ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೇನೆಯಿಂದ ತಪ್ಪಿಸಿಕೊಳ್ಳಲು ತಲೆ, ಗಡ್ಡ ಬೋಳಿಸಿಕೊಂಡ ಜೈಶ್ ಕಮಾಂಡರ್‌ ಸೈಫುಲ್ಲಾ; ಮಹಿಳೆಯರ ಉಡುಪು, ಬುರ್ಖಾ ಧರಿಸಿ ಓಡಾಟ

ಜೈಶ್-ಎ-ಸಂಘಟನೆಯ ಒಬ್ಬ ಕಮಾಂಡರ್ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ರೂಪವನ್ನು ಬದಲಿಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ದಾಡಿಯನ್ನು ಕತ್ತರಿಸಿಕೊಂಡು ಗುರುತಿಸದಂತೆ ತಾನೇ ತಾನು ಮರೆಮಾಚಿಕೊಳ್ಳಲು ಯತ್ನಿಸಿರುವುದಾಗಿ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ಅವನಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.

ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೈಫುಲ್ಲಾ

ಶ್ರೀನಗರ, ಫೆ. 16: ಭದ್ರತಾ ಪಡೆಗಳು (Security Forces) ತನ್ನ ಸುತ್ತಲೂ ಮುತ್ತಿಗೆ ಹಾಕುತ್ತಿರುವುದನ್ನು ಅರಿತ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೈಫುಲ್ಲಾ (Jaish-e-Mohammed commander Saifullah) ತಪ್ಪಿಸಿಕೊಳ್ಳಲು ಓತಿಕ್ಯಾತಿಯಂತೆ ವೇಷ ಬದಲಿಸುತ್ತಿದ್ದಾನೆ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ (Intelligence Inputs) ಸೈಫುಲ್ಲಾ ಈಗ ತನ್ನ ಗಡ್ಡವನ್ನು ಬೋಳಿಸಿಕೊಂಡಿದ್ದಾನೆ ಮತ್ತು ತಲೆಯನ್ನು ಪೂರ್ಣವಾಗಿ ಶೇವ್‌ ಮಾಡಿಸಿಕೊಂಡು ಹೊಸ ರೂಪದಲ್ಲಿ ಅಡಗಿ ಕುಳಿತಿದ್ದಾನೆ.

ವೇಷಾಂತರದ ವಿಚಿತ್ರ ತಂತ್ರಗಳು

ದೋಡಾದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಮೆಹ್ತಾ ಅವರ ಪ್ರಕಾರ, ಈ ಉಗ್ರನು ಮಹಿಳೆಯರ ಉಡುಪು ಮತ್ತು ಬುರ್ಖಾಗಳನ್ನು ಧರಿಸಿ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಸಂಚು ರೂಪಿಸಿದ್ದಾನೆ. ಅಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಅವನು 'ಆಧ್ಯಾತ್ಮಿಕ ಗುರು'ವಿನಂತೆ ವೇಷ ಧರಿಸುತ್ತಿದ್ದಾನೆ ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ಸ್ಥಳೀಯರಿಂದ ಆಹಾರ ಮತ್ತು ಆಶ್ರಯ ಪಡೆಯಲು ಅವನು ಪ್ರಯತ್ನಿಸುತ್ತಿದ್ದಾನೆ.

ಪೊಲೀಸರು ಸೈಫುಲ್ಲಾನ ಹಳೆಯ ಮತ್ತು ಈಗಿನ ಸಂಭಾವ್ಯ ರೂಪದ ಎರಡು ಚಿತ್ರಗಳಿರುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಅಂತಹ ವ್ಯಕ್ತಿ ಕಂಡಲ್ಲಿ ತಕ್ಷಣ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

ತೀವ್ರಗೊಂಡ ಕಾರ್ಯಾಚರಣೆ

ಕಳೆದ ಎರಡು ತಿಂಗಳುಗಳಿಂದ ಕಿಶ್ತ್ವರ್ ಮತ್ತು ದೋಡಾ ಜಿಲ್ಲೆಗಳ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಸೈಫುಲ್ಲಾ ಮತ್ತು ಅವನ ತಂಡಕ್ಕಾಗಿ ಹುಡುಕಾಟ ನಡೆಸುತ್ತಿವೆ. ಇತ್ತೀಚೆಗೆ ಚಾಟ್ರೂ ಎಂಬಲ್ಲಿ ನಡೆದ ಎನ್ಕೌಂಟರ್‌ನಲ್ಲಿ ಸಹಚರ, ಪಾಕಿಸ್ತಾನಿ ಉಗ್ರ ಆದಿಲ್ ಹತನಾದ ನಂತರ ಸೈಫುಲ್ಲಾ ಸಂಪೂರ್ಣವಾಗಿ ಕಂಗಾಲಾಗಿದ್ದಾನೆ.

ನಮ್ಮ ಸೇನೆಯ ಬತ್ತಳಿಕೆ ಸೇರಿದ ಹ್ಯಾಮರ್ ಕ್ಷಿಪಣಿ: ಭಾರತ-ಫ್ರಾನ್ಸ್ ರಕ್ಷಣಾ ಸಹಕಾರದ ಹೊಸ ಅಧ್ಯಾಯ

ಜನವರಿ 19ರಂದು ಭದ್ರತಾ ಪಡೆಗಳು ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿ ಕಾರ್ಗಿಲ್ ಯುದ್ಧದ ಮಾದರಿಯಲ್ಲಿ ನಿರ್ಮಿಸಲಾಗಿದ್ದ ಅವನ ಬಂಕರ್ ಅನ್ನು ಪತ್ತೆಹಚ್ಚಿ ಧ್ವಂಸಗೊಳಿಸಿವೆ. ಈ ಅಡಗುತಾಣದಲ್ಲಿ ಸಂಗ್ರಹಿಸಲಾಗಿದ್ದ ಪಡಿತರ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಡಗುತಾಣ ಕಳೆದುಕೊಂಡ ನಂತರ ಸೈಫುಲ್ಲಾ ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಶಾಂತಿ ಮರಳಿಸುವ ಯತ್ನ

ಈ ಬಂದೂಕುಧಾರಿ ಭಯೋತ್ಪಾದಕರಿಂದಾಗಿ ಈ ಪ್ರದೇಶಗಳ ಜನರ ನೆಮ್ಮದಿ ಕೆಟ್ಟಿದೆ. ಆದ್ದರಿಂದ, ಸ್ಥಳೀಯರಲ್ಲಿ ಶಾಂತಿ ಮೂಡಿಸಲು ಮತ್ತು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯಲು ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿವೆ. ಸೈಫುಲ್ಲಾ ಈಗ ಎಲ್ಲಿಯೂ ಹೋಗಲಾಗದೆ ಗುಹೆಗಳಲ್ಲಿ ಅಡಗಿ ಕುಳಿತಿದ್ದಾನೆ ಎಂದು ಮೂಲಗಳು ತಿಳಿಸಿವೆ.