ಭೋಪಾಲ್, ಮೇ 2: ಮಧ್ಯಪ್ರದೇಶದ ಜಬಲ್‌ಪುರದ ಬರ್ಗಿ ಅಣೆಕಟ್ಟಿನಲ್ಲಿ (Bargi dam) ಏಪ್ರಿಲ್ 29ರಂದು ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತವು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಒಂಬತ್ತು ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ದೋಣಿಯ ಪೈಲಟ್ ಆಗಿದ್ದ ಮಹೇಶ್ ಪಟೇಲ್ (Mahesh Patel) ಈಗ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ನೀರು ದೋಣಿಯೊಳಗೆ ನುಗ್ಗಿದಾಗ ಸಾಧ್ಯವಾದಷ್ಟು ಪ್ರಯಾಣಿಕರನ್ನು ಉಳಿಸಲು ಹರಸಾಹಸ ಪಟ್ಟಿದ್ದಾಗಿ ಅವರು ಹೇಳಿದ್ದು, ಸಂಭವಿಸಿದ ಸಾವುಗಳಿಗೆ ಕ್ಷಮೆಯಾಚಿಸಿದ್ದಾರೆ.
ಪಟೇಲ್ ಅವರ ಪ್ರಕಾರ, ಖಮರಿಯಾ ದ್ವೀಪದಿಂದ ದೋಣಿ ಹೊರಟಾಗ ಹವಾಮಾನವು ಸಂಪೂರ್ಣವಾಗಿ ಸಹಜವಾಗಿತ್ತು. ಆದರೆ ಅಣೆಕಟ್ಟಿನ ಮಧ್ಯಭಾಗಕ್ಕೆ ತಲುಪುತ್ತಿದ್ದಂತೆ ದಿಢೀರ್ ಗಾಳಿಯ ವೇಗ ಮತ್ತು ಅಲೆಗಳ ಆರ್ಭಟ ಹೆಚ್ಚಾಯಿತು. "ಹವಾಮಾನ ವೈಪರೀತ್ಯದ ಬಗ್ಗೆ ನನಗೆ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನೆಗಳು ಸಿಕ್ಕಿರಲಿಲ್ಲ. ಅಲೆಗಳ ಹೊಡೆತಕ್ಕೆ ದೋಣಿ ತತ್ತರಿಸತೊಡಗಿದಾಗ, ನಾನು ದೋಣಿಯನ್ನು ದಡದತ್ತ ತಿರುಗಿಸಲು ನಿರ್ಧರಿಸಿದೆ. ಅಷ್ಟರಲ್ಲೇ ನೀರು ಕೆಳಮಟ್ಟದ ಡೆಕ್‌ಗೆ ನುಗ್ಗತೊಡಗಿತು" ಎಂದು ಅವರು ಘಟನೆಯನ್ನು ಸ್ಮರಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ತಕ್ಷಣವೇ ರಿಸೆಪ್ಷನ್ ಡೆಕ್‌ಗೆ ಕರೆ ಮಾಡಿ, ಮತ್ತೊಂದು ರಕ್ಷಣಾ ದೋಣಿಯನ್ನು ಕಳುಹಿಸುವಂತೆ ತುರ್ತು ವಿನಂತಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ಎನ್‌ಡಿಟಿವಿ ಜತೆ ಮಾತನಾಡಿದ ಮಹೇಶ್ ಪಟೇಲ್:
ಲೈಫ್ ಜಾಕೆಟ್‌ಗಳ ಬಳಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಟೇಲ್, "ಪ್ರಯಾಣಿಕರು ಆರಂಭದಲ್ಲಿ ಸಂಭ್ರಮದ ಮೂಡ್‌ನಲ್ಲಿದ್ದರು. ಅನೇಕರು ಹಾಡು, ನೃತ್ಯ ಮತ್ತು ಮೋಜು ಮಾಡುತ್ತಿದ್ದರಿಂದ ಲೈಫ್ ಜಾಕೆಟ್ ಧರಿಸಲು ನಿರಾಕರಿಸಿದ್ದರು" ಎಂದು ಹೇಳಿದ್ದಾರೆ. ಸುಮಾರು 15 ವರ್ಷಗಳ ಸುದೀರ್ಘ ಅನುಭವವಿರುವ ಪಟೇಲ್, ಎಂಜಿನ್ ಕೋಣೆಗೆ ನೀರು ನುಗ್ಗಿ ದೋಣಿಯ ನಿಯಂತ್ರಣ ತಪ್ಪಿದಾಗ ಇದು ಸಂಭವಿಸಬಾರದ ದೊಡ್ಡ ದುರಂತ ಎಂದು ಅರಿತರು. "ದೋಣಿ ಮುಳುಗುವ ಸಮಯದಲ್ಲಿ ನಾನು ಪ್ರತಿಯೊಬ್ಬರಿಗೂ ಲೈಫ್ ಜಾಕೆಟ್ ತೊಡಿಸಲು ಪ್ರಯತ್ನಿಸಿದೆ ಮತ್ತು ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಿ ಕೊನೆಯವನಾಗಿ ದೋಣಿಯಿಂದ ಹೊರಬಂದೆ" ಎಂದಿದ್ದಾರೆ.
ಜಬಲ್ಪುರ ದೋಣಿ ದುರಂತ ನಡೆದು ಎರಡು ದಿನಗಳಾದರೂ ಪತ್ತೆಯಾಗಿಲ್ಲ 6 ಮಂದಿ
ಸದ್ಯ ಕೆಲಸದಿಂದ ವಜಾಗೊಂಡಿರುವ ಇವರು, ಮಾಸಿಕ 27,000 ರುಪಾಯಿ ಸಂಬಳವನ್ನೇ ನಂಬಿದ್ದ ತನ್ನ ಕುಟುಂಬದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ನಾನು ತುಂಬಾ ನೊಂದಿದ್ದೇನೆ, ಆ ಭೀಕರ ದೃಶ್ಯಗಳು ಕಣ್ಣಮುಂದೆ ಬರುತ್ತಿವೆ. ಇದರಿಂದಾಗಿ ಸರಿಯಾಗಿ ಊಟ ಮಾಡಲು ಅಥವಾ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಪಟೇಲ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, 28 ಜನರನ್ನು ರಕ್ಷಿಸಲಾಗಿದೆ ಮತ್ತು ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದು, ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಲು ಪ್ರವಾಸೋದ್ಯಮ ಇಲಾಖೆಯ ಮೂಲಕ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ನಾಪತ್ತೆಯಾದವರಿಗಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.