈ ಮಹತ್ವದ ಅಧ್ಯಯನವನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರ ನೇತೃತ್ವದಲ್ಲಿ ಆರಂಭವಾದ 25 ವರ್ಷಗಳ ಪಯಣವನ್ನು ಈ ಅಧ್ಯಯನವು ದಾಖಲಿಸಿದೆ. ಆ ಸಮಯದಲ್ಲಿ ನಿರಂತರ ಬರಗಾಲ ಮತ್ತು ನೀರಿನ ತೀವ್ರ ಅಭಾವವು ಬೃಹತ್ ಪ್ರಮಾಣದ ಮೂಲಸೌಕರ್ಯ, ಅಂತರ್ಜಲ ಮರು ಪೂರಣ, ಜಲ ಸಂರಕ್ಷಣೆ, ಸುಧಾರಿತ ನೀರಿನ ಬಳಕೆಯ ದಕ್ಷತೆ, ಸಾಂಸ್ಥಿಕ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವದ ಸಮನ್ವಯಕ್ಕೆ ನಾಂದಿ ಹಾಡಿತು. 2001 ರಿಂದ 2014 ರವರೆಗೆ ಗುಜರಾತ್‌ನಲ್ಲಿ ಕೈಗೊಂಡ ಜಲ ಆಡಳಿತ ಸುಧಾರಣೆಗಳು, ನಂತರ 2014 ರ ಬಳಿಕ ರಾಷ್ಟ್ರಮಟ್ಟ ದಲ್ಲಿ ವಿಸ್ತರಿಸಲಾದ ನೀತಿ ಮತ್ತು ವಿಧಾನಗಳಿಗೆ ಒಂದು ರೀತಿಯಲ್ಲಿ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸಿದವು ಎಂದು ವರದಿ ಬಣ್ಣಿಸಿದೆ.
ಈ ಆಡಳಿತಾತ್ಮಕ ಪರಿವರ್ತನೆಯ ಪ್ರಮಾಣವು ಹಣಕಾಸಿನ ಹೂಡಿಕೆ ಹಾಗೂ ಸಾರ್ವಜನಿಕರಿಗೆ ಸಿಕ್ಕ ಸೌಲಭ್ಯ ಎರಡರಲ್ಲೂ ಎದ್ದು ಕಾಣುತ್ತದೆ. ಒಕ್ಕೂಟ ಸರ್ಕಾರದ ಒಟ್ಟು ಬಜೆಟ್‌ನಲ್ಲಿ 2001-02 ರಲ್ಲಿ ಜಲ ವಲಯಕ್ಕೆ ಮೀಸಲಿದ್ದ ಹಂಚಿಕೆ ಕೇವಲ ಶೇ. 0.8 ರಷ್ಟಿತ್ತು, ಅದು 2025-26 ರ ಸಾಲಿಗೆ ಶೇ. 2.2 ಕ್ಕೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದು ಈ ಅಧ್ಯಯನದ ಪ್ರಮುಖ ಸಂಶೋಧನೆಗಳಲ್ಲಿ ಒಂದಾಗಿದೆ.
ಇನ್ನು, 2000 ನೇ ಇಸವಿಗೆ ಹೋಲಿಸಿದರೆ, ಇಂದು ದೇಶದ ಗ್ರಾಮೀಣ ಭಾಗದಲ್ಲಿ ಬರೋಬ್ಬರಿ 46.4 ಕೋಟಿಗೂ (464 ಮಿಲಿಯನ್) ಹೆಚ್ಚು ಜನರು ಸುರಕ್ಷಿತ ಹಾಗೂ ವ್ಯವಸ್ಥಿತ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ಜತೆಗೆ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಪ್ರಮಾಣವು 2019 ರಲ್ಲಿ ಶೇ. 17 ರಷ್ಟಿದ್ದುದು 2026 ರ ಹೊತ್ತಿಗೆ ಶೇ. 80 ಕ್ಕಿಂತಲೂ ಅಧಿಕ ಮಟ್ಟಕ್ಕೆ ತಲುಪಿದೆ.
