ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್‌ ಜಲಸಂಧಿ ದಾಟಲು ಭಾರತ ಪಾವತಿಸುವ ಟೋಲ್‌ ಮೊತ್ತ ಎಷ್ಟು? ಸಂದೇಹಕ್ಕೆ ಕೇಂದ್ರದಿಂದ ಸ್ಪಷ್ಟನೆ

Strait of Hormuz: ಪಶ್ವಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ ಹೊರ್ಮುಜ್‌ ಮೇಲಿನ ಹಿಡಿತ ಇನ್ನೂ ಸಡಿಲಗೊಳಿಸಿಲ್ಲ. ಈ ಮಧ್ಯೆ ಇರಾನ್‌ ಟೋಲ್‌ ವ್ಯವಸ್ಥೆ ಜಾರಿಗೊಳಿಸಿದೆ ಎನ್ನಲಾಗಿದ್ದು, ಭಾರತದ ಹಡಗುಗಳು ಇದುವರೆಗೆ ಎಷ್ಟು ಮೊತ್ತ ಪಾವತಿಸಿದೆ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಇದಕ್ಕೆ ಇದೀಗ ಕೇಂದ್ರ ಉತ್ತರಿಸಿದೆ.

ಹೊರ್ಮುಜ್‌ ಜಲಸಂಧಿ (ಸಂಗ್ರಹ ಚಿತ್ರ)

ದೆಹಲಿ, ಏ. 2: ಫೆಬ್ರವರಿ 28ರಂದು ಇಸ್ರೇಲ್‌ ಮತ್ತು ಅಮೆರಿಕ ಸೇನೆ ಇರಾನ್‌ ಮೇಲೆ ಜಂಟಿಯಾಗಿ ದಾಳಿ ನಡೆಸುವ ಮೂಲಕ ಆರಂಭವಾದ ಯುದ್ಧ 1 ತಿಂಗಳು ಕಳೆದರೂ ತಣ್ಣಗಾಗಿಲ್ಲ. ಸದ್ಯಕ್ಕಂತೂ ಪಶ್ಚಿಮ ಏಷ್ಯಾದಲ್ಲಿ ಹರಡಿರುವ ಸಂಘರ್ಷದ ವಾತಾವರಣ ತಿಳಿಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಅದರ ಬದಲಾಗಿ ದಾಳಿ-ಪ್ರತಿದಾಳಿ ಮತ್ತಷ್ಟು ತೀವ್ರವಾಗುತ್ತಿದ್ದು, ಜಗತ್ತಿಗೆ ವ್ಯಾಪಿಸುವ ಭೀತಿ ಉದ್ಭವವಾಗಿದೆ. ತನ್ನ ಮೇಲಿನ ದಾಳಿಯಿಂದ ಕೆರಳಿರುವ ಇರಾನ್‌ ಜಗತ್ತಿನ ಪ್ರಮುಖ ಇಂಧನ ಸಾಗಾಟ ಮಾರ್ಗ ಹೊರ್ಮುಜ್‌ ಜಲಸಂಧಿಯನ್ನು (Strait of Hormuz) ಮುಚ್ಚಿದೆ. ಇದು ಭಾರತ ಸೇರಿದಂತೆ ಇಂಧನ ಆಮದುದಾರ ದೇಶಗಳನ್ನು ಸಂಕಷ್ಟಕ್ಕೆ ತಳ್ಳಿದೆ. ಅದಾಗ್ಯೂ ಇರಾನ್‌ ಭಾರತದ ಹಡಗುಗಳ ಸಾಗಾಟಕ್ಕೆ ಅನುಮತಿ ನೀಡುತ್ತಿದ್ದು, ಒಂದೊಂದಾಗಿಯೇ ನಮ್ಮ ಕರಾವಳಿ ತೀರದತ್ತ ಬರುತ್ತಿವೆ. ಈ ಮಧ್ಯೆ ಇರಾನ್‌ ಹೊರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ವ್ಯವಸ್ಥೆ ಪರಿಚಯಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಭಾರತದ ಹಡಗುಗಳು ಇದುವರೆಗೆ ಎಷ್ಟು ಟೋಲ್‌ ಪಾವತಿಸಿವೆ ಎನ್ನುವ ಪ್ರಶ್ನೆಗೆ ಇದೀಗ ಕೇಂದ್ರ ಉತ್ತರಿಸಿದೆ.

