ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ಕದನ ವಿರಾಮದ ನಡುವೆ ದೇಶದ ಇಂಧನ ಭದ್ರತೆ ಕುರಿತ ಮಾತುಕತೆಗಾಗಿ ಯುಎಇಗೆ ತೆರಳಿದ ಜೈಶಂಕರ್

ಇರಾನ್ ಯುದ್ಧ ಪ್ರಾರಂಭವಾದ ಬಳಿಕ ವಿಶ್ವದಲ್ಲೇ ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟನ್ನು ಎದುರಿಸಿತ್ತು. ಇದರ ಪರಿಣಾಮ ಮುಂದಿನ ಹಲವಾರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ದೇಶದ ಇಂಧನ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಇದೀಗ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದ್ದಾರೆ.

ಜೈಶಂಕರ್ (ಸಂಗ್ರಹ ಚಿತ್ರ)

ನವದೆಹಲಿ: ಇಂಧನ ಭದ್ರತೆ (Energy Security) ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಸಲುವಾಗಿ ವಿದೇಶಾಂಗ ಸಚಿವ ಜೈಶಂಕರ್ (External Affairs Minister S Jaishankar) ಅವರು ಶನಿವಾರ ಅಬುಧಾಬಿಗೆ ( Abu Dhabi) ತೆರಳಿದ್ದಾರೆ. ಮಾರಿಷಸ್‌ನಿಂದ (Mauritius) ಯುಎಇಗೆ ಪ್ರಯಾಣಿಸಿರುವ ಜೈಶಂಕರ್ ಅವರು ಏಪ್ರಿಲ್ 11 ಮತ್ತು 12ರಂದು ಅಬುಧಾಬಿಯಲ್ಲಿ ಇರಲಿದ್ದಾರೆ. ಎರಡು ದಿನಗಳ ಅಧಿಕೃತ ಭೇಟಿಯ ಈ ಸಂದರ್ಭದಲ್ಲಿ ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಅವರು ದೇಶದ ಇಂಧನ ಭದ್ರತೆ, ಕಾರ್ಯತಂತ್ರದ ಪಾಲುದಾರಿಕೆ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಇರಾನ್ ಸಂಘರ್ಷದ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯು ದೇಶದ ಇಂಧನ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದನ್ನು ಪರಿಹರಿಸುವ ಹಾಗೂ ಗಲ್ಫ್‌ನಾದ್ಯಂತ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಎಸ್ ಜೈಶಂಕರ್ ಅವರು ಯುಎಇಯ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಸಂಸತ್ತಿನ ಆವರಣದಲ್ಲಿ ಪ್ರಧಾನಿ ಮೋದಿ- ರಾಹುಲ್‌ ಮುಖಾಮುಖಿ; ಸಂಭಾಷಣೆ ಹೇಗಿತ್ತು?

ಜೈಶಂಕರ್ ಅವರ ಈ ಭೇಟಿಯು ನವದೆಹಲಿಯ ವಿಶಾಲವಾದ, ಸಂಘಟಿತ ರಾಜತಾಂತ್ರಿಕ ಕಾರ್ಯಕ್ರಮದ ಭಾಗವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇತರ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಇವರಿಬ್ಬರ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ಇಂಧನ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ದೇಶದಲ್ಲಿ ಸ್ಥಿರ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಸಚಿವರಾದ ಜೈಶಂಕರ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇವರಿಬ್ಬರು ಭಾರತ ಮತ್ತು ಯುಎಇ ಸಂಬಂಧಗಳನ್ನು ಬಲಪಡಿಸಲು ಯುಎಇ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇರಾನ್ ವಿರುದ್ಧ ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಜಾಗತಿಕ ತೈಲ ಸಾಗಾಟದ ಪ್ರಮುಖ ದಾರಿಯಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ವಿಶ್ವದ ಇಂಧನ ಮಾರುಕಟ್ಟೆ ಮೇಲೆ ತೀವ್ರ ಪ್ರಭಾವ ಬೀರಿತ್ತು. ಇದರಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಂಟಾಗಿತ್ತು.

ಭಾರತೀಯ ಕರಾವಳಿ ಕಾವಲು ಪಡೆ ಶಕ್ತಿ ಹೆಚ್ಚಿಸಿದ ಎಂಕೆ 3 ಹೆಲಿಕಾಪ್ಟರ್‌

ಈ ಹಿನ್ನೆಲೆಯಲ್ಲಿ ಈಗ ನವ ದೆಹಲಿಯು ದೇಶದ ತೈಲ ಮತ್ತು ಅನಿಲ ಆಮದುಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಇತರ ದೇಶಗಳಿಗೆ ಇಂಧನ ಪೂರೈಕೆಯ ಕಾರ್ಯವನ್ನು ಕೂಡ ಮಾಡುತ್ತಿದೆ. ಎರಡು ವಾರಗಳ ಹಿಂದೆ ಕೊಲಂಬೊದ ಕೋರಿಕೆಯ ಮೇರೆಗೆ ಶ್ರೀಲಂಕಾಕ್ಕೆ 38 ಮೆಟ್ರಿಕ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ತಲುಪಿಸಲಾಗಿದೆ. ಮಾರಿಷಸ್‌ನೊಂದಿಗೆ ಕೂಡ ನವದೆಹಲಿಯು ತೈಲ ಮತ್ತು ಅನಿಲ ಪೂರೈಕೆಗಾಗಿ ಒಪ್ಪಂದ ನಡೆಸುತ್ತಿದ್ದು ಇದು ಅಂತಿಮ ಹಂತದಲ್ಲಿದೆ ಎಂದು ಜೈಸ್ವಾಲ್ ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author