ಟೆಹರಾನ್: ಮಧ್ಯಪ್ರಾಚ್ಯದಲ್ಲಿಉದ್ವಿಗ್ನತೆಯ ನಡುವೆಯೂ ಜಾಗತಿಕ ಇಂಧನ ಪೂರೈಕೆಯ ಆಯಕಟ್ಟಿನ ಮಾರ್ಗವಾಗಿರುವ ‘ಹಾರ್ಮೊಜ್ ಜಲಸಂಧಿ’ಯಲ್ಲಿ (Strait of Hormuz) ಭಾರತೀಯ ವಾಣಿಜ್ಯ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಇರಾನ್ (Iran) ಅವಕಾಶ ಕಲ್ಪಿಸಿದೆ. ಭಾರತ ಮಾತ್ರವಲ್ಲದೇ ಚೀನಾ, ಇರಾಕ್ ಮತ್ತು ಕತಾರ್ ದೇಶಗಳ ಹಡಗುಗಳಿಗೂ ಅವಕಾಶ ನೀಡಲಾಗಿದೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್ ಮೊಕದ್ದಮ್ ಅವರು ಮಂಗಳವಾರ ಈ ಘೋಷಣೆಯನ್ನು ಮಾಡಿದರು. ಇರಾನ್ನ ಈ ಮಹತ್ವದ ನಿರ್ಧಾರದಿಂದಾಗಿ ಭಾರತೀಯ ತೈಲ ಟ್ಯಾಂಕರ್ಗಳು ಮತ್ತು ಸರಕು ಸಾಗಣೆ ಹಡಗುಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಬಹುದಾಗಿದೆ. ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದಾಗಿ ಇರಾನ್ ಜಾಗತಿಕ ಮಾರುಕಟ್ಟೆಯಿಂದ ಅಗತ್ಯ ವಸ್ತುಗಳನ್ನು ಪಡೆಯಲು ತೀವ್ರ ತೊಂದರೆ ಎದುರಿಸುತ್ತಿದೆ.
ವಿಶ್ವದ ಪ್ರಮುಖ ಔಷಧ ಉತ್ಪಾದನಾ ರಾಷ್ಟ್ರವಾಗಿರುವ ಭಾರತದಿಂದ ತನಗೆ ಬೇಕಾದ ಅಗತ್ಯ ಜೀವರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉತ್ಪನ್ನಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳುವ ಸ್ವಹಿತಾಸಕ್ತಿಯಿಂದ ಇರಾನ್ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಮತ್ತೊಂದೆಡೆ, ರಾಜತಾಂತ್ರಿಕ ಬೆಂಬಲಕ್ಕಾಗಿ ಚೀನಾಗೂ ಈ ವಿನಾಯಿತಿ ನೀಡಲಾಗಿದೆ.
ಭಾರತಕ್ಕೆ ಏಕೆ ಇದು ಅತ್ಯಂತ ಪ್ರಮುಖ?
ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 45 ರಷ್ಟು ಭಾಗ ಈ ಮಾರ್ಗದ ಮೂಲಕವೇ ಬರುತ್ತದೆ. ದೇಶಕ್ಕೆ ಆಮದಾಗುವ ಎಲ್ಪಿಜಿ (LPG) ಅನಿಲದ ಸುಮಾರು ಶೇಕಡಾ 90 ರಷ್ಟು ಪಾಲು ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಕತಾರ್ ಮತ್ತು ಯುಎಇ ದೇಶಗಳಿಂದ ಭಾರತಕ್ಕೆ ಬರುವ ಒಟ್ಟು ಎಲ್ಎನ್ಜಿ (LNG) ಆಮದಿನ ಮೂರನೇ ಎರಡರಷ್ಟು ಭಾಗ ಈ ಜಲಮಾರ್ಗವನ್ನೇ ಅವಲಂಬಿಸಿದೆ.
ಹಾರ್ಮೊಜ್ ಜಲಸಂಧಿಯ ಮಹತ್ವವೇನು?
ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಹಾರ್ಮೊಜ್ ಜಲಸಂಧಿಯು ವಿಶ್ವದ ಅತ್ಯಂತ ಸೂಕ್ಷ್ಮ ಜಲಮಾರ್ಗಗಳಲ್ಲಿ ಒಂದಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಶೇಕಡಾ 20 ಕ್ಕಿಂತಲೂ ಹೆಚ್ಚು ಭಾಗ ಇದೇ ಮಾರ್ಗದ ಮೂಲಕ ಹಾದುಹೋಗುತ್ತದೆ. ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಈ ಜಲಮಾರ್ಗವನ್ನೇ ಬಹುವಾಗಿ ಆಯ್ಕೆ ಮಾಡಿಕೊಂಡಿದೆ. ಇರಾನ್ನ ಈ ನಿರ್ಧಾರದಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ಇಂಧನ ದರ ಸ್ಥಿರತೆಗೆ ನೆರವಾಗಲಿದ್ದು, ದೇಶದ ಆಮದು ವಲಯಕ್ಕೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಂತಾಗಿದೆ. ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಭಾರತೀಯ ನೌಕಾಪಡೆಯು ಸಹ ಈ ಭಾಗದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.