ಗುಜರಾತ್ ಕೈಗೊಂಡ ಪರಿಹಾರ ಕಾರ್ಯಗಳಲ್ಲಿ ನರ್ಮದಾ ಆಧಾರಿತ ಬೃಹತ್ ವಾಟರ್ ಗ್ರಿಡ್, ವಾಸ್ಮೊ ನಂತಹ ಸಂಸ್ಥೆಗಳು ಮತ್ತು ಗ್ರಾಮ ಮಟ್ಟದ ಪಾನಿ ಸಮಿತಿಗಳು ಪ್ರಮುಖ ಪಾತ್ರ ವಹಿಸಿದವು; ಇದರೊಂದಿಗೆ ಬೃಹತ್ ಪ್ರಮಾಣದ ಜಲ ಸಂರಕ್ಷಣೆ ಹಾಗೂ ಅಂತರ್ಜಲ ಮರು ಪೂರಣ ಕಾರ್ಯಗಳೂ ಜೊತೆಗೂಡಿದವು.
2013 ರ ವೇಳೆಗೆ, ಸರ್ದಾರ್ ಪಟೇಲ್ ಜಲ ಸಂರಕ್ಷಣಾ ಯೋಜನೆಯಡಿಯಲ್ಲಿ ರಾಜ್ಯವೊಂದರಲ್ಲೇ 76,000 ಕ್ಕೂ ಹೆಚ್ಚು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿತ್ತು. ಈ ಯಶಸ್ವಿ ಅನುಭವದ ಸೂತ್ರಗಳೇ ಮುಂದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್, ಜಲ್ ಶಕ್ತಿ ಅಭಿಯಾನ, ನಮಾಮಿ ಗಂಗೆ, ಅಟಲ್ ಭೂಜಲ್ ಯೋಜನೆ, ಪರ್ ಡ್ರಾಪ್ ಮೋರ್ ಕ್ರಾಪ್ ಹಾಗೂ ಅಮೃತ್ ಮುಂತಾದ ರಾಷ್ಟ್ರೀಯ ಯೋಜನೆಗಳಿಗೆ ಅಡಿಪಾಯ ಒದಗಿಸಿದವು ಎಂದು ಅಧ್ಯಯನ ವಿಶ್ಲೇಷಿಸಿದೆ. 2019 ರಲ್ಲಿ ಕೇಂದ್ರ ಜಲ ಶಕ್ತಿ ಸಚಿವಾಲಯದ ಉದಯವು ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲಸಂಪನ್ಮೂಲ ನಿರ್ವಹಣೆಗೆ ಏಕೀಕೃತ ಸಾಂಸ್ಥಿಕ ಬಲವನ್ನು ನೀಡಿತು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕೇಂದ್ರ ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಅಶೋಕ್ ಕೆ. ಮೀನಾ ಅವರು, "ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೀರನ್ನು ಖಾತರಿಪಡಿಸುವುದು ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ. ಬಲಿಷ್ಠ ಸಂಸ್ಥೆಗಳು, ನಿರಂತರ ಬಂಡವಾಳ ಹೂಡಿಕೆ ಹಾಗೂ ಗ್ರಾಮ ಪಂಚಾಯತ್ ಮಾಲೀಕತ್ವದ ಬೆಂಬಲದೊಂದಿಗೆ ನೀರು ಜನರ ಆಂದೋಲನವಾಗಿ ರೂಪು ಗೊಂಡಾಗ, ವ್ಯಾಪಕ ಮಟ್ಟದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂಬುದೇ ನಮಗೆ ಸದಾ ದೊರೆತ ಮುಖ್ಯ ಪಾಠ.
ಒಂದು ರಾಜ್ಯದಲ್ಲಿ ಮೊಳಕೆಯೊಡೆದ ಈ ಪರಿಕಲ್ಪನೆ ಇಂದು ರಾಷ್ಟ್ರೀಯ ಬದ್ಧತೆಯಾಗಿ ಪರಿವರ್ತನೆಗೊಂಡಿದೆ. ದೇಶದ ಪ್ರತಿಯೊಂದು ಮನೆಗೂ ಸುರಕ್ಷಿತ ಹಾಗೂ ವಿಶ್ವಾಸಾರ್ಹ ನೀರು ತಲುಪುವವರೆಗೂ ನಮ್ಮ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿ ದರು.
