Jacqueline Fernandez: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಆಘಾತ: ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಸ್ನೇಹಿತ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸೇರಿ ಅಕ್ರಮ ಹಣ ವರ್ವಾವಣೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿದ್ದ 215 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ ECIR ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಜಾಕ್ವೆಲಿನ್ -

ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರ ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ದಾಖಲಿಸಿದ 215 ಕೋಟಿ ರೂ. ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣವನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠ ಜಾಕ್ವೆಲಿನ್‌ಗೆ ಮುಂದಿನ ಕಾನೂನು ಕಾರ್ಯವಿಧಾನದ ಸೂಕ್ತ ಹಂತದಲ್ಲಿ ಕೋರ್ಟ್‌ಗೆ ಮನವಿ ಸಲ್ಲಿಸಲು ಅವಕಾಶ ನೀಡಿದೆ.
ಜಾಕ್ವೆಲಿನ್ ಅವರ ವಕೀಲ ಮುಕುಲ್ ರೋಹಟ್ಗಿ ವಾದಿಸಿ, ʼʼಅವರು ಕೇವಲ ಉಡುಗೊರೆಗಳನ್ನು ಸ್ವೀಕರಿಸಿದ್ದು, ಇದಕ್ಕೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿತ್ತು ಎಂದು ಆರೋಪಿಸಲಾಗಿದೆʼʼ ಎಂದು ವಾದಿಸಿದರು. ಆದರೆ ನ್ಯಾಯಮೂರ್ತಿ ದತ್ತಾ, “ಈ ಹಂತದಲ್ಲಿ ಆರೋಪಗಳನ್ನು ಸಾಕ್ಷ್ಯಾಧಾರಿತವಾಗಿ ಪರಿಗಣಿಸಬೇಕು. ಇನ್ನೂ ಏನೂ ಸಾಬೀತಾಗಿಲ್ಲ, ವಿಚಾರಣೆಗೆ ಮುನ್ನವೇ ಆರೋಪಗಳನ್ನು ತಿರಸ್ಕರಿಸಲಾಗದು” ಎಂದರು. “ಒಬ್ಬ ಸ್ನೇಹಿತ ಉಡುಗೊರೆ ನೀಡಿದಾಗ, ನಂತರ ಆತ ಅಪರಾಧದಲ್ಲಿ ಭಾಗಿಯಾಗಿರುವುದು ತಿಳಿದರೆ ಸಮಸ್ಯೆಯಾಗುತ್ತದೆ. ಆದರೆ ಇದು ಅರಿಯದೆ ಸ್ವೀಕರಿಸಿದ ಉಡುಗೊರೆಯ ಪ್ರಕರಣವಲ್ಲ” ಎಂಬುದನ್ನು ಕೋರ್ಟ್ ಪರಿಗಣಿಸಿದೆ.
ಇಡಿ ಆರೋಪಗಳು
2022ರ ಆಗಸ್ಟ್ ಚಾರ್ಜ್‌ಶೀಟ್‌ನಲ್ಲಿ ಜಾಕ್ವೆಲಿನ್ ಅವರನ್ನು ಸಹ-ಆರೋಪಿಯಾಗಿ ಹೆಸರಿಸಲಾಗಿದೆ. ಸುಕೇಶ್ ಚಂದ್ರಶೇಖರ್ ಎಂಬ ವಂಚಕನಿಂದ ಆಕೆಯು 7 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಭರಣ, ಬಟ್ಟೆ, ವಾಹನಗಳಂತಹ ಐಷಾರಾಮಿ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಕೇಶ್‌ನ ಅಪರಾಧ ಹಿನ್ನೆಲೆ ತಿಳಿದಿದ್ದರೂ ಆಕೆ ಈ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂದು ಇಡಿ ಹೇಳಿದೆ. ನಟಿ ಸುಕೇಶ್‌ನ ಬಂಧನದ ನಂತರ ತನ್ನ ಫೋನ್‌ನಿಂದ ಡೇಟಾವನ್ನು ಅಳಿಸಿದ್ದಾರೆ ಮತ್ತು ಆರಂಭದಲ್ಲಿ ಆರ್ಥಿಕ ವ್ಯವಹಾರಗಳ ವಿವರವನ್ನು ಮರೆಮಾಚಿದ್ದಾರೆ ಎಂದು ಇಡಿ ಆರೋಪಿಸಿದೆ.
ಹಿಂದಿನ ಕಾನೂನು ಹೋರಾಟ
ಜಾಕ್ವೆಲಿನ್ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಸುಕೇಶ್‌ನ ಅಪರಾಧದ ಹಿನ್ನೆಲೆ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ವಾದಿಸಿದ್ದಾರೆ. ಇದೇ ವರ್ಷ ಜುಲೈ 3ರಂದು ದೆಹಲಿ ಹೈಕೋರ್ಟ್ ಅವರ ಇಂತದ್ದೇ ಅರ್ಜಿಯನ್ನು ತಿರಸ್ಕರಿಸಿತ್ತು, ನಟಿ ಅಪರಾಧ ಮಾಡಿದ್ದಾರೆಯೇ ಎಂಬುದನ್ನು ವಿಚಾರಣೆಯಲ್ಲಿ ಮಾತ್ರ ನಿರ್ಧರಿಸಬಹುದು ಎಂದು ಹೇಳಿತ್ತು. ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ 215 ಕೋಟಿ ರೂ. ವಂಚನೆಯ ಆರೋಪದ ಮೇಲೆ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.