ʼʼಟೋಲ್‌ ಶುಲ್ಕದ ಬಗ್ಗೆ ಇದುವರೆಗೆ ಇರಾನ್‌ ನಮ್ಮೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲʼʼ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ʼʼಹೊರ್ಮುಜ್‌ ಜಲಸಂಧಿ ದಾಟಿ ಬಂದ ಭಾರತದ ಧ್ವಜ ಹೊಂದಿರುವ ಹಡಗು ಮತ್ತು ಭಾರತೀಯರ ಹಡಗು ಇದುವರೆಗೆ ಯಾವುದೇ ರೀತಿಯ ಟೋಲ್‌ ಪಾವತಿಸಿಲ್ಲʼʼ ಎಂದು ಹೇಳಿದೆ.

ರಣಧೀರ್ ಜೈಸ್ವಾಲ್ ಹೇಳಿಕೆ:



ಗುರುವಾರ (ಏಪ್ರಿಲ್‌ 2) ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಇರಾನ್‌ ಜತೆಗೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇರಾನ್ ಜೊತೆಗಿನ ಯುದ್ಧ ಯಾವಾಗ ಕೊನೆಯಾಗುತ್ತೆ? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಸುರಕ್ಷಿತವಾಗಿ ದಾಟಿದ ಭಾರತ 6 ಹಡಗುಗಳು

ಎಲ್‌ಪಿಜಿ, ಎಲ್‌ಎನ್‌ಜಿಯನ್ನು ಹೊತ್ತ ಭಾರತದ 6 ಹಡಗುಗಳು ಇದೀಗ ಸುರಕ್ಷಿತವಾಗಿ ಹೊರ್ಮುಜ್‌ ಜಲಸಂಧಿ ದಾಟಿವೆ ಎಂದು ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಜತೆಗೆ ಇರಾನ್‌ ಜತೆಗೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ ಹೇಳಿದ್ದಾರೆ.

ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿರುವ ಭಾರತೀಯ ಧ್ವಜ ಹೊತ್ತ 18 ಹಡಗುಗಳ ಸಂಚಾರವನ್ನು ತ್ವರಿತಗೊಳಿಸಲು ಭಾರತ ಸರ್ಕಾರ ಇರಾನ್ ಮತ್ತು ಇತರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದೆಯೇ ಎಂದು ಕೇಳಿದಾಗ ಉತ್ತರಿಸಿದ ಜೈಸ್ವಾಲ್, "ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಇಂಧನಗಳನ್ನು ಹೊತ್ತ ನಮ್ಮ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ನಾವು ಇರಾನ್ ಮತ್ತು ಇತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ'' ಎಂದಿದ್ದಾರೆ. ʼʼಹೊರ್ಮುಜ್‌ ಜಲಸಂಧಿ ಸಮಸ್ಯೆ ಬಗ್ಗೆ ಚರ್ಚಿಸಲು ಇಂಗ್ಲೆಂಡ್‌ ನೇತೃತ್ವದಲ್ಲಿ 35 ದೇಶಗಳ ಸಭೆ ನಡೆದಿದ್ದು, ಭಾರತವೂ ಇದರಲ್ಲಿ ಭಾಗವಹಿಸಿದೆʼʼ ಎಂದು ತಿಳಿಸಿದ್ದಾರೆ.

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತರಾಗಿದ್ದಾರೆ; ಸಂಘರ್ಷದ ನಡುವೆಯೂ ಇರಾನ್ ಅಭಯ

ಭಾರತವನ್ನು ಮಿತ್ರ ರಾಷ್ಟ್ರ ಎಂದಿದ್ದ ಇರಾನ್‌

ಹೊರ್ಮುಜ್‌ ಜಲಸಂಧಿ ಬಿಕ್ಕಟ್ಟು ಬಗ್ಗೆ ಕಳೆದ ತಿಂಗಳು ಪ್ರತಿಕ್ರಿಯಿಸಿದ್ದ ಇರಾನ್‌, ಭಾರತ ಸೇರಿ 5 ಮಿತ್ರ ರಾಷ್ಟ್ರಗಳಿಗೆ ಯಾವುದೇ ರೀತಿಯ ತಡೆ ಒಡ್ಡುವುದಿಲ್ಲ ಎಂದು ಘೋಷಿಸಿತ್ತು. ಈ ದೇಶಗಳಿಗೆ ಹೊರ್ಮುಜ್‌ ಜಲಸಂಧಿ ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿತ್ತು. ಈ ವಿಚಾರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಇರಾನ್‌ ಜತೆ ಮಾತುಕತೆಯನ್ನೂ ನಡೆಸಿದ್ದಾರೆ. ಜತೆಗೆ ಗರುವಾರ ಹೊರ್ಮುಜ್ ಜಲಸಂಧಿಯ ಬಗ್ಗೆ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್ ಹೇಳಿದೆ. ʼʼನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸಬೇಡಿʼʼ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಗುರುವಾರ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author