ನೀರಿನ ಭದ್ರತೆಯು ಕೇವಲ ಎಂಜಿನಿಯರಿಂಗ್ ಸವಾಲಷ್ಟೇ ಅಲ್ಲ, ಅದು ಆಡಳಿತಾತ್ಮಕ ಸವಾಲೂ ಹೌದು ಎಂಬುದು ಈ ಅಧ್ಯಯನದ ಕೇಂದ್ರ ತೀರ್ಮಾನವಾಗಿದೆ. ಯಾವುದೇ ಭೌತಿಕ ಮೂಲ ಸೌಕರ್ಯವು ಯಶಸ್ವಿಯಾಗಬೇಕಾದರೆ 4ಪಿ ಸೂತ್ರಗಳಾದ- ರಾಜಕೀಯ ನಾಯಕತ್ವ (ಪೊಲಿಟಿಕಲ್ ಲೀಡರ್ ಶಿಪ್), ಸಾರ್ವಜನಿಕ ಹಣಕಾಸು (ಪಬ್ಲಿಕ್ ಫೈನಾನ್ಸಿಂಗ್), ಸಹಭಾಗಿತ್ವ/ ಪಾಲುದಾರಿಕೆ (ಪಾರ್ಟನರ್ ಶಿಪ್) ಮತ್ತು ಸಾರ್ವಜನಿಕರ ಸಹಭಾಗಿತ್ವ (ಪೀಪಲ್ಸ್ ಪಾರ್ಟಿಸಿ ಪೇಷನ್) ಇವುಗಳ ಬಲವಾದ ಬೆಂಬಲ ಅತ್ಯಗತ್ಯ ಎಂದು ವರದಿ ಹೇಳಿದೆ. ಈ ಪಾಠಗಳ ಬೀಜಗಳನ್ನು 2001 ರಲ್ಲಿ ಗುಜರಾತ್‌ನಲ್ಲಿ ಬಿತ್ತಲಾಯಿತು ಮತ್ತು ನಂತರ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸಲಾಯಿತು.
ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಹಾಗೂ ವರದಿಯ ಸಹ-ಲೇಖಕ ಪರಮೇಶ್ವರನ್ ಅಯ್ಯರ್ ಮಾತನಾಡಿ, "ಇಂತಹ ಬೃಹತ್ ಪ್ರಮಾಣದಲ್ಲಿ ನೀರನ್ನು ಪೂರೈಸುವುದು ಕೆಲವು ಅಂಶಗಳನ್ನು ನಿರಂತರವಾಗಿ ಜಾರಿಗೆ ತರುವುದರ ಮೇಲೆ ನಿಂತಿದೆ, ಅವುಗಳೆಂದರೆ ದೃಢ ರಾಜಕೀಯ ನಾಯಕತ್ವ ಮತ್ತು ಆದ್ಯತೆ, ಸ್ಪಷ್ಟ ಹೊಣೆಗಾರಿಕೆ ಹೊಂದಿರುವ ಸಾಂಸ್ಥಿಕ ವ್ಯವಸ್ಥೆ ಹಾಗೂ ತಮ್ಮ ಜಲ ಮೂಲಗಳ ಸರಬರಾಜನ್ನು ತಾವೇ ಮುನ್ನಡೆಸುವ ಸಮುದಾಯಗಳು" ಎಂದು ಅಭಿಪ್ರಾಯಪಟ್ಟರು.
ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತಾಪಿಸಿರುವ ವರದಿಯು, ವಿಶ್ವಾಸಾರ್ಹ ಸೇವಾ ಪೂರೈಕೆ, ನೀರಿನ ಗುಣಮಟ್ಟ, ಜಲ ಮೂಲಗಳ ಸುಸ್ಥಿರತೆ, ಅಂತರ್ಜಲ ಮರುಪೂರಣ, ಜಲ ಬಳಕೆಯ ದಕ್ಷತೆ ಹಾಗೂ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವೃತ್ತಾಕಾರದ ಜಲ ಆರ್ಥಿಕತೆಯ ಮೂಲಕ ಭಾರತದ ಈವರೆಗಿನ ಸಾಧನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ವಿಪುಲ ಅವಕಾಶ ಗಳಿವೆ ಎಂದು ಬೆಟ್ಟು ಮಾಡಿದೆ.
