ನವದೆಹಲಿ: ನೇಪಾಳದಲ್ಲಿ (Nepal) ಉಂಟಾದ ಉದ್ವಿಗ್ನತೆ ಕಡಿಮೆಯಾಗತೊಡಗಿದ್ದು ಇಂಡಿಗೋ (Indigo Flight) ಗುರುವಾರ ನೇಪಾಳದ ರಾಜಧಾನಿ ಕಠ್ಮಂಡುವಿಗೆ (Kathmandu Flights) ದೈನಂದಿನ ವಿಮಾನಗಳನ್ನು ಪುನರಾರಂಭಿಸಿದೆ. ಸರ್ಕಾರದಿಂದ ಅನುಮೋದನೆ ಪಡೆದ ಬಳಿಕ ಗ್ರಾಹಕರನ್ನು ಭಾರತಕ್ಕೆ ಮರಳಿ ಕರೆತರಲು ವಿಮಾನಯಾನ ಸಂಸ್ಥೆಯು ಎರಡು ವಿಶೇಷ ವಿಮಾನಗಳ ಹಾರಾಟ ಪ್ರಾರಂಭಿಸಿದೆ. ಬಜೆಟ್ ವಿಮಾನಯಾನ ಸಂಸ್ಥೆ ಇಂಡಿಗೋ ಗುರುವಾರ ನೇಪಾಳದ ರಾಜಧಾನಿ ಕಠ್ಮಂಡುವಿಗೆ ದೈನಂದಿನ ವಿಮಾನಗಳನ್ನು ಪುನರಾರಂಭಿಸಿದೆ.
ಗ್ರಾಹಕರನ್ನು ಭಾರತಕ್ಕೆ ಮರಳಿ ಕರೆತರಲು ವಿಮಾನಯಾನ ಸಂಸ್ಥೆಯು ಎರಡು ವಿಶೇಷ ವಿಮಾನಗಳನ್ನು ನಿರ್ವಹಿಸಲಿದೆ. ಟಿಕೆಟ್ ವಿಶೇಷ ದರ ಇರಲಿದೆ.
ಇಂಡಿಗೋ ಕಠ್ಮಂಡುವಿಗೆ ಮತ್ತು ಅಲ್ಲಿಂದ ಭಾರತಕ್ಕೆ ಗುರುವಾರ ನಾಲ್ಕು ದೈನಂದಿನ ನಿಗದಿತ ವಿಮಾನಗಳನ್ನು ಪುನರಾರಂಭಿಸಿದೆ. ಗ್ರಾಹಕರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಮೀಸಲಾಗಿರುವ ಎರಡು ವಿಶೇಷ ಪರಿಹಾರ ವಿಮಾನಗಳು ಒಂದೇ ದಿನ ಕಾರ್ಯನಿರ್ವಹಿಸಲಿದೆ ಎಂದು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ರಾಜಕೀಯ ಬಿಕ್ಕಟ್ಟಿನ ಬಳಿಕ ಕಠ್ಮಂಡುವಿಗೆ ಸ್ಥಗಿತಗೊಂಡಿದ್ದ ಎಲ್ಲ ಇಂಡಿಗೋ ಸೇವೆಗಳು ಎರಡು ದಿನಗಳ ಅನಂತರ ಮತ್ತೆ ಆರಂಭವಾಗಿದೆ. ಕೇಂದ್ರ ಸರ್ಕಾರವು ಬುಧವಾರ ಮತ್ತು ಗುರುವಾರ ನವದೆಹಲಿಯಿಂದ ನೇಪಾಳಕ್ಕೆ ಹೆಚ್ಚುವರಿ ವಿಮಾನಗಳ ವ್ಯವಸ್ಥೆ ಮಾಡಿದೆ. ವಿಮಾನಯಾನ ಸಂಸ್ಥೆಗಳು ತಮ್ಮ ಊರಿಗೆ ತೆರಳುವ ಪ್ರಯಾಣಿಕರಿಗೆ ಸಹಾಯ ಮಾಡಲು ಅತ್ಯಂತ ಕನಿಷ್ಠ ದರಗಳನ್ನು ನಿಗದಿಪಡಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ನೇಪಾಳದಲ್ಲಿ ವಿಮಾನ ನಿಲ್ದಾಣ ಮುಚ್ಚಿದ್ದರಿಂದ ಮನೆಗೆ ಮರಳುವ ಅನೇಕ ಪ್ರಯಾಣಿಕರು ಕಠ್ಮಂಡುವಿನಿಂದ ಹಿಂತಿರುಗಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Earthquake: ಕಲಬುರಗಿಯಲ್ಲಿ 2.3 ರಿಕ್ಟರ್ ಅಳತೆಯ ಭೂಕಂಪ
ನೇಪಾಳ ಸರ್ಕಾರವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಷೇಧ ಹೇರಿದ ಬಳಿಕ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸೋಮವಾರ ಉಂಟಾದ ಹಿಂಸಾತ್ಮಕ ಘಟನೆಯಲ್ಲಿ ಸುಮಾರು 19 ಮಂದಿ ಸಾವನ್ನಪ್ಪಿದ್ದರು. ದೇಶಾದ್ಯಂತ ನೂರಾರು ಜನರು ಗಾಯಗೊಂಡಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ.