ನವದೆಹಲಿ, ನ. 28: ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಾಸವಿದ್ದ ಅಧಿಕೃತ ನಿವಾಸವನ್ನು ದೆಹಲಿ ಸರ್ಕಾರ ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಐಷಾರಾಮಿ ವಸ್ತುಗಳ ದರಪಟ್ಟಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಂಗಲೆಯ ಹೊರಗೆ ಅಳವಡಿಸಲಾಗಿರುವ ಫಲಕದಲ್ಲಿ ಇದನ್ನು ಶೀಶ್ ಮಹಲ್ ಎಂದು ಹೆಸರಿಸಲಾಗಿದೆ. ಫಲಕದ ಪ್ರಕಾರ ನಿವಾಸದ ಒಟ್ಟು ವೆಚ್ಚ 58 ಕೋಟಿ ರೂಪಾಯಿ ( 58,83,66,314 ರೂ.) ಎಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ ಬಂಗಲೆಯ ವಿವಿಧ ಭಾಗಗಳ ಮತ್ತು ವಸ್ತುಗಳ ಬೆಲೆಗಳ ವಿವರಗಳನ್ನು ಸಹ ಫಲಕಗಳ ಮೂಲಕ ಪ್ರದರ್ಶಿಸಲಾಗಿದೆ.
ʼʼಸರ್ಕಾರಿ ಆಸ್ತಿ ಮೇಲೆ ಸಾರ್ವಜನಿಕರ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬುದನ್ನು ಜನರಿಗೆ ತೋರಿಸುವುದೇ ಈ ನಿವಾಸವನ್ನು ತೆರೆಯುವ ಉದ್ದೇಶವಾಗಿದೆʼʼ ಎಂದು ದೆಹಲಿ ಸಚಿವ ಪರ್ವೇಶ್ ವರ್ಮಾ ಹೇಳಿದ್ದಾರೆ. ಸರ್ಕಾರಿ ವಾಹನ ಅಥವಾ ಬಂಗಲೆ ಬಳಸುವುದಿಲ್ಲ ಎನ್ನುತ್ತಿದ್ದ ಕೇಜ್ರಿವಾಲ್ 56 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಜನರು ಸಾಯುತ್ತಿದ್ದಾಗ ಈ ಬಂಗಲೆ ನವೀಕರಣ ಮಾಡಲಾಯಿತು ಎಂದೂ ಅವರು ಟೀಕಿಸಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಜನರ ವೀಕ್ಷಣೆಗೂ ಇದನ್ನು ತೆರೆಯುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಶೀಶ್ ಮಹಲ್ ವಿಡಿಯೊ ನೋಡಿ:
ಶೀಶ್ ಮಹಲ್ನಲ್ಲಿ ಏನಿದೆ?
ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿರುವ ಈ ಬಂಗಲೆಯಲ್ಲಿ ಎಂಟು ಬೆಡ್ರೂಮ್ಗಳು, 12 ಶೌಚಾಲಯಗಳು, ಜಾಕೂಜಿ ಬಾತ್, ಸ್ಪಾ, ಐದು OLED ಟಿವಿಗಳು ಸೇರಿ ಹಲವು ಸೌಲಭ್ಯಗಳಿವೆ. ಸರಳ ಜೀವನ ತೋರಿಸಲು ಕೇಜ್ರಿವಾಲ್ ಫೇಸ್ಬುಕ್ ಲೈವ್ ಮಾಡುತ್ತಿದ್ದ ಕೊಠಡಿಯನ್ನೂ ತೋರಿಸಿದ ಸಚಿವ ವರ್ಮಾ, ಹರಿದ ಸೀಟಿನ ಮರದ ಕುರ್ಚಿಯೊಂದನ್ನು ಪ್ರದರ್ಶಿಸಿ ವ್ಯಂಗ್ಯವಾಡಿದ್ದಾರೆ.
ಈ ವೀಕ್ಷಣಾ ಪ್ರವಾಸದ ವೇಳೆ ಸೆರೆಹಿಡಿಯಲಾದ ಚಿತ್ರಗಳು ಮತ್ತು ವಿಡಿಯೊಗಳು, ಅಲ್ಲಿರುವ ಬಿಳಿ ಅಮೃತಶಿಲೆಯ ದೇವಾಲಯದತ್ತ ಎಲ್ಲರ ಗಮನ ಸೆಳೆದಿವೆ. ಈ ದೇವಾಲಯದಲ್ಲಿ ಹಿಂದೂ ದೇವತೆಗಳಾದ ಶಿವ ಮತ್ತು ದುರ್ಗಾ ದೇವಿಯರ ಜತೆಗೆ ಯೇಸು ಕ್ರಿಸ್ತನ ಚಿತ್ರವೂ ಕಂಡುಬಂದಿದೆ.