ಐಐಎಂ ಬೆಂಗಳೂರಿನ ಸಾರ್ವಜನಿಕ ನೀತಿ ಕೇಂದ್ರದ (ಸಿಪಿಪಿ) ಅಧ್ಯಕ್ಷರು, ಹಿರಿಯ ಫೆಲೋ ಹಾಗೂ ಜಲ್ ಜೀವನ್ ಮಿಷನ್ ಚೇರ್ ಪ್ರೊಫೆಸರ್ ಆದ ಪ್ರೊಫೆಸರ್ ಗೋಪಾಲ್ ನಾಯ್ಕ್ ಮಾತನಾಡಿ, "ಈ ಮಹತ್ವದ ಅಧ್ಯಯನ ವರದಿಯ ಲೋಕಾರ್ಪಣೆಗೆ ಆತಿಥ್ಯ ವಹಿಸಿರುವುದು ಐಐಎಂ ಬೆಂಗಳೂರಿಗೆ ಹೆಮ್ಮೆಯ ವಿಷಯ. ಬೃಹತ್ ಪ್ರಮಾಣದಲ್ಲಿ ನೀರು ಒದಗಿಸುವುದು ಒಂದು ಸವಾಲಾದರೆ, ಅದನ್ನು ನಿರಂತರವಾಗಿ ಸುಸ್ಥಿರವಾಗಿಡುವುದು ಮತ್ತೊಂದು ದೊಡ್ಡ ಸವಾಲು. ಈ ವರದಿಯು ಗುಜರಾತ್ ಹಾಗೂ ಸಮಗ್ರ ಭಾರತದ 25 ವರ್ಷಗಳ ಅನುಭವಗಳನ್ನು ಒಂದೆಡೆ ಸೇರಿಸಿ, ಯಾವುದು ಯಶಸ್ವಿಯಾಗಿದೆ ಮತ್ತು ಮುಂದಿನ ಹೆಜ್ಜೆ ಏನಿರಬೇಕು ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಆಡಳಿತ, ಸಮುದಾಯದ ಮಾಲೀಕತ್ವ ಹಾಗೂ ಮಹತ್ವಾಕಾಂಕ್ಷೆಯ ಕುರಿತಾದ ಇದರ ಪಾಠಗಳು ಅತ್ಯಂತ ಪ್ರಾಯೋಗಿಕವಾಗಿವೆ. ಜಲ ವ್ಯವಸ್ಥೆಯನ್ನು ನಿರ್ಮಿಸುವುದು ಒಂದು ಹಂತವಾದರೆ, ಅದನ್ನು ಸುಸ್ಥಿರವಾಗಿ ಮುನ್ನಡೆಸುವುದು ಇನ್ನೊಂದು ಹಂತ. 25 ವರ್ಷಗಳ ಪುರಾವೆಗಳು ಯಾವುದು ದೀರ್ಘಕಾಲ ಬಾಳಿಕೆ ಬಂತು ಮತ್ತು ಏಕೆ ಎಂಬುದನ್ನು ಪರಾಮರ್ಶಿಸಲು ನಮಗೆ ನೆರವಾಗುತ್ತವೆ" ಎಂದರು.
ಸಿಇಇಡಬ್ಲ್ಯೂ ಫೆಲೋ ಹಾಗೂ ಸಹ-ಲೇಖಕ ಡಾ.ನಿತಿನ್ ಬಸ್ಸಿ ಮಾತನಾಡಿ, "ಭಾರತದ ಜಲ ಭದ್ರತೆಯ ಮುಂದಿನ ಹಂತವು ವೃತ್ತಾಕಾರದ ಜಲ ಆರ್ಥಿಕತೆಗೆ ಆದ್ಯತೆ ನೀಡುವುದನ್ನು ಒಳಗೊಂಡಿರಲಿದೆ. ಇದರಲ್ಲಿ ಸಂಸ್ಕರಿಸಿದ ಬಳಕೆಯಾದ ನೀರಿನ ಗರಿಷ್ಠ ಹಾಗೂ ಸೂಕ್ತ ಮರು ಬಳಕೆಯು ಸೇರಿದ್ದು, ಇದು ಆರ್ಥಿಕವಾಗಿಯೂ ಅತ್ಯಂತ ಮಹತ್ವದ ಅವಕಾಶವಾಗಿದೆ" ಎಂದು ಹೇಳಿದರು.
ಜಾಗತಿಕ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉಪಯುಕ್ತವಾಗುವಂತೆ ಭಾರತದ ಅನುಭವ ವನ್ನು ಈ ಅಧ್ಯಯನವು ನಾಲ್ಕು ಮುಖ್ಯ ಪಾಠಗಳಾಗಿ ತಿಳಿಸಿದೆ: ಕೇವಲ ಭೌತಿಕ ಹಾರ್ಡ್‌ವೇರ್‌ಗಿಂತ ಆಡಳಿತಕ್ಕೆ ಮುಂಚೂಣಿ ಆದ್ಯತೆ ನೀಡಿ, ಜಲಸಂಪನ್ಮೂಲ ಹಾಗೂ ಜಲ ಸೇವೆ -ಎರಡನ್ನೂ ಒಟ್ಟಾಗಿ ನಿರ್ವಹಿಸಿ, ಯೋಜನೆಗಳಲ್ಲಿ ಸಮುದಾಯದ ಮಾಲೀಕತ್ವವನ್ನು ಬೇರೂರಿಸಿ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿ, ಹಣಕಾಸು ಹಾಗೂ ಆಡಳಿತಾತ್ಮಕ ದಕ್ಷತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪಲು ದೊಡ್ಡ ಮಟ್ಟದಲ್ಲಿ ಮುನ್ನಡೆಯಿರಿ.
ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ-ಲೇಖಕ ಡೇನಿಯಲ್ ಡಬ್ಲ್ಯು. ಸ್ಮಿತ್ ಮಾತನಾಡಿ, "ಭಾರತದ ಜಲ ಪಯಣವು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲೂ ಅಮೂಲ್ಯ ಪಾಠಗಳನ್ನು ಒದಗಿಸುತ್ತದೆ. ಬೃಹತ್ ಪ್ರಮಾಣದಲ್ಲಿ ಜಲ ಭದ್ರತೆ ಸಾಧಿಸಲು ಬಲಿಷ್ಠ ಜಲ ಆಡಳಿತ ವ್ಯವಸ್ಥೆ ಅನಿವಾರ್ಯ ಎಂಬುದೇ ಇದರ ಕೇಂದ್ರ ಸಂದೇಶ. ಸಾರ್ವತ್ರಿಕ ಹಾಗೂ ಸುಸ್ಥಿರ ಜಲ ಭದ್ರತೆಯ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಜಗತ್ತಿನ ನಾನಾ ರಾಷ್ಟ್ರಗಳು ಈ ಆಡಳಿತಾತ್ಮಕ ಪಾಠಗಳಿಂದ ಕಲಿಯಬಹುದು ಮತ್ತು ತಮ್ಮದೇ ಆದ ದೇಶೀಯ ಸನ್ನಿವೇಶಗಳಿಗೆ ತಕ್ಕಂತೆ ಇವುಗಳನ್ನು ಅಳವಡಿಸಿಕೊಳ್ಳಬಹುದು" ಎಂದು ಅಭಿಪ್ರಾಯಪಟ್ಟರು.
ವರದಿ ಬಿಡುಗಡೆಯ ಬಳಿಕ ಐಐಎಂ ಬೆಂಗಳೂರಿನ ಪ್ರೊಫೆಸರ್ ಗೋಪಾಲ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಪ್ಯಾನೆಲ್ ಡಿಸ್ಕಷನ್ ನಡೆಯಿತು. ಇದರಲ್ಲಿ ವರದಿಯ ಲೇಖಕರು, ಜಲ ತಜ್ಞರು ಹಾಗೂ ನೀತಿ ನಿರೂಪಕರು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.
ವಿಶಾಲವಾದ ಗ್ರಾಮೀಣ ಜನಸಂಖ್ಯೆ, ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳು, ಹವಾಮಾನ ವೈವಿಧ್ಯತೆ ಹಾಗೂ ಬೃಹತ್ ಅಭಿವೃದ್ಧಿ ಆಕಾಂಕ್ಷೆಗಳನ್ನು ಹೊಂದಿರುವ ಭಾರತದ ಜಲ ಅನುಭವವು, ಪ್ರಾಯೋಗಿಕ ಪಾಠಗಳು ಮತ್ತು ಕಾರ್ಯತಂತ್ರಗಳ ಸಮೃದ್ಧ ಗಣಿಯಾಗಿದೆ. ಇತರ ದೇಶಗಳು ತಮ್ಮದೇ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಇವುಗಳನ್ನು ಅಳವಡಿಸಿಕೊಳ್ಳಲು ಹಾಗೂ ಅಭಿವೃದ್ಧಿಪಡಿಸಲು ಸಾಧ್ಯವಿದ್ದು, ಜಾಗತಿಕ ದಕ್ಷಿಣದ ದೇಶಗಳಿಗೆ ಭಾರತದ ಪಯಣ ಅತ್ಯಂತ ಪ್ರಸ್ತುತವಾಗಿದೆ ಎಂದು ವರದಿ ಸಾರಿದೆ.
‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ ಅಧ್ಯಯನ ವರದಿಯನ್ನು ಡೇನಿಯಲ್ ಡಬ್ಲ್ಯು. ಸ್ಮಿತ್, ನಿತಿನ್ ಬಸ್ಸಿ ಮತ್ತು ಪರಮೇಶ್ವರನ್ ಅಯ್ಯರ್ ಅವರು ರಚಿಸಿದ್ದು, ಜಾರ್ಜ್ ಮೇಸನ್ ವಿಶ್ವವಿದ್ಯಾಲಯ ಹಾಗೂ ಗೇಟ್ಸ್ ಫೌಂಡೇಶನ್ ಜಂಟಿಯಾಗಿ ಪ್ರಕಟಿಸಿವೆ.