ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಹಿಂದೂಗಳ ಸಂಭ್ರಮಾಚರಣೆ
Karthigai Deepam: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಗಾಗಿ ನೇಮಿಸಿದ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರು ಈ ಸಮಯದಲ್ಲಿ ಹಾಜರಿದ್ದರು.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ (Karthigai Deepam) ಇಂದು ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ. ಸಂಜೆ ಸರಿಯಾಗಿ 5 ಗಂಟೆಗೆ ದೀಪತೂಣ್ ಕಂಬದ ಮೇಲೆ ದೀಪ ಹಚ್ಚಲಾಯಿತು. ದೀಪ ಬೆಳಗಿಸುವ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ನೇತೃತ್ವದಲ್ಲಿ ಅರ್ಚಕರು ಬೆಟ್ಟದ ಮೇಲಕ್ಕೆ ತೆರಳಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಕಳೆದ ನವೆಂಬರ್ 20ರಂದು ದೀಪತೂಣ್ ಕಂಬದ ಮೇಲೆ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ ನವೆಂಬರ್ 24ರಂದು ನಡೆದ ವಾರ್ಷಿಕ ಕಾರ್ತಿಕ ದೀಪೋತ್ಸವದಂದು ಅಲ್ಲಿ ದೀಪ ಬೆಳಗದೆ, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿ ದೀಪ ಬೆಳಗಲಾಗಿತ್ತು.ಇದಾದ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ರಿಸೀವರ್‌ಗಳನ್ನು ನೇಮಿಸಿತ್ತು.
ಇಂದು ದೀಪ ಬೆಳಗಿಸಲು 30 ಕೆಜಿ ತುಪ್ಪ, 50 ಮೀಟರ್ ಹತ್ತಿಯ ಬತ್ತಿ ಮತ್ತು 5 ಕೆಜಿ ಕರ್ಪೂರವನ್ನು ಬಳಸಲಾಯಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಬೆಟ್ಟದ ತುದಿಗೆ ಬಿಗಿ ಭದ್ರತೆ ಒದಗಿಸಿದ್ದರು ಮತ್ತು ಕೇವಲ 50 ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿ 'ವೆಟ್ರಿವೇಲ್ ಮುರುಗನುಕ್ಕು ಅರೋಹರ' ಎಂಬ ಘೋಷಣೆಗಳೊಂದಿಗೆ ದೀಪವನ್ನು ಕಣ್ತುಂಬಿಕೊಂಡರು.