ಬಂಗಲೆಯಲ್ಲಿನ ದುಬಾರಿ ವಸ್ತುಗಳು
- 11.56 ಲಕ್ಷ ರೂ. ಮೌಲ್ಯದ ತೂಗು ದೀಪ (Chandelier)
- 5.47 ಲಕ್ಷ ರೂ. ಬೆಲೆಯ ಸೋಫಾ
- 5.58 ಲಕ್ಷ ರೂ. ವೆಚ್ಚದ ಕುರ್ಚಿಗಳು
- 6.79 ಲಕ್ಷ ರೂ. ಮೌಲ್ಯದ ಸೆಂಟ್ರಲ್ ಟೇಬಲ್
- 5.69 ಲಕ್ಷ ರೂ. ಬೆಲೆಯ ಕರ್ಟನ್ಗಳು (ಪರದೆಗಳು)
- 8 ಬೆಡ್ರೂಮ್ಗಳು, 12 ಶೌಚಾಲಯಗಳು, ಬಾತ್, ಸ್ಪಾ, ದುಬಾರಿ ಕಾರ್ಪೆಟ್ಗಳು ಹಾಗೂ 5 ಒಎಲ್ಇಡಿ (OLED) ಟಿವಿಗಳು.
- 7.02 ಲಕ್ಷ ರೂ. ಮೌಲ್ಯದ ಆಹಾರ ಸಾಗಿಸಲು ಲಿಫ್ಟ್
ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆ
ಬಜೆಟ್ಗಿಂತ 342% ಹೆಚ್ಚು ಖರ್ಚು
ದೆಹಲಿ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (CAG) ವರದಿಯ ಪ್ರಕಾರ, ಕೇಜ್ರಿವಾಲ್ ಅವರ ಹಿಂದಿನ ಅಧಿಕೃತ ನಿವಾಸದ ನವೀಕರಣ ಕಾಮಗಾರಿಗೆ ಅಂದಾಜು ವೆಚ್ಚಕ್ಕಿಂತ ಶೇಕಡಾ 342ರಷ್ಟು ಹೆಚ್ಚು, ಅಂದರೆ 33.66 ಕೋಟಿ ರೂ. ಖರ್ಚಾಗಿದೆ. ಒಟ್ಟು 33.66 ಕೋಟಿ ರೂ. ಪೈಕಿ 18.88 ಕೋಟಿ ರೂ.ಗಳನ್ನು ಕಲಾತ್ಮಕ, ಪುರಾತನ ಮತ್ತು ಅಲಂಕಾರಿಕ ವಸ್ತುಗಳಿಗೆ ವ್ಯಯಿಸಲಾಗಿದೆ ಎಂದು ವರದಿ ಉಲ್ಲೇಖಿಸಿದ್ದು, ಕ್ಯಾಂಪ್ ಕಚೇರಿ ಹಾಗೂ ಸಿಬ್ಬಂದಿ ಬ್ಲಾಕ್ನಲ್ಲಾದ ಬದಲಾವಣೆಗಳಲ್ಲೂ ಹಲವು ಅಕ್ರಮಗಳನ್ನು ಪಟ್ಟಿ ಮಾಡಿದೆ.
ಸಾರ್ವಜನಿಕ ವೀಕ್ಷಣೆಗೆ 20 ರೂ. ಟಿಕೆಟ್
ಇದು ಮಾಧ್ಯಮಗಳ ಭೇಟಿ ಹಾಗೂ ಶನಿವಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ನಂತರ, ಸಾರ್ವಜನಿಕರಿಗೆ ಬಂಗಲೆ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಸಾಮಾನ್ಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಹಿರಿಯ ನಾಗರಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಬಂಗಲೆ ಅಭಿವೃದ್ಧಿ
2020ರ ಕೋವಿಡ್ ಸಮಯದಲ್ಲಿ ಈ ಹಳೆಯ ಬಂಗಲೆಯ ಚಾವಣಿಯ ಭಾಗ ಕುಸಿದಿದ್ದರಿಂದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಕೇವಲ ದುರಸ್ತಿಯ ಬದಲು ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಂಗಲೆಯನ್ನು ಅರಮನೆಯಂತೆ ಮರುನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ಬಂಗಲೆಯ ನವೀಕರಣಕ್ಕೆ ವಿದೇಶದಿಂದ ತರಿಸಿದ ದುಬಾರಿ ಅಮೃತಶಿಲೆ, ಲಕ್ಷಾಂತರ ರೂಪಾಯಿ ಬೆಲೆಯ ಸ್ವಯಂಚಾಲಿತ ಪರದೆಗಳು, ದುಬಾರಿ ಬೆಲೆಯ ತೂಗುದೀಪ, ಐಷಾರಾಮಿ ಒಳಾಂಗಣ ವಿನ್ಯಾಸಗಳನ್ನು ಬಳಸಲಾಗಿದೆ
ಆರಂಭದಲ್ಲಿ 7.91 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲು ಕೇಜ್ರಿವಾಲ್ ಸರ್ಕಾರ ಮುಂದಾಗಿತ್ತು. ಆದರೆ ಬಳಿಕ ಅಲಂಕಾರಿಕ ಮತ್ತು ಪುರಾತನ ಶೈಲಿಯ ವಸ್ತುಗಳಿಗೆ 18.88 ರೂ. ಕೋಟಿ ಖರ್ಚು ಮಾಡಲಾಗಿತ್ತು. ಆರಂಭದಲ್ಲಿ 45 ಕೋಟಿ ರೂ. ಎಂದು ಹೇಳಲಾಗಿದ್ದರೂ, ನಂತರದ ಪಿಡಬ್ಲ್ಯುಡಿ (PWD) ಮಾಹಿತಿಗಳ ಪ್ರಕಾರ ಒಟ್ಟು ಐಷಾರಾಮಿ ನವೀಕರಣಕ್ಕೆ 56 ಕೋಟಿಯಿಂದ 58.83 ಕೋಟಿ ರೂ. ವೆಚ್ಚ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು.