ಜೈಪುರ, ಫೆ. 15: ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಗ್ಯಾಂಗ್ ಮತ್ತೊಮ್ಮೆ ಅಟ್ಟಹಾಸ ಮೆರೆದಿದೆ. ಈ ಬಾರಿ ರಿಸೆಪ್ಷನ್ ನಡೆಯುತ್ತಿದ್ದಾಗಲೇ ಸ್ಟೇಜ್ ಮೇಲಿದ್ದ ವಧುವಿನ ಬ್ಯಾಗ್ ಅನ್ನು ಕಳ್ಳನೊಬ್ಬ ಅತ್ಯಂತ ಚಾಣಾಕ್ಷತನದಿಂದ ಕಳವು ಮಾಡಿದ್ದಾನೆ. ಆ ಬ್ಯಾಗ್‌ನಲ್ಲಿ ಸುಮಾರು 4 ಲಕ್ಷ ರುಪಾಯಿ ನಗದು ಮತ್ತು ಬೆಲೆಬಾಳುವ ಆಭರಣಗಳಿದ್ದವು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಫೆಬ್ರವರಿ 7ರಂದು ಜಗತ್‌ಪುರ ಪ್ರದೇಶದ 'ಚಂದನ್ ವನ್' ಎಂಬ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಮದುವೆಯ ಸಂಭ್ರಮ ಜೋರಾಗಿದ್ದಾಗ, ಸೂಟು-ಬೂಟು ಧರಿಸಿ ಅಚ್ಚುಕಟ್ಟಾಗಿ ಅತಿಥಿಯಂತೆ ಬಂದಿದ್ದ ಯುವಕನೊಬ್ಬ ಯಾರಿಗೂ ಸಂಶಯಬಾರದಂತೆ ವೇದಿಕೆಯ ಮೇಲೆ ಹತ್ತಿದ್ದಾನೆ. ವಧು-ವರರು ಫೋಟೊಗೆ ಫೋಸ್ ನೀಡುತ್ತಾ ನಿಂತಿದ್ದಾಗ, ಆತ ಅವರ ಹಿಂಬದಿಯಿಂದ ಬ್ಯಾಗ್ ಕಿತ್ತುಕೊಂಡು ಅದನ್ನು ಕ್ಷಣಾರ್ಧದಲ್ಲಿ ತನ್ನ ಬ್ಲೇಜರ್ ಒಳಗೆ ಅಡಗಿಸಿ ಅಲ್ಲಿಂದ ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ತನಿಖೆ ಚುರುಕು
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮದುವೆ ಮನೆಯ ಸಿಸಿಟಿವಿ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. "ಇದು ಯಾವುದೋ ಸಂಘಟಿತ ಗ್ಯಾಂಗ್‌ನ ಕೆಲಸ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಇವರು ಶ್ರೀಮಂತ ಮನೆತನದ ಮದುವೆಗಳನ್ನು ಗುರಿಯಾಗಿಸಿಕೊಂಡು, ಯಾರೂ ಗುರುತಿಸದಂತೆ ದುಬಾರಿ ಬಟ್ಟೆಗಳನ್ನು ಧರಿಸಿ ಅತಿಥಿಗಳಂತೆ ನುಗ್ಗಿ ಕೈಚಳಕ ತೋರುತ್ತಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಮೇಲೆ ನಿಗಾ ಇಡುವುದು ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಈ ಹಿಂದೆ ಆರತಕ್ಷತೆಯ ಮುಯ್ಯಿ ಹಣವಿದ್ದ ಬ್ಯಾಗ್ ಕಳ್ಳತನ ಮಾಡಿದ ಘಟನೆ ನಡೆದಿತ್ತು. ಆರತಕ್ಷತೆ ಸಂದರ್ಭದಲ್ಲಿ ಬಂಧು-ಬಳಗ, ನೆಂಟರಿಷ್ಟರು ಸೇರಿದಂತೆ ಗಣ್ಯರು ವರನಿಗೆ ಸುಮಾರು 4 ಲಕ್ಷ ರುಪಾಯಿಯಷ್ಟು ಹಣವನ್ನು ಮುಯ್ಯಿ ರೂಪದಲ್ಲಿ ಹಾಕಿದ್ದರು. ಮುಯ್ಯಿ ಹಣವಿದ್ದ ಬ್ಯಾಗ್ ಅನ್ನು ವರನ ತಂದೆ ಮನೆಗೆ ಕೊಂಡೊಯ್ಯಲು ಕಲ್ಯಾಣ ಮಂಟಪದಿಂದ ಹೊರಗೆ ಬಂದು ತಮ್ಮ ಕಾರಿನಲ್ಲಿಟ್ಟಿದ್ದರು. ಆದರೆ ಮನೆಯ ಬೀಗ ಅವರ ಪತ್ನಿಯ ಬಳಿ ಇದ್ದ ಕಾರಣ ಬೀಗದ ಕೀ ತೆಗೆದುಕೊಂಡು ಬರಲು ಒಳಗೆ ಹೋಗಿ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಹಣವಿದ್ದ ಬ್ಯಾಗ್ ಕಳವಾಗಿತ್ತು. ಆದರೆ ಕಾರಿನ ಡೋರ್ ಲಾಕ್ ಆಗಿರಲಿಲ್ಲವಂತೆ.