ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತರಾಗಿದ್ದಾರೆ; ಸಂಘರ್ಷದ ನಡುವೆಯೂ ಇರಾನ್ ಅಭಯ

Strait of Hormuz: ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸಬೇಡಿ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಗುರುವಾರ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ. ವಿಶ್ವದ ಶೇ. 20ರಷ್ಟು ಇಂಧನವನ್ನು ಸಾಗಿಸುವ ಹಡಗು ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತದೆ. ಫೆಬ್ರವರಿ ಅಂತ್ಯಕ್ಕೆ ಸಂಘರ್ಷ ಪ್ರಾರಂಭವಾದಾಗಿನಿಂದ, ಇರಾನ್ ಕೆಲವೇ ಹಡಗುಗಳಿಗೆ ಮಾತ್ರ ಅದನ್ನು ದಾಟಲು ಅವಕಾಶ ನೀಡಿದೆ.

ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ ಎಂದ ಇರಾನ್

ಸಾಂದರ್ಭಿಕ ಚಿತ್ರ -

Priyanka P
Priyanka P Apr 2, 2026 5:33 PM

ನವದೆಹಲಿ, ಏ. 2: ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ದಾಳಿ ಮಾಡಿದ ನಂತರ ಅಸ್ತವ್ಯಸ್ತಗೊಂಡ ಪ್ರಮುಖ ಹಡಗು ಮಾರ್ಗ ಹೊರ್ಮುಜ್ ಜಲಸಂಧಿಯ (Strait of Hormuz) ಬಗ್ಗೆ ತನ್ನ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್ (Iran) ಹೇಳಿದೆ. ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸಬೇಡಿ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಗುರುವಾರ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ. ಆ ಮೂಲಕ ಭಾರತೀಯರಿಗೆ ಕೊಂಚ ಮಟ್ಟಿನ ರಿಲೀಫದದ ಸಿಕ್ಕಂತಾಗಿದೆ.

ವಿಶ್ವದ ಶೇ. 20ರಷ್ಟು ಇಂಧನವನ್ನು ಸಾಗಿಸುವ ಹಡಗು ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತದೆ. ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಇರಾನ್ ಕೆಲವೇ ಹಡಗುಗಳಿಗೆ ಮಾತ್ರ ಅದನ್ನು ದಾಟಲು ಅವಕಾಶ ನೀಡಿದೆ.

ಇಲ್ಲಿದೆ ಪೋಸ್ಟ್:



ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಹೊರ್ಮುಜ್ ಮೂಲಕ ಹಾದುಹೋಗಲು ಅವಕಾಶ ನೀಡಿರುವುದಾಗಿ ಇರಾನ್ ಹೇಳಿದೆ. ಅದಾಗ್ಯೂ ಈ ದಿಗ್ಬಂಧನವು ಭಾರತ ಸೇರಿ ಹಲವು ದೇಶಗಳಿಗೆ ಇಂಧನ ಪೂರೈಕೆಯಲ್ಲಿ ತೀವ್ರ ಅಡಚಣೆಗಳನ್ನುಂಟುಮಾಡಿದೆ.

ಹೊರ್ಮುಜ್‌ನಿಂದ 8 ಭಾರತೀಯ ಹಡಗುಗಳು ನಿರ್ಗಮಿಸಿವೆ

ಇಲ್ಲಿಯವರೆಗೆ ಕನಿಷ್ಠ 8 ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯಿಂದ ನಿರ್ಗಮಿಸಿ ಭಾರತಕ್ಕೆ ತಲುಪಿದೆ, ಪ್ರಯಾಣ ಬೆಳೆಸಿದೆ. ಇವುಗಳಲ್ಲಿ ಎರಡು ಎಲ್‌ಪಿಜಿ ವಾಹಕಗಳಾದ ಬಿಡಬ್ಲ್ಯು ಟಿವೈಆರ್ ಮತ್ತು ಬಿಡಬ್ಲ್ಯು ಇಎಂಎಂ ಸೇರಿದೆ. ಇವು ಸುಮಾರು 94,000 ಟನ್‌ಗಳಷ್ಟು ಎಲ್‌ಪಿಜಿ ಸರಕುಗಳನ್ನು ಸಾಗಿಸುತ್ತಿವೆ. ಭಾರತಕ್ಕೆ ಎಲ್‌ಪಿಜಿ, ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ಸಾಗಿಸುತ್ತಿದ್ದ 19 ಹಡಗುಗಳು ಪ್ರಸ್ತುತ ಹೊರ್ಮುಜ್‌ನಲ್ಲಿ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಜೊತೆಗಿನ ಯುದ್ಧ ಯಾವಾಗ ಕೊನೆಯಾಗುತ್ತೆ? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಮಾರ್ಚ್ 30ರಂದು ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳ ಪರಿಣಾಮಗಳ ಕುರಿತು ದೆಹಲಿಯಲ್ಲಿ ನಡೆದ ಅಂತರ-ಸಚಿವಾಲಯದ ಮಾಹಿತಿ ಸಭೆಯಲ್ಲಿ, ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ, ಭಾರತಕ್ಕೆ ಇಂಧನ ಸರಕು ಸಾಗಿಸುತ್ತಿದ್ದ 10 ವಿದೇಶಿ ಧ್ವಜ ಹೊಂದಿರುವ ಹಡಗುಗಳು ಪ್ರಸ್ತುತ ಸಿಕ್ಕಿಹಾಕಿಕೊಂಡಿವೆ ಎಂದು ಹೇಳಿದರು. ಇವುಗಳಲ್ಲಿ ಎಲ್‌ಪಿಜಿ ಹೊಂದಿರುವ 3 ಹಡಗುಗಳು, ನಾಲ್ಕು ಕಚ್ಚಾ ತೈಲ ಟ್ಯಾಂಕರ್‌ಗಳು ಮತ್ತು ಮೂರು ದ್ರವೀಕೃತ ನೈಸರ್ಗಿಕ ಅನಿಲ (LNG) ವಾಹಕಗಳು ಸೇರಿವೆ.

ಇವುಗಳ ಜತೆಗೆ, ಭಾರತೀಯ ಧ್ವಜ ಹೊತ್ತ ಹಡಗುಗಳಿವೆ. ಇವುಗಳಲ್ಲಿ ಮೂರು ಎಲ್‌ಪಿಜಿ ಟ್ಯಾಂಕರ್‌ಗಳು, ಒಂದು ಎಲ್‌ಎನ್‌ಜಿ ವಾಹಕ ಮತ್ತು ನಾಲ್ಕು ಕಚ್ಚಾ ತೈಲ ಟ್ಯಾಂಕರ್‌ಗಳು ಸೇರಿವೆ. ಒಂದು ಖಾಲಿ ಟ್ಯಾಂಕರ್‌ಗೆ ಎಲ್‌ಪಿಜಿ ತುಂಬಿಸಲಾಗುತ್ತಿದೆ. ಸಂಘರ್ಷದ ಮಧ್ಯೆ ಕಿರಿದಾದ ಜಲಸಂಧಿಯಲ್ಲಿ ವಿವಿಧ ದೇಶಗಳ ಒಟ್ಟು 500 ಹಡಗುಗಳು ಸಿಕಿ ಹಾಕಿಕೊಂಡಿವೆ.