ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಅಸ್ಸಲಾಮ್‌ ಅಲೈಕುಮ್’ ಹೇಳಿದ ಐಪಿಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ; ಪಶ್ಚಿಮ ಬಂಗಾಳದಲ್ಲಿ ಚರ್ಚೆಗೆ ಗ್ರಾಸವಾಯ್ತು ಬುಷ್ರಾ ಬಾನು ಪ್ರಕರಣ

Bushra Bano: ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ಬುಷ್ರಾ ಬಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯುಪಿಎಸ್‌ಸಿ ಕುರಿತ ವಿಡಿಯೊದಲ್ಲಿ ‘ಅಸ್ಸಲಾಮು ಅಲೈಕುಮ್’, ‘ಇನ್‌ಶಾ ಅಲ್ಲಾ’ ಸೇರಿದಂತೆ ಕೆಲವು ಪದಗಳನ್ನು ಬಳಸಿದ್ದ ವಿಚಾರ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಅವರನ್ನು ಮತ್ತೊಂದು ಹುದ್ದೆಗೆ ವರ್ಗಾವಣೆ ಮಾಡಿದೆ. ಆದರೆ ವರ್ಗಾವಣೆ ಆದೇಶದಲ್ಲಿ ಕಾರಣವಾಗಿ ‘ಸಾರ್ವಜನಿಕ ಹಿತಾಸಕ್ತಿ’ ಎಂದು ಮಾತ್ರ ಉಲ್ಲೇಖಿಸಲಾಗಿದೆ. ವಿಡಿಯೊ ವಿವಾದವೇ ವರ್ಗಾವಣೆಗೆ ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.

ಐಪಿಎಸ್ ಅಧಿಕಾರಿ ಬುಷ್ರಾ ಬಾನು (ಸಂಗ್ರಹ ಚಿತ್ರ)

ಕೋಲ್ಕತ್ತಾ, ಸೆ. 17: ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ಬುಷ್ರಾ ಬಾನು (Bushra Bano) ಅವರ ವರ್ಗಾವಣೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಯುಪಿಎಸ್‌ಸಿ ಪರೀಕ್ಷೆಗೆ ತಾವು ನಡೆಸಿದ ಸಿದ್ಧತೆ ಹಾಗೂ ನಾಗರಿಕ ಸೇವೆಗೆ ಬಂದ ತಮ್ಮ ಪಯಣದ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ‘ಅಸ್ಸಲಾಮು ಅಲೈಕುಮ್’, ‘ಇನ್‌ಶಾ ಅಲ್ಲಾ’ ಹಾಗೂ ‘ಜಝಾಕಲ್ಲಾ’ ಎಂಬ ಪದಗಳನ್ನು ಬಳಸಿದ್ದರು. ಈ ವಿಡಿಯೊ ವೈರಲ್‌ ಆದ ಬಳಿಕ ಬಳಿಕ ಕೆಲವು ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ್ದವು ಎಂದು ವರದಿಯಾಗಿದೆ.

2021ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬುಷ್ರಾ ಬಾನು ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರ ವಹಿಸಿಕೊಂಡ ಸುಮಾರು ಎರಡೂವರೆ ತಿಂಗಳಲ್ಲೇ ಅವರನ್ನು ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ 4ನೇ ಬೆಟಾಲಿಯನ್‌ನ ಡೆಪ್ಯುಟಿ ಕಮಾಂಡೆಂಟ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಸೆಪ್ಟೆಂಬರ್ 14ರಂದು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ವರ್ಗಾವಣೆಗೆ ‘ಸಾರ್ವಜನಿಕ ಹಿತಾಸಕ್ತಿ’ ಕಾರಣ ಎಂದು ಉಲ್ಲೇಖಿಸಲಾಗಿದೆ.

ಐಪಿಎಸ್ ಅಧಿಕಾರಿ ಬುಷ್ರಾ ಬಾನು ಅವರ ವಿವಾದಾತ್ಮಕ ವಿಡಿಯೊ:



ಬುಷ್ರಾ ಬಾನು ತಮ್ಮ ವಿಡಿಯೊದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡೆಮಿ (RCA) ತಮ್ಮ ಯುಪಿಎಸ್‌ಸಿ ಸಿದ್ಧತೆಯಲ್ಲಿ ನೆರವಾದ ಕುರಿತು ವಿವರಿಸಿದ್ದರು. ಇಂತಹ ತರಬೇತಿ ಕೇಂದ್ರಗಳ ಪ್ರಯೋಜನ ಪಡೆದು ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವೆಗೆ ಬರಬೇಕು ಎಂದು ಅವರು ಹೇಳಿದ್ದರು.

ವಿಡಿಯೊ ವೈರಲ್ ಆದ ಬಳಿಕ ಕೆಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅವರ ಧಾರ್ಮಿಕ ಅಭಿವ್ಯಕ್ತಿಗಳ ಕುರಿತು ಪ್ರಶ್ನೆಗಳು ಕೇಳಿಬಂದವು. ಸೇವೆಯಲ್ಲಿರುವ ಅಧಿಕಾರಿಗಳು ಸಾರ್ವಜನಿಕವಾಗಿ ಮಾತನಾಡುವಾಗ ತಟಸ್ಥತೆಯನ್ನು ಕಾಪಾಡಬೇಕು ಎಂಬ ವಾದವೂ ಎದ್ದಿದೆ. ಈ ಸಂಬಂಧ ಹಿಂದೂ ಲೀಗಲ್ ಫಂಡ್ ಎಂಬ ಸಂಘಟನೆ ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.

ತೆಲಂಗಾಣ, ಕರ್ನಾಟಕ ಮೂಲದ ಇಬ್ಬರು ಗಲ್ಫ್ ರಾಷ್ಟ್ರಗಳಲ್ಲಿ ಅರೆಸ್ಟ್‌: ಇವರು ಎಸಗಿದ ಅಪರಾಧವೇನು?

ವರ್ಗಾವಣೆ ಆದೇಶದಲ್ಲಿ ವಿಡಿಯೊ ಅಥವಾ ಅದರ ಕುರಿತಾದ ವಿವಾದವನ್ನು ಕಾರಣವಾಗಿ ಉಲ್ಲೇಖಿಸಲಾಗಿಲ್ಲ. ಸರ್ಕಾರದ ಪರವಾಗಿ ಅಧಿಕಾರಿಯೊಬ್ಬರು ಇದು ಸಾಮಾನ್ಯ ಆಡಳಿತಾತ್ಮಕ ವರ್ಗಾವಣೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷದ ನಾಯಕರು ವರ್ಗಾವಣೆಯನ್ನು ವೀಡಿಯೊ ವಿವಾದಕ್ಕೆ ಸಂಬಂಧಿಸಿ ಪ್ರಶ್ನಿಸಿದ್ದಾರೆ.

ಬುಷ್ರಾ ಬಾನು ಉತ್ತರ ಪ್ರದೇಶದ ಕನ್ನೌಜ್ ಮೂಲದವರಾಗಿದ್ದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲ ವರ್ಷ ಕೆಲಸ ಮಾಡಿದ ಬಳಿಕ ನಾಗರಿಕ ಸೇವೆಗೆ ಸಿದ್ಧತೆ ನಡೆಸಿ 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಐಪಿಎಸ್‌ಗೆ ಸೇರ್ಪಡೆಯಾದರು.